ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮಂಗಳವಾರ ನಗರದ ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯಲಿದ್ದು, ಮತ ಎಣಿಕೆ ನಿರ್ವಿಘ್ನ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಚಲಾವಣೆಯಾಗಿರುವ 7853 ಅಂಚೆ ಮತ ಹಾಗೂ 264 ಸೇವಾ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ನಂತರ ಉಡುಪಿ ಜಿಲ್ಲೆಯ 4 ಮತ್ತು ಚಿಕ್ಕಮಗಳೂರಿನ 4 ವಿದಾನ ಸಭಾ ಕ್ಷೇತ್ರವಾರು ಮತ ಎಣಿಕೆ ನಡೆಯಲಿದೆ. ಕುಂದಾಪುರ, ಕಾರ್ಕಳ, ಶೃಂಗೇರಿ, ತರಿಕೆರೆ ಕ್ಷೇತ್ರಗಳಿಗೆ ತಲಾ 2ರಂತೆ 8 ಮತ್ತು ಉಳಿದ ಕ್ಷೇತ್ರಗಳಿಗೆ ತಲಾ 1ರಂತೆ 4 ಸೇರಿ ಒಟ್ಟು 12 ಕೊಠಡಿಗಳಲ್ಲಿ, 112 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಕ್ಷೇತ್ರವಾರು ಕನಿಷ್ಟ 15 ಮತ್ತು ಗರಿಷ್ಟ 19 ರಂತೆ ಒಟ್ಟು 135 ಸುತ್ತುಗಳಲ್ಲಿ ಒಟ್ಟು 12,31,005 ಮತಗಳ ಎಣಿಕೆ ನಡಯಲಿದೆ.ಮತ ಎಣಿಕೆ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಪೊಲೀಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ. ಮತ ಎಣಿಕೆ ಕೇಂದ್ರದ ಸುತ್ತ 10ಮೀ. ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೇಂದ್ರಕ್ಕೆ 3 ಸುತ್ತುಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿದ್ದು, 350 ಪೊಲೀಸ್ ಸಿಬ್ಬಂದಿ, ಒಂದು ರಾಜ್ಯ ಸಶಸ್ತ್ರ ಮೀಸಲು ಪಡೆ, ಒಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಅಗ್ನಿಶಾಮಕ ದಳವನ್ನು ಕರ್ತವ್ಯಕ್ಕೆನಿಯೋಜಿಸಲಾಗಿದೆ.
ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜಿಲ್ಲೆಯಲ್ಲಿ ವಿಜಯೋತ್ಸವ ಮೆರವಣಿಗೆಗೆ ನಿಷೇಧ ಹೆರಲಾಗಿದ್ದರೂ, ಸೂಕ್ಷ್ಮ ಪ್ರದೇಶಗಳಲ್ಲಿ 400 ಪೊಲೀಸ್ ಸಿಬ್ಬಂದಿ, 3 ರಾಜ್ಯ ಸಶಸ್ತ್ರ ಮೀಸಲು ಪಡೆ ಮತ್ತು 3 ಜಿಲ್ಲಾ ಸಶಸ್ತ್ರ ಮೀಸಲು ಪಡೆ ನಿಯೋಜಿಸಲಾಗಿದೆ.10 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
2024 ರ ಲೋಕಸಭೆ ಚುನಾವಣೆ ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳು ಸರ್ಧೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಮತ್ತು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ನಡುವೆ ನೇರ ಹಣಾಹಣಿ ನಡೆದಿತ್ತು. ಉಳಿದಂತೆ ಜನಹಿತ ಪಕ್ಷದ ಅಭ್ಯರ್ಥಿ ಸುಪ್ರೀತ್ ಕುಮಾರ್ ಪೂಜಾರಿ, ಉತ್ತಮ ಪ್ರಜಾಕೀಯ ಪಕ್ಷದ ಸಚಿನ್ ಬಿ.ಕೆ, ಬಹುಜನ ಸಮಾಜ ಪಕ್ಷದ ಕೆ.ಟಿ.ರಾಧಾಕೃಷ್ಣ, ಪ್ರೌಟಿಸ್ಟ್ ಸರ್ವ ಸಮಾಜ ಪಕ್ಷದ ಅಭ್ಯರ್ಥಿ ಎಂ.ಕೆ.ದಯಾನಂದ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಲ್.ರಂಗನಾಥ ಗೌಡ, ಕರುನಾಡ ಸೇವಕರ ಪಕ್ಷದ ಶಬರೀಶ್, ಪಕ್ಷೇತರ ಅಭ್ಯರ್ಥಿಗಳಾದ ಸುಧೀರ್ ಕಾಂಚನ್ ಹಾಗೂ ಎಂ.ಜಿ.ವಿಜಯ ಕುಮಾರ್ ಅವರು ಎಷ್ಟು ಮತಗಳನ್ನು ಪಡೆಯುತ್ತಾರೆ, ಯಾರು ಠೇವಣಿ ಉಳಿಸಿಕೊಳ್ಳುತ್ತಾರೆ ಎಂಬುದು ಇಂದು ಹೊರಬಿಳಲಿದೆ.