ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮತದಾನಕ್ಕೆ ಬಾಕಿ ಉಳಿದಿರುವುದು ಇನ್ನೊಂದೇ ದಿನ. ಕಡೇ ಘಳಿಗೆಯಲ್ಲಿ ನಡೆಯುವ ಆಟ ಒಮ್ಮೊಮ್ಮೆ ಅಭ್ಯರ್ಥಿಗಳ ಸೋಲು-ಗೆಲುವನ್ನು ನಿರ್ಧರಿಸುವಷ್ಟು ನಿರ್ಣಾಯಕವಾಗಿರುತ್ತದೆ.ಚುನಾವಣೆಗೆ ಮುನ್ನಾ ದಿನ ಮತದಾರರನ್ನು ಸೆಳೆಯುವುದಕ್ಕೆ ರಾಜಕೀಯ ಪಕ್ಷಗಳು ನಾನಾ ರೀತಿಯ ಕಾರ್ಯ ತಂತ್ರಗಳನ್ನು ರೂಪಿಸಿಕೊಂಡಿರುತ್ತವೆ. ಜಿಲ್ಲಾಡಳಿತ ಎಷ್ಟೇ ನಿಗಾ ವಹಿಸಿದ್ದರೂ ಅವರ ಕಣ್ತಪ್ಪಿಸಿ ಮತದಾರರಿಗೆ ಹಣ, ಮದ್ಯ, ಮಾಂಸ ಪೂರೈಸುವುದು, ಬಾಡೂಟ ಏರ್ಪಡಿಸುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇದೆ.
ಯಾವ ಪಕ್ಷಗಳಿಗೆ ಎಲ್ಲಿ ವೋಟ್ ಬ್ಯಾಂಕ್ ಹೆಚ್ಚಾಗಿದೆ. ಮತಗಳನ್ನು ಸೆಳೆಯಬಹುದಾದ ಪ್ರದೇಶಗಳು ಯಾವುವು, ಯಾವ ಜಾತಿ-ಜನಾಂಗದವರನ್ನು ಇದುವರೆಗೂ ತಲುಪಲಾಗಿಲ್ಲ. ವಿರೋಧಿ ಪಾಳಯದಲ್ಲಿರುವವರನ್ನು ಕೊನೆ ಘಳಿಗೆಯಲ್ಲಿ ಆಮಿಷವೊಡ್ಡಿ ಸೆಳೆಯುವುದು, ಇಲ್ಲಿಯವರೆಗೆ ಕಾಯ್ದುಕೊಂಡು ಬಂದಿರುವ ವೋಟ್ ಬ್ಯಾಂಕ್‌ನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವುದಕ್ಕೆ ರಾಜಕೀಯ ಪಕ್ಷದವರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಬಹಳ ವ್ಯವಸ್ಥಿತ ರೀತಿಯಲ್ಲಿ ಯಾರ ಗಮನಕ್ಕೂ ಬಾರದಂತೆ ನಡೆಯುವ ಈ ಕಾರ್ಯಾಚರಣೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರತಿ ಚುನಾವಣೆಯಲ್ಲೂ ಯಶಸ್ಸು ಕಾಣುತ್ತಿದ್ದಾರೆ.ಹಣ, ಮದ್ಯವನ್ನು ಎಲ್ಲೆಲ್ಲಿ ದಾಸ್ತಾನಿಟ್ಟುಕೊಳ್ಳಬೇಕು. ಯಾವ ಮಾಗದಲ್ಲಿ ಹೇಗೆ ಅದನ್ನು ಮತದಾರರಿಗೆ ತಲುಪಿಸಬೇಕು. ಯಾರ ಮೂಲಕ ಹಂಚಿಕೆ ಕಾರ್ಯ ನಡೆಸಬೇಕೆಂಬ ರೂಪು-ರೇಷೆಗಳನ್ನು ಮೊದಲೇ ತಯಾರಿಸಿಟ್ಟುಕೊಂಡಿರುವ ರಾಜಕೀಯ ಪಕ್ಷದವರು ಅದೇ ರೀತಿಯಲ್ಲಿ ನಡೆಸುವುದರಲ್ಲಿ ನಿರತರಾಗಿದ್ದಾರೆ. ಆಡಳಿತ ಪಕ್ಷದವರ ಕಾರ್ಯಾಚರಣೆ ಹೇಗಿದೆ. ವಿರೋಧಪಕ್ಷದವರ ಕಾರ್ಯತಂತ್ರವೇನು ಎಂಬುದರ ಬಗ್ಗೆಯೂ ತೀವ್ರ ನಿಗಾ ವಹಿಸುವುದರೊಂದಿಗೆ ಅದಕ್ಕೆ ತಂತ್ರ-ಪ್ರತಿತಂತ್ರ ರೂಪಿಸಿ ಮತದಾರರನ್ನು ಓಲೈಸಿಕೊಳ್ಳುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಇಷ್ಟುದಿನಗಳವರೆಗೆ ಸುಡು ಬಿಸಿಲಿನಲ್ಲಿ ಪ್ರಚಾರ ನಡೆಸಿದರೂ ಚುನಾವಣಾ ಲೆಕ್ಕಾಚಾರದ ಚಿತ್ರಣ ಅಷ್ಟಾಗಿ ಸಿಗುತ್ತಿರಲಿಲ್ಲ. ಈಗ ಅಂತಿಮ ಘಟ್ಟ ತಲುಪಿರುವುದರಿಂದ ಯಾರು ಗೆಲುವಿನ ಹಾದಿಯಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ, ಯಾರು ಹಿಂದಿದ್ದಾರೆ, ಹಿಂದೆ ಬೀಳುವುದಕ್ಕೆ ಕಾರಣವೇನು, ಕೊನೆಯ ಕ್ಷಣದಲ್ಲಿ ಅದನ್ನು ಸರಿಪಡಿಸಿಕೊಂಡು ಇನ್ನೊಂದು ಹೆಜ್ಜೆ ತಾವು ಮುಂದೆ ಹೋಗುವುದಕ್ಕೆ ಅವಕಾಶಗಳಿವೆಯೇ ಎಂಬೆಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಆಲೋಚಿಸಿ ಅದಕ್ಕೆ ಬೇಕಾದ ರಣ ತಂತ್ರಗಳನ್ನೂ ಎರಡೂ ಕಡೆಯ ನಾಯಕರು ತೀವ್ರ ಗತಿಯಲ್ಲಿ ನಡೆಸುತ್ತಿದ್ದಾರೆ.ಬೂತ್ ಮಟ್ಟದಲ್ಲಿ ಯಾರು ಯಾರಿಗೆ ಜವಾಬ್ದಾರಿಯನ್ನು ನೀಡಲಾಗಿದೆಯೋ ಅವರೆಲ್ಲರನ್ನೂ ಅಲರ್ಟ್ ಮಾಡಿ ಎಲ್ಲಿಯೂ ಕೊಂಚ ಲೋಪವಾಗದಂತೆ ಕೊನೆಯ ದಿನದ ಕಾರ್ಯಾಚರಣೆಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವುದಕ್ಕೆ ಎರಡೂ ಕಡೆಯುವರು ಬಿರುಸಿನಿಂದ ಓಡಾಡುತ್ತಿದ್ದಾರೆ. ಮತದಾರರಿಂದ ದೇವರ ಪೋಟೋ ಮೇಲೆ ಪ್ರಮಾಣ ಮಾಡಿಸಿಕೊಂಡು ಓಟು ಹಾಕಿಸುವ ಪ್ರಯತ್ನಕ್ಕಿಳಿದಿರುವುದು ಹೊಸದೇನಲ್ಲ.
ಮತದಾರರನ್ನು ಮತಗಟ್ಟೆಗೆ ಕರೆತರುವುದಕ್ಕೆ ವಾಹನ ವ್ಯವಸ್ಥೆ, ಮತಪಟ್ಟಿಯನ್ನಿಟ್ಟುಕೊಂಡು ಕ್ಷೇತ್ರದಿಂದ ಹೊರಗೆ ಎಷ್ಟು ಮತದಾರರಿದ್ದಾರೆ. ದೂರದ ಊರುಗಳಲ್ಲಿರುವ ಅವರನ್ನು ಕರೆತರುವುದಕ್ಕೆ ಬಸ್ ವ್ಯವಸ್ಥೆ ಅಥವಾ ಪ್ರಯಾಣವೆಚ್ಚ ಭರಿಸುವುದು, ಹೀಗೆ ಮತಬೇಟೆಗೆ ಸಿಗುವ ಎಲ್ಲರನ್ನೂ ಹಿಡಿದು ಮತಗಟ್ಟೆಗೆ ತಂದು ಮತ ಹಾಕಿಸುವುದಕ್ಕೆ ನಾನಾ ರೀತಿಯ ಸಾಹಸಗಳನ್ನು ಮಾಡುತ್ತಿದ್ದಾರೆ.ಕೊನೆಯ ದಿನದಲ್ಲಿ ಪಕ್ಷದ ಗೆಲುವಿಗೆ ಏನೆಲ್ಲಾ ತಂತ್ರ, ಪ್ರತಿತಂತ್ರ, ಕುತಂತ್ರಗಳನ್ನು ನಡೆಸಬಹುದೋ ಅದೆಲ್ಲವನ್ನೂ ನಡೆಸುವುದನ್ನು ಪ್ರಮುಖ ಗುರಿಯಾಗಿಸಿಕೊಂಡಿದ್ದಾರೆ. ಇದರಲ್ಲಿ ಕಾಣುವ ಯಶಸ್ಸು ಒಮ್ಮೊಮ್ಮೆ ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಇದ್ಯಾವುದೂ ಉಪಯೋಗಕ್ಕೆ ಬಾರದಿರುವುದನ್ನೂ ಕಂಡಿದ್ದೇವೆ. ಹಾಗಂತ ಕೊನೆಯ ದಿನದ ಪ್ರಯತ್ನವನ್ನು ಕೈಚೆಲ್ಲಿ ಕೂರುವುದಕ್ಕೆ ಸಾಧ್ಯವೇ ಇಲ್ಲ. ಚುನಾವಣೆಯನ್ನು ಚುನಾವಣಾ ತಂತ್ರದಲ್ಲೇ ನಡೆಸುವುದು ಅನಿವಾರ್ಯವಾಗಿದೆ.