ಕಾಂಗ್ರೆಸ್‌ನಿಂದ ಗೀತಾ ಶಿವರಾಜಕುಮಾರ್‌ಗೆ ಲೋಕಸಭೆ ಟಿಕೆಟ್

KannadaprabhaNewsNetwork | Updated : Mar 09 2024, 01:31 AM IST

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿಯೇ ಗೀತಾ ಶಿವರಾಜ್‌ಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದ್ದು, ಎರಡನೇ ಬಾರಿಗೆ ಈ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ. ಯಾವುದೇ ಬಂಡಾಯದ ಸದ್ದಿಲ್ಲದೇ ಟಿಕೆಟ್ ಪಡೆದುಕೊಳ್ಳುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಯಶಸ್ವಿಯಾಗಿದ್ದಾರೆ. ಅವರೇ ಉಸ್ತುವಾರಿ ಸಚಿವರೂ ಆಗಿರುವುದರಿಂದ ಇದಕ್ಕೆ ಪಕ್ಷದಲ್ಲಿ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಹಾಗೆಯೇ ನೋಡಿಕೊಂಡಿದ್ದಾರೆ ಕೂಡ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿಯೇ ಗೀತಾ ಶಿವರಾಜ್‌ಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದ್ದು, ಎರಡನೇ ಬಾರಿಗೆ ಈ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ.

ಯಾವುದೇ ಬಂಡಾಯದ ಸದ್ದಿಲ್ಲದೇ ಟಿಕೆಟ್ ಪಡೆದುಕೊಳ್ಳುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಯಶಸ್ವಿಯಾಗಿದ್ದಾರೆ. ಅವರೇ ಉಸ್ತುವಾರಿ ಸಚಿವರೂ ಆಗಿರುವುದರಿಂದ ಇದಕ್ಕೆ ಪಕ್ಷದಲ್ಲಿ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಹಾಗೆಯೇ ನೋಡಿಕೊಂಡಿದ್ದಾರೆ ಕೂಡ.

2014ರಲ್ಲಿ ಮೊದಲ ಬಾರಿಗೆ ಬಿಜೆಪಿಯ ಪ್ರಬಲ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಕಣಕ್ಕೆ ಇಳಿದಿದ್ದರು. ಆಗ ಕಾಂಗ್ರೆಸ್‌ನಿಂದ ಮಂಜುನಾಥ್ ಭಂಡಾರಿ ಅವರು ಕಣಕ್ಕೆ ಇಳಿದಿದ್ದರು. ಗೀತಾ ಶಿವರಾಜ್‌ಕುಮಾರ್ ಪರವಾಗಿ ಸ್ಯಾಂಡಲ್‌ವುಡ್‌ನ ದಂಡೇ ಇಲ್ಲಿಗೆ ಬಂದು ಪ್ರಚಾರ ಮಾಡಿದ್ದರು. ಸ್ವತಃ ಶಿವರಾಜಕುಮಾರ್ ಕೂಡ ಸಾಕಷ್ಟು ಪ್ರಚಾರ ಮಾಡಿದ್ದರು. ಇದರಿಂದ ಒಂದು ಹಂತದಲ್ಲಿ ಸ್ವಲ್ಪಮಟ್ಟಿನ ಪ್ರಭಾವಿ ಅಭ್ಯರ್ಥಿಯಾಗಿ ಗೀತಾ ಕಾಣಿಸಿಕೊಂಡಿದ್ದರು ಕೂಡ. ಆದರೆ, ಇದು ಮತವಾಗಿ ಪರಿವರ್ತಿತವಾಗುವಲ್ಲಿ ವಿಫಲವಾಗಿತ್ತು. ಗೀತಾ ಶಿವರಾಜ್‌ಕುಮಾರ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಆಗ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ 6,06,216 ಮತಗಳನ್ನು, ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ 22,42,911 ಮತಗಳನ್ನು ಹಾಗೂ ಜೆಡಿಎಸ್‌ನ ಗೀತಾ ಶಿವರಾಜ್‌ಕುಮಾರ್ 2,40,636 ಮತಗಳನ್ನು ಪಡೆದಿದ್ದರು.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾದರು. ಆಗ ಜೆಡಿಎಸ್‌ನಿಂದ ಮಧು ಬಂಗಾರಪ್ಪ ಸ್ಪರ್ಧೆಗೆ ಇಳಿದರು. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಾಕದೇ ಜೆಡಿಎಸ್ ಅನ್ನು ಬೆಂಬಲಿಸಿತು. ಆಗ ರಾಘವೇಂದ್ರ 7,29,872 ಮತಗಳನ್ನು ಮತ್ತು ಜೆಡಿಎಸ್‌ನ ಮಧು ಬಂಗಾರಪ್ಪ ಅವರು 5,06,512 ಮತಗಳನ್ನು ಪಡೆದರು. ಎರಡೂ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸುಮಾರು 5 ಲಕ್ಷ ಮತಗಳ ಚಲಾವಣೆಯಾಗಿದೆ ಎಂಬುದು ಗಮನಾರ್ಹ.

ಈ ಬಾರಿ ಮಧು ಬಂಗಾರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಇರುವುದರಿಂದ ಮತ್ತು ಸ್ವತಃ ಡಿ.ಕೆ.ಶಿವಕುಮಾರ್ ಅವರು ಈ ಕ್ಷೇತ್ರದ ಕಡೆ ವಿಶೇಷ ಗಮನ ನೀಡುವುದರಿಂದ ಚುನಾವಣೆ ರಂಗೇರುವುದು ಖಚಿತ.

- - - -ಫೋಟೋ: ಗೀತಾ ಶಿವರಾಜ್‌ಕುಮಾರ್

Share this article