ಶಿವಾನಂದ ಗೊಂಬಿ
ಹುಬ್ಬಳ್ಳಿ: ಲೋಕಸಭೆ ಚುನಾವಣೆಯ ರಂಗು ಸಣ್ಣದಾಗಿ ಏರುತ್ತಿದೆ. ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಬಿಜೆಪಿಯನ್ನು ಕಟ್ಟಿಹಾಕಬಹುದು ಎನ್ನುವುದನ್ನು ನಿರ್ಧರಿಸಲು ಕಾಂಗ್ರೆಸ್ ಇದೀಗ ಸಮೀಕ್ಷೆಗೆ ಮೊರೆ ಹೋಗಿದೆ.ಈ ಖಾಸಗಿ ಏಜೆನ್ಸಿ ಮೂಲಕ ಕಳೆದ ಒಂದು ವಾರದಿಂದಲೂ ಸಮೀಕ್ಷೆ ನಡೆಸುತ್ತಿರುವ ಕಾಂಗ್ರೆಸ್ ಅದು ವರದಿ ಕೊಟ್ಟ ಬಳಿಕ ಟಿಕೆಟ್ ಬಗ್ಗೆ ಒಂದು ಅಂತೀಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಬಿಜೆಪಿ ಈಗಾಗಲೇ ಪ್ರಚಾರವನ್ನು ಶುರು ಹಚ್ಚಿಕೊಂಡಿದೆ. ಆದರೆ ಕಾಂಗ್ರೆಸ್ ಸದ್ಯಕ್ಕೆ ತಾಲೂಕುವಾರು, ಬ್ಲಾಕ್‌ವಾರು ಸಭೆಗಳನ್ನು ನಡೆಸುತ್ತಿದೆ. ಆದರೆ ಕ್ಷೇತ್ರಕ್ಕಿಳಿದು ಜನರ ಮಧ್ಯೆ ತೆರಳಿ ನಡೆಸುವ ಪ್ರಚಾರಕ್ಕೆ ಚಾಲನೆ ಸಿಕ್ಕಿಲ್ಲ.ಆಕಾಂಕ್ಷಿಗಳು ಯಾರು?
1996ರಿಂದ ನಡೆದ ಏಳು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿಲ್ಲ. 1996ರಿಂದ 2004ರ ವರೆಗೆ ನಡೆದ ಚುನಾವಣೆಗಳಲ್ಲಿ ವಿಜಯ ಸಂಕೇಶ್ವರ ಗೆಲವು ಸಾಧಿಸಿದ್ದರೆ, 2004ರಿಂದ ನಡೆದ ನಾಲ್ಕು ಚುನಾವಣೆಗಳಲ್ಲಿ ಪ್ರಹ್ಲಾದ ಜೋಶಿ ಗೆಲುವು ಸಾಧಿಸಿದ್ದಾರೆ. ಈ ಸಲ ಹೇಗಾದರೂ ಮಾಡಿ ಬಿಜೆಪಿಯಿಂದ ಈ ಕ್ಷೇತ್ರ ಕಸಿದುಕೊಳ್ಳಬೇಕು ಎಂಬ ಇರಾದೆ ಕಾಂಗ್ರೆಸ್‌ನದ್ದು.ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಸಚಿವ ಲಕ್ಷ್ಮಿ ಹೆಬ್ಬಾಳಕರ್ ಸಂಬಂಧಿ ರಜತ್ ಉಳ್ಳಾಗಡ್ಡಿಮಠ, ವಕೀಲ ಪಿ.ಎಚ್. ನೀರಲಕೇರಿ, ವಿಜಯ ಕುಲಕರ್ಣಿ, ಶರಣಪ್ಪ ಕೊಟಗಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಲೋಹಿತ್ ನಾಯ್ಕರ ಸೇರಿದಂತೆ 12ಕ್ಕೂ ಹೆಚ್ಚು ಜನ ಆಕಾಂಕ್ಷಿಗಳು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲದೇ, ಶಾಸಕ ವಿನಯ ಪತ್ನಿ ಶಿವಲೀಲಾ ಕುಲಕರ್ಣಿ ಹೆಸರು ಕೂಡ ಕೇಳಿ ಬರುತ್ತಿದೆ. ಇವರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಉತ್ತಮ ಹಾಗೂ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಬಹುದು ಎಂಬ ಯೋಚನೆ ಕಾಂಗ್ರೆಸ್ಸಿನದು.
ಸಮೀಕ್ಷೆಯಾರು ಉತ್ತಮ ಅಭ್ಯರ್ಥಿಯಾಗಬಹುದು ಎಂಬುದನ್ನು ಪತ್ತೆ ಹಚ್ಚಲು ಖಾಸಗಿ ಏಜೆನ್ಸಿ ಮೂಲಕ ಸಮೀಕ್ಷೆ ನಡೆಸುತ್ತಿದೆ. ಉತ್ತರ ಭಾರತದ ಮೂಲದ ಏಜೆನ್ಸಿಯೊಂದಕ್ಕೆ ಸಮೀಕ್ಷೆಯ ಜವಾಬ್ದಾರಿ ನೀಡಲಾಗುತ್ತಿದೆ. ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಭೇಟಿ ನೀಡಿರುವ ಏಜೆನ್ಸಿಯ ತಂಡದ ಸದಸ್ಯರು, ಕಾಂಗ್ರೆಸ್ ಪರಿಸ್ಥಿತಿ ಏನಿದೆ? ಗ್ಯಾರಂಟಿ ಯೋಜನೆಗಳು ಅನುಕೂಲವಾಗಿವೆಯಾ? ಆಕಾಂಕ್ಷಿಗಳ ಹೆಸರು ಹೇಳಿ ಯಾರಿಗೆ ಕೊಟ್ಟರೆ ಉತ್ತಮ? ಯಾವ ಆಕಾಂಕ್ಷಿ ಬಗ್ಗೆ ಜನರ ಮನದಲ್ಲಿ ಏನಿದೆ ಎಂಬ ಬಗ್ಗೆಯೆಲ್ಲ ಚರ್ಚೆ ತಿಳಿದುಕೊಳ್ಳುತ್ತಿದೆ.
ಜತೆಗೆ ಅರ್ಜಿ ಸಲ್ಲಿಸದ ಕೆಲವರ ಬಗ್ಗೆಯೂ ವಿಚಾರ ನಡೆಸುತ್ತಿದೆ. ಒಂದು ವೇಳೆ ಅರ್ಜಿ ಸಲ್ಲಿಸದವರ ಬಗ್ಗೆ ಉತ್ತಮ ಅಭಿಪ್ರಾಯ ಬಂದರೆ ಅವರಿಗೂ ಟಿಕೆಟ್ ಭಾಗ್ಯ ದೊರೆಯುವ ಸಾಧ್ಯತೆಯೂ ಉಂಟು ಎಂದು ಹೇಳಲಾಗುತ್ತಿದೆ. ಇನ್ನು ನಾಲ್ಕು ದಿನಗಳ ಕಾಲ ಸಮೀಕ್ಷೆ ನಡೆಸಿ ಅದು ಕೆಪಿಸಿಸಿಗೆ ವರದಿ ಸಲ್ಲಿಸಲಿದೆ. ತದನಂತರ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ.ಒಟ್ಟಿನಲ್ಲಿ ಕಾಂಗ್ರೆಸ್ ಇದೀಗ ಟಿಕೆಟ್ ಫೈನಲ್ ಮಾಡಲು ಸಮೀಕ್ಷೆಯ ಮೊರೆ ಹೋಗಿದ್ದು, ಯಾರಿಗೆ ಅದೃಷ್ಟ ಇದೆ ಎನ್ನುವುದನ್ನು ಕಾದುನೋಡಬೇಕಿದೆ.
ಹೈಕಮಾಂಡ್‌ನಿಂದ ಸಮೀಕ್ಷೆಕಾಂಗ್ರೆಸ್ ಯಾರಿಗೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ಪಕ್ಷದ ಅಭಿಪ್ರಾಯದ ಜತೆಗೆ ಜನರ ಅಭಿಪ್ರಾಯ ತಿಳಿಯಲು ಪಕ್ಷದ ಹೈಕಮಾಂಡ್ ಸಮೀಕ್ಷೆ ನಡೆಸುತ್ತಿದೆ. ಕಳೆದ ಕೆಲ ದಿನಗಳಿಂದ ಕೆಲ ವಾರ್ಡ್, ಕ್ಷೇತ್ರಗಳಲ್ಲಿ ಖಾಸಗಿ ಏಜೆನ್ಸಿ ಸದಸ್ಯರು ಸಂಚರಿಸಿ ಸಮೀಕ್ಷೆ ನಡೆಸುತ್ತಿದ್ದಾರೆ. ಆ ಬಳಿಕ ಪಕ್ಷ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ತಿಳಿಸಿದ್ದಾರೆ.