ಕೊಪ್ಪಳ:ರಾಜಿ ಸಂಧಾನದ ಮೂಲಕ ರಾಜಿ ಆಗಬಹುದಾದ ಪ್ರಕರಣಗಳ ಇತ್ಯರ್ಥ ಹಾಗೂ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ರಾಷ್ಟ್ರೀಯ ಲೋಕ್ ಅದಾಲತ್ ಒಂದು ಸುವರ್ಣಾವಕಾಶವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್.ದರಗದ ಹೇಳಿದರು.
ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನ ಮಾಡಿಕೊಳ್ಳುವ ಮೂಲಕ ತಮ್ಮ ಪ್ರಕರಣ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ರಾಜಿ ಸಂಧಾನಕ್ಕಾಗಿ ಸಿವಿಲ್ ದಾವೆ, ಭೂ-ಸ್ವಾಧೀನ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಮೋಟಾರು ಅಪಘಾತ ಪರಿಹಾರ ಪ್ರಕರಣ, ವೈವಾಹಿಕ ಪ್ರಕರಣ ಹಾಗೂ ರಾಜಿ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡ ಬಲ್ ಪ್ರಕರಣ ಸೇರಿದಂತೆ ಹಲವಾರು ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ರಾಜಿ ಸಂಧಾನದಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಂಡರೆ ಪ್ರಕರಣವು ಇಬ್ಬರಿಗೂ ಒಪ್ಪಿಗೆಯಾಗುವಂತೆ ಕೊನೆಗೊಂಡು ನ್ಯಾಯಾಲಯಕ್ಕೆ ತುಂಬಿದ ನ್ಯಾಯಾಲಯ ಶುಲ್ಕ ಸಂಪೂರ್ಣವಾಗಿ ವಾಪಸ್ ನೀಡಲಾಗುವುದು. ಕಾರಣ ಪಕ್ಷಗಾರರು ಮಾ.14 ರಂದು ಕೊಪ್ಪಳ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗುವ ರಾಷ್ಟ್ರೀಯ ಲೋಕ ಅದಾಲತ್ ನ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಹಿಂದೆ ನಡೆದ ಲೋಕ್ ಅದಾಲತ್‌ನಲ್ಲಿ 6,746 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಈ ಬಾರಿ ಇನ್ನೂ ಹೆಚ್ಚಿನ ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಅಂಕಿ ಸಂಖ್ಯೆಗಿಂತ ಮೌಲ್ಯಯುತ ಪ್ರಕರಣ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಗಮನ ಹರಿಸಲಾಗುವುದು. ಇತ್ತೀಚಿಗೆ ಸಾರ್ವಜನಿಕರಲ್ಲಿಯೂ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಆಸಕ್ತಿ ಹೆಚ್ಚಾಗಿದ್ದು, ಸಕಾರಾತ್ಮಕ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 35,145 ಪ್ರಕರಣ ಬಾಕಿ ಇದ್ದು ಇದರಲ್ಲಿ 16,199 ಸಿವಿಲ್ ಪ್ರಕರಣಗಳು ಹಾಗೂ 18,946 ಕ್ರಿಮಿನಲ್ ಪ್ರಕರಣಗಳಿವೆ. ಗಂಗಾವತಿ ಭಾಗದಲ್ಲಿ ಹೆಚ್ಚು ಪ್ರಕರಣ ದಾಖಲಾಗುತ್ತವೆ. ಸಾರ್ವಜನಿಕರು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಭಾಗವಹಿಸುವ ಮೂಲಕ ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಈ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುರೇಶ ಜಿ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಇತರೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.