ಹಿರೇಕೆರೂರು: ರಾಷ್ಟ್ರೀಯ ಲೋಕ ಅದಾಲತ್ ಹಾಗೂ ವಿಶೇಷ ಮಧ್ಯಸ್ಥಿಕೆ ಅಭಿಯಾನದ ಮೂಲಕ ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸಿಕೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೆಎಂಎಫ್‌ಸಿ ಪ್ರಧಾನ ದಿವಾಣಿ ನ್ಯಾಯಾಧೀಶರಾದ ನಾಗರತ್ನಮ್ಮ ತಿಳಿಸಿದರು.ತಾಲೂಕಿನ ಅಬಲೂರು ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ನ್ಯಾಯವಾದಿಗಳ ಸಂಘ ಹಾಗೂ ತಾಪಂ ಹಿರೇಕೆರೂರು, ಗ್ರಾಪಂ ಅಬಲೂರು ಇವರ ಆಶ್ರಯದಲ್ಲಿ ಕಾಯಂ ಜನತಾ ನ್ಯಾಯಾಲಯ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ ಮತ್ತು ರಾಷ್ಟ್ರೀಯ ಲೋಕ ಅದಾಲತ್ ಬಗ್ಗೆ ಅರಿವು ಕುರಿತು ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾನೂನಿನ ಮೂಲಕ ನ್ಯಾಯ ಪಡೆದುಕೊಳ್ಳಲು ಅನೇಕರಿಗೆ ವಿವಿಧ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ. ಅಂತಹ ಅಸಹಾಯಕರಿಗೆ ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ಕಾನೂನು ಅರಿವು ಹಾಗೂ ನೆರವು ನೀಡಲಾಗುವುದು. ಈ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಅ. 30ರ ವರೆಗೆ ಮಧ್ಯಸ್ಥಿಕಾ ಅಭಿಯಾನ, ಸೆ. 13ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ನ್ಯಾಯಾಲಯಗಳಲ್ಲಿ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹರಿಸಿಕೊಳ್ಳಲು ಅವಕಾಶವಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಪ್ಯಾನಲ್ ವಕೀಲರಾದ ಬಸಮ್ಮ ಅಬಲೂರು ಉಪನ್ಯಾಸ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ ಹರಿಜನ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಕಾರ್ಯದರ್ಶಿ ಎಸ್.ಆರ್. ಲಿಂಗಾಪುರ, ತಾಪಂ ಸಹಾಯಕ ನಿರ್ದೇಶಕ ಸತೀಶ ಮೂದೇರ, ಪಿಡಿಒ ಬಸವರಾಜ ಕೆ., ವಕೀಲರಾದ ಎಸ್.ಸಿ. ಪಾಟೀಲ, ಎಸ್.ಎಚ್. ಗೌಡ್ರ, ಎಸ್.ಬಿ. ಗೌಡ್ರ, ರೇಷ್ಮಾ ಹಳ್ಳಪ್ಪನವರ, ಗ್ರಾಪಂ ಸದಸ್ಯರಾದ ಮನೋಹರ ಕಮ್ಮಾರ, ಉಜ್ಜನಗೌಡ ಮಳವಳ್ಳಿ, ವಿನಯ ದಳವಾಯಿ, ಉಮಾ ಚಕ್ರಸಾಲಿ, ಗೀತಾ ಇಂಗಳಗೊಂದಿ, ರತ್ನಮ್ಮ ಮುದಿಗೌಡ್ರ, ಯಲಮ್ಮ ಆಡೂರ, ಗ್ರಾಪಂ ಕಾರ್ಯದರ್ಶಿ ಆರ್.ಬಿ. ಕಾಳೇರ ಸೇರಿದಂತೆ ಅಬಲೂರು, ನೂಲಗೇರಿ, ಕಳಗೊಂಡ ಗ್ರಾಮಗಳ ಗ್ರಾಮಸ್ಥರು ಇದ್ದರು. ಗಣೇಶ ಹಳಕೋಟಿ ಸ್ವಾಗತಿಸಿದರು. ನಾಗರಾಜ ಮಡಿವಾಳರ ನಿರೂಪಿಸಿ, ವಂದಿಸಿದರು.