ಅಕ್ರಮ ಆಸ್ತಿ ಗಳಿಕೆ ಆರೋಪ, ಇಬ್ಬರು ಆರ್‌ಎಫ್‌ಒಗಳ ಮೇಲೆ ಲೋಕಾ ದಾಳಿ

KannadaprabhaNewsNetwork |  
Published : Oct 31, 2023, 01:15 AM IST
30ಎಚ್‌ವಿಆರ್‌3- | Kannada Prabha

ಸಾರಾಂಶ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಜಿಲ್ಲೆಯ ಇಬ್ಬರು ವಲಯ ಅರಣ್ಯಾಧಿಕಾರಿಗಳ (ಆರ್‌ಎಫ್‌ಒ) ಕಚೇರಿ ಮತ್ತು ಮನೆಗಳ ಮೇಲೆ ಸೋಮವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಸ್ಥಿರಾಸ್ತಿ ಪತ್ತೆಯಾಗಿದೆ.

ಅಪಾರ ಆಸ್ತಿಪಾಸ್ತಿ ಪತ್ತೆ- ಮನೆಗಳಲ್ಲಿ ಸಿಕ್ಕಿತು ಲಕ್ಷಾಂತರ ರು. ನಗದು, ಚಿನ್ನಾಭರಣ

ಕನ್ನಡಪ್ರಭ ವಾರ್ತೆ ಹಾವೇರಿ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಜಿಲ್ಲೆಯ ಇಬ್ಬರು ವಲಯ ಅರಣ್ಯಾಧಿಕಾರಿಗಳ (ಆರ್‌ಎಫ್‌ಒ) ಕಚೇರಿ ಮತ್ತು ಮನೆಗಳ ಮೇಲೆ ಸೋಮವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಸ್ಥಿರಾಸ್ತಿ ಪತ್ತೆಯಾಗಿದೆ.

ಹಾವೇರಿ ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮತಿ ಮತ್ತು ಜಲಾನಯನ ಅಭಿವೃದ್ಧಿ ವಿಭಾಗದ ಆರ್‌ಎಫ್‌ಒ ಪರಮೇಶ್ವರಪ್ಪ ಪೇಲನವರ ಅವರ ನಿವಾಸ ಮತ್ತು ಕಚೇರಿ ಸೇರಿ ಒಟ್ಟು 9 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ವಿದೇಶಿ ಮದ್ಯ, ಐಶಾರಾಮಿ ಫಾರ್ಮ್ ಹೌಸ್:

ಆರ್‌ಎಫ್‌ಒ ಪರಮೇಶ್ವರಪ್ಪ ಪೇಲನವರಗೆ ಹಾವೇರಿ ನಗರದಲ್ಲಿ ನಾಲ್ಕು ಮನೆಗಳು, ಕುರುಬಗೊಂಡ ಗ್ರಾಮದ ಬಳಿ 3 ಎಕರೆ ಫಾರ್ಮ್‌ ಹೌಸ್‌ ಇರುವುದು ಪತ್ತೆಯಾಗಿದೆ. ಫಾರ್ಮ್‌ ಹೌಸ್‌ನಲ್ಲಿ ವಾಕಿಂಗ್‌ ಟ್ರ್ಯಾಕ್‌ ಸೇರಿದಂತೆ ಐಷಾರಾಮಿ ಸೌಲಭ್ಯ ಹೊಂದಿದ್ದು, ವಿದೇಶಿ ನಾಯಿಗಳು ಇರುವುದನ್ನು ನೋಡಿ ಲೋಕಾ ಪೊಲೀಸರೇ ದಂಗಾಗಿದ್ದಾರೆ. 2 ಲೀಟರ್‌ ವಿದೇಶಿ ಮದ್ಯ ಪತ್ತೆಯಾಗಿದ್ದು, ಒಂದು ಲೀಟರ್‌ ವಿದೇಶಿ ಮದ್ಯಕ್ಕೆ ₹ 18 ಸಾವಿರ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯ ಆರು ಕಡೆ 8 ಎಕರೆಗೂ ಹೆಚ್ಚು ಜಮೀನನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ದಾಳಿ ವೇಳೆ ಮನೆಯಲ್ಲೇ ₹6 ಲಕ್ಷ ನಗದು, ₹2 ಲಕ್ಷ ಮೌಲ್ಯದ ಪೀಠೋಪಕರಣ ಹಾಗೂ ಸುಮಾರು ₹3 ಲಕ್ಷ ಮೌಲ್ಯದ ಪುಸ್ತಕಗಳು ದೊರೆತಿವೆ. ಜತೆಗೆ ಒಂದು ಏರ್‌ ಗನ್‌ ಕೂಡ ಸಿಕ್ಕಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

650 ಗ್ರಾಂ ಬಂಗಾರ ಪತ್ತೆ:

ಹಾವೇರಿ ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮತಿ 3 ಮನೆಗಳು, 2 ನಿವೇಶನಗಳು ಹಾಗೂ 5 ಎಕರೆ ಹೊಲ ಹೊಂದಿದ್ದಾರೆ. ಮನೆಯಲ್ಲಿ 650 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ, ₹6.50 ಲಕ್ಷ ನಗದು, ಎರಡು ಕಾರು, ಬೈಕ್‌ ಸೇರಿದಂತೆ ಕೋಟ್ಯಂತರ ರು. ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ದಾಳಿ ನಡೆದಿದ್ದು, ತನಿಖೆ ಮುಂದುವರಿದಿದೆ. ಬ್ಯಾಂಕ್‌ ಖಾತೆಗಳು, ಲಾಕರ್‌ಗಳ ಹುಡುಕಾಟ ನಡೆದಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ