ಲೋಕಾಪೂರ-ಧಾರವಾಡ ರೈಲ್ವೆ ಯೋಜನೆ ಘೋಷಿಸಿ

KannadaprabhaNewsNetwork |  
Published : Oct 09, 2025, 02:02 AM IST
ಪತ್ರಿಕಾಗೋಷ್ಠಿಯಲ್ಲಿ ಕುತುಬುದ್ಧೀನ ಖಾಜಿ ಮಾತನಾಡಿದರು. | Kannada Prabha

ಸಾರಾಂಶ

ಲೋಕಾಪೂರ- ಧಾರವಾಡ ಹೊಸ ರೈಲ್ವೆ ಮಾರ್ಗವನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಘೋಷಿಸಿ, ನಿರ್ಮಾಣಕ್ಕೆ ಅನುದಾನ ಮೀಸಲಿಡಿ

ಕನ್ನಡಪ್ರಭ ವಾರ್ತೆ ರಾಮದುರ್ಗ

ಸುಮಾರು 20 ವರ್ಷಗಳ ನಿರಂತರ ಹೋರಾಟ ನಡೆದಿರುವ ಲೋಕಾಪೂರ- ಧಾರವಾಡ ಹೊಸ ರೈಲ್ವೆ ಮಾರ್ಗವನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಘೋಷಿಸಿ, ನಿರ್ಮಾಣಕ್ಕೆ ಅನುದಾನ ಮೀಸಲಿಡದಿದ್ದರೆ ರಾಜ್ಯದ ತುಂಬೆಲ್ಲ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ರೈಲ್ವೆ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಖುತಬುದ್ದಿನ ಖಾಜಿ ಎಚ್ಚರಿಕೆ ನೀಡಿದರು.

ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಪೂರ, ರಾಮದುರ್ಗ, ಸವದತ್ತಿ ಮತ್ತು ಧಾರವಾಡಕ್ಕೆ ಹೋಗುವ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಎಲ್ಲ ರೀತಿಯ ಅನುಕೂಲತೆಗಳಿದ್ದರೂ ಸಮೀಕ್ಷೆ ವೇಳೆ ತಪ್ಪು ಗ್ರಹಿಕೆಯಿಂದ ತಪ್ಪು ವರದಿ ನೀಡಲಾಗಿದೆ. ಇದರಿಂದ ಉತ್ತರ ಕರ್ನಾಟಕದ ಧಾರ್ಮಿಕ ಕ್ಷೇತ್ರಗಳು ಅವಕಾಶದಿಂದ ವಂಚಿತವಾಗಿವೆ ಎಂದು ದೂರಿದರು.

ರಾಮದುರ್ಗ ತಾಲೂಕಿನ ಧಾರ್ಮಿಕ ಕ್ಷೇತ್ರಗಳಾದ ಗೊಡಚಿ, ರಾಮಭಕ್ತೆ ಶಬರಿ, ಶಿವನ ಮೂರ್ತಿ, ಕಲ್ಲೂರು ಸಿದ್ದೇಶ್ವರ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸವದತ್ತಿ ತಾಲೂಕಿನ ಶಿರಸಂಗಿ ಕಾಳಿಕಾ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಅವರ ಪ್ರಯಾಣಕ್ಕೆ ಸೂಕ್ತ ಬಸ್ ಮತ್ತು ಇತರೇ ವಾಹನಗಳ ವ್ಯವಸ್ಥೆಗಳು ಇಲ್ಲದ ಕಾರಣ ಪ್ರಯಾಣಿಕರು ಸಂಕಟ ಪಡುತ್ತಿದ್ದಾರೆ. ಈ ಕ್ಷೇತ್ರಗಳ ದರ್ಶನಕ್ಕೆ ರೈಲ್ವೆ ಮಾರ್ಗ ನಿರ್ಮಿಸಿಕೊಡುವುದು ಅತ್ಯವಶ್ಯವಾಗಿದೆ ಎಂದು ತಿಳಿಸಿದರು.

ಲೋಕಾಪೂರ ಸುತ್ತಲ 50 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 11 ಪ್ಯಾಕ್ಟರಿಗಳು, ರಾಮದುರ್ಗ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು, ಸವದತ್ತಿ ತಾಲೂಕಿನಲ್ಲಿಯೂ ಅನೇಕ ಕಾರ್ಖಾನೆಗಳು ಇದ್ದರೂ ಸಮೀಕ್ಷೆ ವೇಳೆ ಅವೆಲ್ಲವನ್ನೂ ಕಡೆಗಣಿಸಿ ಮನಬಂದಂತೆ ವಾಣಿಜ್ಯ ಸಮೀಕ್ಷೆ ಮಾಡಲಾಗಿದೆ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ ಎಂದರು. ರಾಮದುರ್ಗ ತಾಲೂಕಿನಲ್ಲಿ ಹರಿದಿರುವ ಒಂದೇ ಒಂದು ನದಿ ಮಲಪ್ರಭೆ. ಇದನ್ನು ಹೊರತು ಪಡಿಸಿ ಉಳಿದೆಲ್ಲವೂ ಚಿಕ್ಕಪುಟ್ಟ ಝರಿಗಳು, ಒಂದೆರಡು ಕಡೆಗಳಲ್ಲಿ ಸೇತುವೆ ನಿರ್ಮಾಣ ಮಾಡಬೇಕಿದೆ. ಆದರೆ ಸಮೀಕ್ಷೆಗೆ ಆಗಮಿಸಿದ್ದ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ತಾಂತ್ರಿಕ ಸಮೀಕ್ಷೆ ತಪ್ಪಾಗಿ ನೀಡಿದ್ದಾರೆ ಎಂದು ದೂರಿದರು.

ಸಾಕಷ್ಟು ದಿನಗಳಿಂದ ರೈಲ್ವೆ ಮಾರ್ಗಕ್ಕೆ ಬೆಂಬಲಿಸಬೇಕು ಎಂದು ಜಿಲ್ಲೆಯ ರಾಜಕಾರಣಿಗಳನ್ನು ವಿನಂತಿಸಲಾಗಿದೆ. ಶಾಸಕರು, ಸಂಸದರು ಬೆಂಬಲ ಸೂಚಿಸುತ್ತಿದ್ದಾರೆ. ಈ ಸಾರಿಯ ಬಜೆಟ್ ಅಧಿವೇಶನದಲ್ಲಿ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು ಎಂದು ಜನಪ್ರತಿನಿಧಿಗಳ ಸಭೆ ಕರೆದು ವಿನಂತಿಸಲಾಗುವುದು. ಸಾರ್ವಜನಿಕರೂ ಇದರಲ್ಲಿ ಭಾಗವಹಿಸಿ ಉತ್ತಮ ಸಲಹೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗೈಬು ಜೈನೆಖಾನ, ಎಸ್.ಜಿ. ಚಿಕ್ಕನರಗುಂದ, ಚಂದ್ರು ಮಾಳದಕರ, ಮಹ್ಮದಶಫಿ ಬೆಣ್ಣಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು
ನಾಡಿದ್ದು ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ