ಕನ್ನಡಪ್ರಭ ವಾರ್ತೆ ಕೊಟ್ಟೂರು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಯೋವೃದ್ಧರು, ಅಂಗವಿಕಲರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ಕಲ್ವಿಸಲಾಗಿದೆ. ಆದರೂ 83ರ ವಯೋವೃದ್ಧ ವೀರಯ್ಯ ಮತದಾನ ಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿ ಮಾದರಿ ಎನಿಸಿದರು.ತಾವು ವಾಸಿಸುವ ದೂರದ ಪ್ರದೇಶದಿಂದ ಮತ ಕೇಂದ್ರವಿರುವ ಸ್ಥಳಕ್ಕೆ ಕುಟುಂಬ ಸದಸ್ಯರ ಸಹಾಯ ಪಡೆದು ಆಗಮಿಸಿ ಮತ ಚಲಾಯಿಸಿ ನನ್ನ ಹಕ್ಕು ಪ್ರತಿಪಾದಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಪಟ್ಟಣದ ವಿದ್ಯಾನಗರ ಗುರುದೇವ ಶಾಲೆಯ ಹತ್ತಿರದ ನಿವಾಸಿ ವೀರಯ್ಯ ಪತ್ನಿ, ಸೊಸೆ ಮತ್ತು ಮೊಮ್ಮಗನೊಂದಿಗೆ ಆಟೋವೊಂದರಲ್ಲಿ ಇಲ್ಲಿನ ಶ್ರೀ ಗುರುಬಸವೇಶ್ವರ ಸ್ವಾಮಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು. ಆರೋಗ್ಯ ಸರಿಯಿಲ್ಲ. ಅಧಿಕಾರಿಗಳು ಮನೆಯಲ್ಲಿ ಮತದಾನಕ್ಕೆ ಸಹಾಯ ಮಾಡದ ಕಾರಣ ಮತಕೇಂದ್ರಕ್ಕೆ ಬಂದು ಮತದಾನ ಮಾಡಿದೆ ಎಂದ ಅವರು ಅಧಿಕಾರಿಗಳ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದರು.ಶತಾಯುಷಿ ಕೆ.ಎಂ. ಬಸಮ್ಮ ಮತದಾನ
ಕಂಪ್ಲಿ: ಪಟ್ಟಣದ 16ನೇ ವಾರ್ಡಿನ ಶತಾಯುಷಿ ಕೆ.ಎಂ. ಬಸಮ್ಮ (101) ಇಲ್ಲಿನ ಬಿ ಎಸ್ ವಿ ಶಾಲೆಯಲ್ಲಿನ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಬಿರುಸಿನ ಮತದಾನ ನಡೆಯಿತು. ರಾಜ್ಯದೆಲ್ಲೆಡೆ ಸ್ವೀಪ್ ಸಮಿತಿಯಿಂದ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದ್ದರೂ ಅನೇಕ ವಿದ್ಯಾವಂತರು ಹಾಗೂ ಯುವ ಜನತೆ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಅಷ್ಟಕಷ್ಟೆ. ಹೀಗಿರುವಾಗ ಇಲ್ಲಿನ 102 ವರ್ಷದ ವೃದ್ದೆ ಕೆ.ಎಂ. ಬಸಮ್ಮ ಸ್ವತಃ ತಾವೇ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡರಲ್ಲದೆ, ಮಾದರಿ ಕಾರ್ಯ ಮಾಡಿದ್ದಾರೆ.ಎರಡೂ ಕೈಗಳಿಲ್ಲದ ಲಕ್ಷ್ಮೀದೇವಿ ಕಾಲಿನಿಂದ ಮತದಾನಕನ್ನಡಪ್ರಭ ವಾರ್ತೆ ಕೂಡ್ಲಿಗಿಪ್ರತಿಸಲದಂತೆ ಎರಡು ಕೈಗಳು ಇಲ್ಲದ ಲಕ್ಷ್ಮೀದೇವಿ ಎಂಬ ಯುವತಿ ಕಾಲಿಗೆ ಶಾಹಿ ಹಾಕಿಸಿಕೊಂಡು ಮತದಾನ ಮಾಡಿದರು.
ತಾಲೂಕಿ ಗುಂಡುಮುಗು ಗ್ರಾಮದ ಮತಕೇಂದ್ರದ 122ರಲ್ಲಿ ಮಂಗಳವಾರ ಬೆಳಗ್ಗೆ ಆಗಮಿಸಿದ ಲಕ್ಷ್ಮೀದೇವಿ ಕಾಲಿನಿಂದಲೇ ಸಹಿ ಮಾಡಿ ಕಾಲಿನಿಂದ ಮತಚಲಾಯಿಸುವ ಮೂಲಕ 17ನೇ ಬಾರಿಗೆ ಪವಿತ್ರ ಮತದಾನ ಹಕ್ಕನ್ನು ಚಲಾಯಿಸಿದಳು. ಲಕ್ಷ್ಮಿದೇವಿ ಈ ಭಾರಿ ಲೋಕಸಭಾ ಚುನಾವಣಾ ಮತದಾನ ಜಾಗೃತಿ ಜಿಲ್ಲಾರಾಯಭಾರಿಯೂ ಆಗಿದ್ದರು.