ಹೊಸಪೇಟೆ: ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಮತಗಟ್ಟೆ ಕೇಂದ್ರಗಳಿಗೆ ನಿಯೋಜನೆಯಾದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬುಧವಾರ ತರಬೇತಿ ನಡೆಯಿತು.
ಮತದಾನ ದಿನದಂದು ಮತ್ತು ಮತದಾನ ದಿನದ ಹಿಂದಿನ ದಿನದಂದು ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ವಹಿಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚುನಾವಣಾ ಮಾಸ್ಟರ್ ಟ್ರೇನರ್ ಅವರು ತರಬೇತಿ ನೀಡಿದರು.
ಮತಗಟ್ಟೆ ಅಧಿಕಾರಿಗಳು ತಮ್ಮ ತಂಡದ ಸದಸ್ಯರನ್ನು ಒಗ್ಗೂಡಿಸಿಕೊಳ್ಳಬೇಕು. ಮತದಾನ ದಿನದ ಹಿಂದಿನ ದಿನ ಮಸ್ಟರಿಂಗ್ ಕೌಂಟರ್‌ನಲ್ಲಿ ಸಾಮಗ್ರಿಗಳನ್ನು ಸರಿಯಾಗಿ ಪಡೆದುಕೊಳ್ಳಬೇಕು. ನೀಡಲಾಗುವ ಸಿಯು, ಬಿಯು, ವಿವಿಪ್ಯಾಟ್‌ಗಳು ಮತಗಟ್ಟೆಗೆ ಸೇರಿದ್ದ ಬಗ್ಗೆ ಮತಯಂತ್ರಗಳ ಐಡಿಗಳನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬೇಕು. ಮತಯಂತ್ರಗಳನ್ನು ಮತದಾನ ದಿನಂದು ಬೆಳಗ್ಗೆ 5.30 ಗಂಟೆಗೆ ಮುನ್ನ ಜೋಡಣೆ ಮಾಡಿ ಅಣುಕು ಮತದಾನ ಪ್ರಾರಂಭಿಸುವ ಪ್ರಕ್ರಿಯೆಗಳನ್ನು ನಿಯಮಾನುಸಾರ ಮಾಡಬೇಕು ಎಂದು ಚುನಾವಣಾ ತರಬೇತುದಾರ ಬಸವರಾಜ್ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಿದರು.ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ ಸಖಮುರಿ, ಪೊಲೀಸ್ ವೀಕ್ಷಕ ಧರ್ಮೆಂದ್ರ ಸಿಂಗ್ ಭದೌರಿಯಾ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಅವರು ತರಬೇತಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.