ಮೀಸಲು ಪಡೆಯ ಕಾನ್‌ಸ್ಟೇಬಲ್‌ನಿಂದ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ಲೋಕಾ ಬಲೆಗೆ

KannadaprabhaNewsNetwork |  
Published : Jul 11, 2024, 01:39 AM IST
ಲೋಕಾಯುಕ್ತ ದಾಳಿಗೆ ಒಳಗಾದ ಮಹಮ್ಮದ್‌ ಆರೀಸ್‌ | Kannada Prabha

ಸಾರಾಂಶ

ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್ ಕೊಣಾಜೆ ಇಲ್ಲಿನ ಪೊಲೀಸ್ ನಿರೀಕ್ಷಕ ಮಹಮ್ಮದ್ ಆರೀಸ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಲಂಚ ಸ್ವೀಕರಿಸುತ್ತಿದ್ದ ಮೀಸಲು ಪೊಲೀಸ್‌ ವಿಶೇಷ ಪಡೆಯ ಪೊಲೀಸ್‌ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ಮಂಗಳೂರಿನ ಹೊರವಲಯದ ಕೊಣಾಜೆಯಲ್ಲಿ ನಡೆದಿದೆ.

ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್ ಕೊಣಾಜೆ ಇಲ್ಲಿನ ಪೊಲೀಸ್ ನಿರೀಕ್ಷಕ ಮಹಮ್ಮದ್ ಆರೀಸ್ ಲೋಕಾಯುಕ್ತ ಬಲೆಗೆ ಬಿದ್ದಾತ.

ಪಿರ್ಯಾದಿಯು ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್‌ನಲ್ಲಿ ಮೀಸಲು ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿದ್ದು, ಪೊಲೀಸ್‌ ಅತಿಥಿಗೃಹ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಾನು ಕರ್ತವ್ಯ ನಿರ್ವಹಿಸಬೇಕಾದರೆ ನನಗೆ 20,000 ರು. ನೀಡಬೇಕು, ಅಲ್ಲದೆ ಪ್ರತಿ ತಿಂಗಳು 6,000 ರು.ನಂತೆ ಹಣ ನೀಡಬೇಕೆಂದು ಫಿರ್ಯಾದಿದಾರರಿಗೆ ಮಹಮ್ಮದ್‌ ಆರೀಸ್‌ ಬೇಡಿಕೆ ಇರಿಸಿದ್ದರು. ಹೀಗಾಗಿ ಅಧಿಕಾರಿಗೆ ಪ್ರತಿ ತಿಂಗಳು 6,000 ರು.ವನ್ನು ಪಿರ್ಯಾದಿದಾರರು ಲಂಚವಾಗಿ ನೀಡುತ್ತಾ ಬಂದಿದ್ದು, ಈ ವರೆಗೆ ಒಟ್ಟು 50,000 ರು. ಪಡೆದಿದ್ದರು. ಪಿರ್ಯಾದಿದಾರರ ತಂದೆಯವರ ಅನಾರೋಗ್ಯದ ನಿಮಿತ್ತ 2024ರ ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗಿನ ಮೂರು ತಿಂಗಳ 18,000 ರು. ಲಂಚವಾಗಿ ಕೊಡಬೇಕಾದ ಹಣವನ್ನು ಮಹಮ್ಮದ್ ಆರೀಸ್‌ಗೆ ನೀಡಲು ಪಿರ್ಯಾದಿದಾರರಿಗೆ ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಅಧಿಕಾರಿಯು ಪ್ರತಿ ದಿನ ಪಿರ್ಯಾದಿದಾರರಿಗೆ ಕರೆ ಮಾಡಿ, ನೀಡಲು ಬಾಕಿ ಇರುವುದನ್ನು ನೀಡು, ಇಲ್ಲವಾದರೆ ಕರ್ತವ್ಯ ಸ್ಥಳ ಬದಲಾಯಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು.

ಈ ಬಗ್ಗೆ ಪಿರ್ಯಾದಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಬುಧವಾರ 18 ಸಾವಿರ ರು. ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಪೊಲೀಸ್‌ ನಿರೀಕ್ಷಕ ಮಹಮ್ಮದ್ ಆರೀಸ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಎಂ.ಎ ನಟರಾಜ್ ಮಾರ್ಗದರ್ಶನದಲ್ಲಿ ಎಸ್ಪಿ ಡಾ.ಗಾನ ಪಿ.ಕುಮಾರ್‌, ಚೆಲುವರಾಜು, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ, ಸುರೇಶ್ ಕುಮಾರ್, ಚಂದ್ರಶೇಖರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!