ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಸುಮರವಿ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಮಂಡ್ಯ ನಗರಸಭೆ ವ್ಯಾಪ್ತಿಯ ಪಕ್ಷದ ಮುಖಂಡರು, ನಗರಸಭಾ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಪುರಸಭೆ, ನಗರಸಭೆ, ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಂಗ್ರೆಸ್ ಗೆಲುವಿನೊಂದಿಗೆ ಮುಂದಿನ 20 ವರ್ಷ ಪಕ್ಷ ಜಿಲ್ಲೆಯೊಳಗೆ ಬಲವರ್ಧನೆಗೊಳ್ಳುತ್ತದೆ ಎಂದರು.
ಈ ಚುನಾವಣೆ ಗೆಲುವು ನಮಗೆ ಬಹಳ ಮುಖ್ಯವಾಗಿದೆ. ಇದರಿಂದ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಾರಮ್ಯ ಸಾಧಿಸಲಿದೆ ಎಂಬುದನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅರ್ಥೈಸಿಕೊಂಡು ಸ್ಟಾರ್ ಚಂದ್ರು ಗೆಲುವಿಗೆ ಶ್ರಮಿಸಬೇಕು. ನಗರ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.ನಮ್ಮ ಪಕ್ಷದ ಕೆಲವೇ ಮುಖಂಡರು, ಕಾರ್ಯಕರ್ತರು, ಚುನಾವಣೆ ಬಗ್ಗೆ ತಾತ್ಸಾರ ತೋರುತ್ತಿರುವುದು ಸರಿಯಲ್ಲ, ಜಿಲ್ಲೆಯ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಎಂದಿಗೂ ಲೋಕಸಭಾ ಚುನಾವಣೆಯನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ, ವ್ಯವಸ್ಥಿತ ಕಾರ್ಯವೈಖರಿಯಿಂದ ಗೆಲುವಿಗೆ ದುಡಿಯುವಂತೆ ಹೇಳಿದರು.
ಎಚ್.ಡಿ.ದೇವೆಗೌಡರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಿದ್ದರು. ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿ ಆಗಿದ್ದರು. ಜಿಲ್ಲೆಯ 8 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಆಯ್ಕೆಯಾಗಿದ್ದರು. ಆದರೂ ಜಿಲ್ಲೆಯ ನಿರೀಕ್ಷಿತ ಅಭಿವೃದ್ಧಿಗೆ ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದ ಅವರು, ಧರ್ಮಸಿಂಗ್ ಆಡಳಿತಾವಧಿಯಲ್ಲಿ ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದೆ. ಅಭಿವೃದ್ಧಿಯನ್ನು ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನರ ಮುಂದಿಟ್ಟು ಕಾಂಗ್ರೆಸ್ ಪರವಾಗಿ ಮತಗಳನ್ನು ಸೆಳೆಯುವಂತೆ ತಿಳಿಸಿದರು.
ನಗರಸಭೆ ಚುನಾವಣೆಗೆ ಲೋಕಸಭೆ ಚುನಾವಣೆ ಬುನಾದಿ
ಮಂಡ್ಯನಗರದ ಯುಜಿಡಿ ಅನುಷ್ಟಾನಕ್ಕೆ 200 ಕೋಟಿ ರು.ಅನುದಾನ, ನಗರ ವ್ಯಾಪ್ತಿಯ ರಸ್ತೆ ಅಭಿವೃದ್ದಿಗೆ 50 ಕೋಟಿ ವಿಶೇಷ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. 33 ಕೋಟಿ ರೂ. ವೆಚ್ಚದಲ್ಲಿ ಎಂ.ಸಿ ರಸ್ತೆ, ಪಾದಾಚಾರಿ ಮಾರ್ಗ ಹಾಗೂ ವೃತ್ತಗಳ ಅಭಿವೃದ್ದಿಗೆ ಯೋಜನೆ ಕಾರ್ಯಗತಗೊಳ್ಳಲಿದೆ ಎಂದರು.