ಸುಗಮ ಚುನಾವಣೆಗೆ ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸಿ: ಪೂಜಾರ ವೀರಮಲ್ಲಪ್ಪ

KannadaprabhaNewsNetwork | Published : May 2, 2024 12:16 AM

ಸಾರಾಂಶ

ಚುನಾವಣೆ ಕಾರ್ಯ ನಿಯೋಜಿತ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಯಶಸ್ವಿ ಚುನಾವಣೆ ನಡೆಸಬೇಕು ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚನೆ ನೀಡಿದ್ದಾರೆ.

ಹಾವೇರಿ: ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಆಯೋಗ ನೀಡಿರುವ ಕೈಪಿಡಿಯೇ ಅಂತಿಮವಾಗಿದೆ. ಆಯೋಗದ ಮಾರ್ಗಸೂಚಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಧೈರ್ಯ, ದಕ್ಷತೆ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.

ನಗರದ ಹುಕ್ಕೇರಿಮಠ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾದ ಎರಡನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚುನಾವಣೆ ಕಾರ್ಯ ನಿಯೋಜಿತ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಯಶಸ್ವಿ ಚುನಾವಣೆ ನಡೆಸಬೇಕು ಹಾಗೂ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಈಗಾಗಲೇ ಮೊದಲ ಹಂತದ ತರಬೇತಿಯಲ್ಲಿ ಮತದಾನ ಪ್ರಕ್ರಿಯೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಆದಾಗ್ಯೂ ಏನಾದರೂ ಗೊಂದಲಗಳು ಇದ್ದಲ್ಲಿ, ಸ್ಪಷ್ಟತೆ ಬೇಕಾದಲ್ಲಿ ಈ ತರಬೇತಿಯಲ್ಲಿ ಬಗೆಹರಿಸಿಕೊಳ್ಳಬೇಕು. ಚುನಾವಣಾ ಕಾರ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಜಾಗರೂಕತೆಯಿಂದ ನಿರ್ವಹಿಸಬೇಕು. ಚುನಾವಣಾ ಕರ್ತವ್ಯ ನಿರ್ವಹಿಸುವುದರಿಂದ ಆಡಳಿತದಲ್ಲಿ ಒಳ್ಳೆಯ ಅನುಭವ ಸಿಗುತ್ತದೆ ಎಂದರು.

ಮತದಾನ ಕೊಠಡಿಯಲ್ಲಿ ಮತಯಂತ್ರಗಳ ನಿರ್ವಹಣೆ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು. ವಿವಿಪ್ಯಾಟ್‌ಗಳನ್ನು ಕಿಟಕಿಯ ಪಕ್ಕ ಇಡದೆ ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು. ಯಾವುದೇ ಹಿಂಜರಿಕೆ ಇಲ್ಲದೆ ಧೈರ್ಯವಾಗಿ ಕರ್ತವ್ಯನಿರ್ವಹಿಸುವ ಜತೆಗೆ ನಿಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಬೇಕು ಎಂದರು.

ಅಂಚೆ ಮತ ಪತ್ರ ವಿಭಾಗಕ್ಕೆ ಭೇಟಿ ನೀಡಿದ ಅವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅಂಚೆ ಮತ ಪತ್ರಗಳನ್ನು ಜಿಲ್ಲಾವಾರು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಇಡಿಸಿ ವಿತರಣೆ ವ್ಯವಸ್ಥಿತವಾಗಿ ಕೈಗೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ. ಬಿ.ಎಂ. ಬೇವಿನಮರದ ಹಾಗೂ ಎಸ್.ವಿ. ಅಜಗೊಂಡ್ರ ಅವರು ಭಾರತ ಚುನಾವಣಾ ಆಯೋಗದ ನಿಯಮಾವಳಿಯಂತೆ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮತದಾನ ಪ್ರಕ್ರಿಯೆ, ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಪ್ರಕ್ರಿಯೆ, ವಿದ್ಯುನ್ಮಾನ ಮತಯಂತ್ರಗಳ ಬಳಕೆ, ಮತದಾನ ಪ್ರಕ್ರಿಯೆಗೆ ವಿದ್ಯುನ್ಮಾನ ಮತಯಂತ್ರಗಳ ಸಿದ್ಧತೆ, ಮತಗಟ್ಟೆ ಅಧಿಕಾರಿಗಳ ಆಸನ ವ್ಯವಸ್ಥೆ ಹಾಗೂ ಏಜೆಂಟರ್ ಆಸನ ವ್ಯವಸ್ಥೆ, ವಿವಿಧ ಲಕೋಟೆ ಹಾಗೂ ನಮೂನೆಗಳ ಭರ್ತಿ ಮಾಡುವುದು, ನಿರ್ಬಂಧಿತ ಹಾಗೂ ನಿಷೇಧಿತ ಪ್ರದೇಶಗಳ ಗುರುತುವಿಸಿಕೆ ಹಾಗೂ ಮತದಾನದ ಸಂದರ್ಭದಲ್ಲಿ ಉಂಟಾಗುವ ವಿಶೇಷ ಸನ್ನಿವೇಶಗಳ ನಿರ್ವಹಣೆ ಕುರಿತಂತೆ ವಿವರವಾಗಿ ಮಾಹಿತಿ ನೀಡಿದರು ಹಾಗೂ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಕುರಿತು ಪ್ರಾತ್ಯಕ್ಷಿತೆ ಮೂಲಕ ತರಬೇತಿ ನೀಡಿದರು.

ಬ್ಯಾಡಗಿ, ರಾಣಿಬೆನ್ನೂರು, ಹಿರೇಕೆರೂರು, ಹಾನಗಲ್, ಶಿಗ್ಗಾಂವಿಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯ ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಮತಗಟ್ಟೆ ಅಧಿಕಾರಿಗಳಿಗೆ ಇಡಿಸಿ ಹಾಗೂ ಅಂಚೆ ಮತಪತ್ರ ವಿತರಣೆ ಹಾಗೂ ಸಿಬ್ಬಂದಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆಗಳ ಕುರಿತಂತೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ಪರಿಶೀಲನೆ ನಡೆಸಿದರು.

ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಚೆನ್ನಪ್ಪ, ಹಾವೇರಿ ತಹಸೀಲ್ದಾರ್ ನಾಗರಾಜ, ತರಬೇತಿ ಉಸ್ತುವಾರಿ ಅಧಿಕಾರಿಗಳಾದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ ಹಾಗೂ ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಆಯಾ ತಾಲೂಕು ತಹಸೀಲ್ದಾರಗಳು, ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.

Share this article