ಲೋಕಸಭಾ ಚುನಾವಣೆ- 30ರೊಳಗೆ ಆಕಾಂಕ್ಷಿ ಪಟ್ಟಿ ವರಿಷ್ಠರ ಕೈಗೆ

KannadaprabhaNewsNetwork |  
Published : Dec 16, 2023, 02:00 AM IST
ಧಾರವಾಡದ ಮಯೂರ ರೆಸಾರ್ಟ್‌ನಲ್ಲಿ ಸಮಾಲೋಚನಾ ಸಭೆ ನಡೆಸಿದರು | Kannada Prabha

ಸಾರಾಂಶ

ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಮೊದಲ ಹಂತ ತಡವಾಗಿಯಾದರೂ ಚಾಲನೆ ದೊರೆತಿದೆ. ಈ ಕ್ಷೇತ್ರದ ವೀಕ್ಷಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಶುಕ್ರವಾರ ಸಂಜೆ ಇಲ್ಲಿಯ ಮಯೂರ ರೆಸಾರ್ಟ್‌ನಲ್ಲಿ ಸಮಾಲೋಚನಾ ಸಭೆ ನಡೆಸಿದ್ದು, ಡಿ. 30ರೊಳಗೆ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯು ವರಿಷ್ಠರ ಕೈಗೆ ತಲುಪುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಮೊದಲ ಹಂತ ತಡವಾಗಿಯಾದರೂ ಚಾಲನೆ ದೊರೆತಿದೆ. ಈ ಕ್ಷೇತ್ರದ ವೀಕ್ಷಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಶುಕ್ರವಾರ ಸಂಜೆ ಇಲ್ಲಿಯ ಮಯೂರ ರೆಸಾರ್ಟ್‌ನಲ್ಲಿ ಸಮಾಲೋಚನಾ ಸಭೆ ನಡೆಸಿದ್ದು, ಡಿ. 30ರೊಳಗೆ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯು ವರಿಷ್ಠರ ಕೈಗೆ ತಲುಪುವ ಸಾಧ್ಯತೆ ಇದೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕ ಪ್ರಸಾದ ಅಬ್ಬಯ್ಯ, ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಮುಖಂಡರಾದ ಎಫ್‌.ಎಚ್‌. ಜಕ್ಕಪ್ಪನವರ ಹಲವು ಮುಖಂಡರ ನೇತೃತ್ವದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಸಭೆ ನಡೆಯಿತು.

ಜಿಲ್ಲೆಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಧಾರವಾಡ ಗ್ರಾಮೀಣ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ತಮ್ಮ ಪರವಾದ ಅಭ್ಯರ್ಥಿಗಳ ಹೆಸರನ್ನು ಉಸ್ತುವಾರಿ ಹೊತ್ತಿರುವ ಸಚಿವೆ ಹೆಬ್ಬಾಳಕರಗೆ ಶಿಫಾರಸು ಮಾಡಿದರು.

ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶೀವಲೀಲಾ ಅವರೂ ಆಕಾಂಕ್ಷಿಗಳು. ಆದರೆ, ಅನಾರೋಗ್ಯ ಹಿನ್ನೆಲೆಯಲ್ಲಿ ಅವರು ಗೈರಾಗಿದ್ದರು. ಇನ್ನು, ರಜತ ಉಳ್ಳಾಗಡ್ಡಿಮಠ, ಬಸವರಾಜ ಗುರಿಕಾರ, ಅನಿಲಕುಮಾರ ಪಾಟೀಲ, ಡಾ. ಮಯೂರ ಮೋರೆ, ಶರಣಪ್ಪ ಕೊಟಗಿ, ಶಾಕೀರ ಶನದಿ ಸೇರಿದಂತೆ ಇತರೆ ಆಕಾಂಕ್ಷಿಗಳು ಇದ್ದರು.

ಸಮಾಲೋಚನಾ ಸಭೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಈಗಾಗಲೇ ಈ ಸಮಾಲೋಚನಾ ಸಭೆ ನಡೆಯಬೇಕಿತ್ತು. ಗೃಹ ಲಕ್ಷ್ಮೀ ಯೋಜನೆ ಯಶಸ್ವಿ ಹಿನ್ನೆಲೆಯಲ್ಲಿ ಮಾಡಲಾಗಿಲ್ಲ. ಉಡುಪಿಯ ಉಸ್ತುವಾರಿಯೂ ಹೌದು. ಬೆಳಗಾವಿಗೆ ಹೋಗಲು ವಾರಕ್ಕೆ ಎರಡು ದಿನ ಮಾತ್ರ ಸಮಯವಿತ್ತು. ಹೀಗಾಗಿ ಧಾರವಾಡಕ್ಕೆ ಬರಲು ತಡವಾಗಿದೆ. ಡಿ. 30ರೊಳಗೆ ಆಕಾಂಕ್ಷಿಗಳ ಪಟ್ಟಿ ಕೊಡಬೇಕಿದೆ. ಈ ಸಂಬಂಧ ನನಗೆ ಸೂಚನೆ ಕೊಟ್ಟಿದ್ದಾರೆ. ಈ ಭಾಗದ ಶಾಸಕರು, ಸಚಿವರೊಂದಿಗೆ ಮಾತನಾಡಿಕೊಳ್ಳಬೇಕಿದೆ.

ಆಕಾಂಕ್ಷಿಗಳೆಲ್ಲ ಖುದ್ದಾಗಿ ಭೇಟಿಯಾಗಿ ಅರ್ಜಿ ಕೊಡಬೇಕು. ಅಲ್ಪಸಂಖ್ಯಾತರದ್ದು ಇಡೀ ರಾಜ್ಯದಲ್ಲಿ 3 ಕ್ಷೇತ್ರದ ಬೇಡಿಕೆ ಇದೆ. ಎಲ್ಲವನ್ನೂ ಪಕ್ಷದ ಅಧ್ಯಕ್ಷರಿಗೆ ವರದಿ ಮಾಡುತ್ತೇನೆ. ಧಾರವಾಡದಿಂದ ಅಲ್ಪಸಂಖ್ಯಾತರು ಯಾರು ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವ ಶಕ್ತಿಯುಳ್ಳ ಅಭ್ಯರ್ಥಿಯ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಗಾಗಿ ಕ್ಯಾಬಿನೆಟ್‌ ಸಚಿವರನ್ನು ಉಸ್ತುವಾರಿ ನೇಮಿಸಿದ್ದು, ಈಗಾಗಲೇ ಬಹುತೇಕ ಕ್ಷೇತ್ರಗಳಲ್ಲಿ ಪ್ರಾಥಮಿಕ ಹಂತದ ಸಮಾಲೋಚನಾ ಸಭೆ ನಡೆದಿದ್ದು, ಧಾರವಾಡ ಕ್ಷೇತ್ರ ಮಾತ್ರ ಬಾಕಿ ಉಳಿದಿತ್ತು. ಕಳೆದ ನವೆಂಬರ್‌ ತಿಂಗಳಲ್ಲಿಯೇ ಆಗಬೇಕಿದ್ದ ಸಭೆ ಶುಕ್ರವಾರ ನಡೆದಿದ್ದು ಮೊದಲ ಹಂತದಲ್ಲಿ ಸಚಿವೆ ಹೆಬ್ಬಾಳಕರ, ಮುಖಂಡರ, ಆಕಾಂಕ್ಷಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ನೀಡುವ ಮೂಲಕ ಮೊದಲ ಹಂತದ ಪ್ರಕ್ರಿಯೆ ಮುಗಿಸಲಿದ್ದಾರೆ. ವರಿಷ್ಠರು ತಮ್ಮ ಹಂತದಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ