ಪರಾರಿಗೆ ಯತ್ನಿಸಿದ ಚಡ್ಡಿಗ್ಯಾಂಗ್‌ಗೆ ಶೂಟೌಟ್‌

KannadaprabhaNewsNetwork |  
Published : Jul 11, 2024, 01:38 AM ISTUpdated : Jul 11, 2024, 12:36 PM IST
ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವುದು | Kannada Prabha

ಸಾರಾಂಶ

ಮಂಗಳೂರು ನಗರದಲ್ಲಿ ಜನತೆಯ ಆತಂತಕ್ಕೆ ಕಾರಣವಾಗಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿ ಬುಧವಾರ ಸ್ಥಳ ಮಹಜರು ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.

 ಮಂಗಳೂರು : ಮಂಗಳೂರು ನಗರದಲ್ಲಿ ಜನತೆಯ ಆತಂತಕ್ಕೆ ಕಾರಣವಾಗಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿ ಬುಧವಾರ ಸ್ಥಳ  ಮಹಜರು ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ ಘಟನೆ ಬುಧವಾರ ನಡೆದಿದೆ.

ಈ ಘಟನೆ ವೇಳೆ ಎಎಸ್‌ಐ ವಿನಯ್‌ ಕುಮಾರ್‌ ಹಾಗೂ ಸಿಬ್ಬಂದಿ ಶರತ್‌ ಗಾಯಗೊಂಡಿದ್ದಾರೆ. ದರೋಡೆಕೋರರಾದ ರಾಜು ಸಿಂಗ್ವಾನಿಯಾ ಎಡ ತೊಡೆಗೆ ಹಾಗೂ ಹಾಗೂ ಇನ್ನೋರ್ವ ಆರೋಪಿ ಬಾಲಿ ಎಂಬಾತನ ಬಲ ಕಾಲಿಗೆ ಗುಂಡೇಟು ತಗಲಿದ್ದು, ಅವರಿಬ್ಬರನ್ನು ವೆನ್ಲಾಕ್‌ ಆಸ್ಪತ್ರೆಗೆ ಹಾಗೂ ಗಾಯಗೊಂಡ ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ಆರೋಪಿಗಳನ್ನು ಆ ಜಾಗಕ್ಕೆ ಕರೆದೊಯ್ದಿದ್ದ ಸಂದರ್ಭ ಈ ಘಟನೆ ನಡೆದಿದೆ.ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡು ಪಣಂಬೂರಿನಿಂದ ಸುಮಾರು 200 ಮೀಟರ್‌ ಮುಂದಕ್ಕೆ ಹೋದಾಗ ವಾಹನ ನಿಲ್ಲಿಸುವಂತೆ ಸೂಚಿಸಿದ ಆರೋಪಿ ರಾಜು ಸಿಂಗ್ವಾನಿಯ, ರಸ್ತೆಯ ಎಡಬದಿಯ ತಗ್ಗಿನ ಪ್ರದೇಶ ತೋರಿಸಿ ಆ ಜಾಗದಲ್ಲಿ ರಾಡ್‌ ಬಿಸಾಡಿದ್ದಾಗಿ ತಿಳಿಸಿದ. ಪೊಲೀಸರು ವಾಹನದಲ್ಲಿ ಆರೋಪಿಗಳಾದ ಮಯೂರ್‌ ಮತ್ತು ವಿಕ್ಕಿಯನ್ನು ಬೆಂಗಾವಲಿನಲ್ಲಿಟ್ಟು ರಾಜು ಸಿಂಗ್ವಾನಿಯಾ ಹಾಗೂ ಬಾಲಿ ಜತೆ ವಾಹನದಿಂದ ಇಳಿದು ಹೋಗುತ್ತಿದ್ದಾಗ, ಕೋಳ ಹಿಡಿದುಕೊಂಡಿದ್ದ ಎಎಸ್‌ಐ ವಿನಯ್‌ರನ್ನು ಆರೋಪಿ ರಾಜು ಸಿಂಗ್ವಾನಿಯಾ ಏಕಾಏಕಿ ಎಳೆದು ಅದು ಕೆಳಗೆ ಬಿದ್ದಾಗ ಕೋಳದಿಂದ ಹಲ್ಲೆ ನಡೆಸಿದ್ದಾನೆ. ಅದೇ ಸಮಯ ಆರೋಪಿ ಬಾಲಿ ಕೂಡಾ ತನ್ನನ್ನು ಹಿಡಿದುಕೊಂಡಿದ್ದ ಸಿಬ್ಬಂದಿ ಶರತ್‌ನ್ನು ಬೀಳಿಸಿ ಹಲ್ಲೆ ಮಾಡಿದ್ದಾನೆ. ಈ ಸಂದರ್ಭ ಪೊಲೀಸ್‌ ನಿರೀಕ್ಷಕಿ ಭಾರತಿ ಗಾಳಿಯಲ್ಲಿ ಗುಂಡುಹಾರಿಸಿ ಎಚ್ಚರಿಕೆ ನೀಡಿದರೂ ಕೇಳದಾಗ ಪೊಲೀಸ್‌ ಸಿಬ್ಬಂದಿಯ ಪ್ರಾಣ ಹಾನಿಯಾಗುವುದನ್ನು ತಪ್ಪಿಸಲು ಭಾರತಿ ಅವರು ರಾಜು ಸಿಂಗ್ವಾನಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿ ಬಾಲಿ ಕೂಡ ಹಲ್ಲೆ ಮುಂದುರಿಸಿದಾಗ ಆತನ ಕಾಲಿಗೂ ಗುಂಡು ಹೊಡೆದಿದ್ದಾರೆ ಎಂದು ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ತಿಳಿಸಿದರು.

ಆರೋಪಿಗಳು ವೃತ್ತಿಪರ ಕಳ್ಳರು: ಉರ್ವಾ ಪೊಲೀಸ್‌ ಠಾಣಾ ವ್ಯಾಪ್ತಿಯ ದೇರೆಬೈಲ್‌ ಗ್ರಾಮದ ಕೋಟೆಕಣಿ ಎಂಬಲ್ಲಿ ಮಂಗಳವಾರ ನಸುಕಿನ ಜಾವ ನಡೆದ ಮನೆಯ ದರೋಡೆ ಪ್ರಕರಣವನ್ನು ಘಟನೆ ನಡೆದ ಐದು ಗಂಟೆಯಲ್ಲಿಯೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ದರೋಡೆಕೋರರನ್ನು ಬಂಧಿಸಿದ್ದರು. ಬಂಧನಕ್ಕೊಳಗಾದ ರಾಜು ಸಿಂಗ್ವಾನಿಯ, ಮಯೂರ್‌, ಬಾಲಿ ಹಾಗೂ ವಿಕ್ಕಿಯನ್ನು ಉರ್ವಾ ಪೊಲೀಸ್‌ ನಿರೀಕ್ಷಕಿ ಭಾರತಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ಹಂತದ ವಿಚಾರಣೆಯ ವೇಳೆ ಈ ನಾಲ್ವರು ವೃತ್ತಿಪರ ಕಳ್ಳರಾಗಿದ್ದು, ಬೆಂಗಳೂರು ನಗರ, ಬೆಂಗಳೂರು ನಗರದ ಹೊರವಲಯ, ಕರಾವಳಿ ಪ್ರದೇಶದಲ್ಲಿ ಕಳವು, ಸುಲಿಗೆ ಮಾಡಿರುವುದು ತಿಳಿದು ಬಂದಿದೆ. ರಾಜು ಸಿಂಗ್ವಾನಿಯಾ ವಿರುದ್ಧ ಮನೆ ಕಳ್ಳತನಕ್ಕೆ ಸಂಬಂಧಿಸಿ ಮಧ್ಯಪ್ರದೇಶ, ಕರ್ನಾಟಕ ಸೇರಿ 10 ಪ್ರಕರಣಗಳು ದಾಖಲಾಗಿದೆ. ಬಾಲಿ ವಿರ್ದು ಮೇಲೆ 2016ರಲ್ಲಿ 2 ಪ್ರಕರಣ, ಮಯೂರ್‌ ವಿರುದ್ಧ ರಾಜಸ್ತಾನದಲ್ಲಿ 1 ಹಾಗೂ ಕರ್ನಾಟಕದಲ್ಲಿ 2 ಪ್ರಕರಣ ದಾಖಲಾಗಿರುವುದಾಗಿ ಅನುಪಮ್‌ ಅಗರ್‌ವಾಲ್‌ ತಿಳಿಸಿದರು.

ಆರೋಪಿಗಳು ದೇರೆಬೈಲು ಗ್ರಾಮದ ಕೋಟೆಕಣಿ ಎಂಬಲ್ಲಿ ವಿಕ್ಟರ್‌ ಮೆಂಡೋನ್ಸಾ ಅವರ ಮನೆಯಲ್ಲಿ ಕಳ್ಳತನಕ್ಕೆ ತೆರಳಿದ್ದ ಸಂದರ್ಭ ಕಬ್ಬಿಣ ತುಂಡರಿಸುವ ಸಾಧನದಿಂದ ಮನೆಯ ಗ್ರಿಲ್‌ ತುಂಡು ಮಾಡಿ ಮನೆ ಒಳಗೆ ನುಗ್ಗಿದ್ದರು. ಮನೆಯೊಳಗಿದ್ದವರು ಎಚ್ಚರಗೊಂಡು ಬೊಬ್ಬೆ ಹೊಡೆಯುವುದು ಅಥವಾ ಹಲ್ಲೆಗೆ ಮುಂದಾದರೆ ತಮ್ಮ ರಕ್ಷಣೆಗಾಗಿ ಆರೋಪಿಗಳು ಮನೆಯ ಹೊರಗೆ ಬಿದ್ದಿದ್ದ ಕಬ್ಬಣದ ರಾಡ್‌ ಒಳಗೆ ಒಯ್ದಿದ್ದಾರೆ. ಕೃತ್ಯದ ಸಮಯ ಮನೆಯ ಮಾಲೀಕ ಬೊಬ್ಬೆ ಹಾಕಿದ ಕಾರಣ ಆತನ ಕಾಲಿಗೆ ಬಲವಾಗಿ ಹೊಡೆದಿದ್ದಾರೆ. ಬಳಿಕ ಚಿನ್ನಾಭರಣ, ನಗದು ಹಾಗೂ ಮನೆಯ ಕಾರು ಒಯ್ಯುವ ವೇಳೆ ಕೃತ್ಯಕ್ಕೆ ಬಳಸಿದ ರಾಡ್‌ನ್ನು ತಮ್ಮ ಜತೆ ಕೊಂಡ ಹೋಗಿದ್ದರು. ಅದನ್ನು ಮೂಲ್ಕಿ ಸಮೀಪದ ಹೆದ್ದಾರಿ ಬಳಿ ಇಳಿಜಾರು ಪ್ರದೇಶದಲ್ಲಿ ಪೊದೆಗೆ ಎಸೆದಿದ್ದರು. ಬಂಧಿತರನ್ನು ಸ್ಥಳ ಮಹಜರಿಗೆ ಪೊಲೀಸ್‌ ಭದ್ರತೆಯಲ್ಲಿ ಕರೆದೊಯ್ಯುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ಘಟನೆ ನಡೆದಿದೆ ಎಂದರು.

ಡಿಸಿಪಿಗಳಾದ ಸಿದ್ಧಾರ್ಥ್‌ ಗೋಯಲ್‌, ದಿನೇಶ್‌ ಕುಮಾರ್‌ ಇದ್ದರು.

ಇನ್‌ಸ್ಪೆಕ್ಟರ್‌ ಭಾರತಿ ತಂಡಕ್ಕೆ 50,000 ರು. ನಗದು

ಘಟನೆ ನಡೆದು ಐದು ಗಂಟೆಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸುಲಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಇನ್‌ಸ್ಪೆಕ್ಟರ್‌ ಭಾರತಿ ನೇತೃತ್ವದ ತನಿಖಾ ತಂಡಕ್ಕೆ ಹಾಗೂ ಉಳಾಯಿಬೆಟ್ಟು ಡಕಾಯಿತಿ ಪ್ರಕರಣ ಬೇಧಿಸಿದ ತಂಡಕ್ಕೆ ತಲಾ 50,000 ರು.ಗಳ ಬಹುಮಾನವನ್ನು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಪ್ರಕಟಿಸಿದರು.

ಸಮರ್ಪಕ ಸಿಸಿ ಕ್ಯಾಮರಾ ಅಳವಡಿಕೆಗೆ ಸಲಹೆ

ದೇರೆಬೈಲ್‌ನ ಕೋಟೆಕಣಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಿಸಿ ಕ್ಯಾಮರಾ ಪ್ರಮುಖ ಪಾತ್ರ ವಹಿಸಿದೆ. ಸಾರ್ವಜನಿಕರು ತಮ್ಮ ಮನೆಗಳ ಮುಖ್ಯ ರಸ್ತೆಗಳಿಗೆ ಹಾಗೂ ಮನೆಗಳ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಕೆಗೆ ಆದ್ಯತೆ ನೀಡಬೇಕು. ಸಿಸಿ ಕ್ಯಾಮರಾ ರಾತ್ರಿ ಹೊತ್ತಿನಲ್ಲೂ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಹಾಗೂ ರೆಕಾರ್ಡಿಂಗ್‌ ವ್ಯವಸ್ಥೆಯನ್ನು ಹೊಂದಿರುವುದನ್ನು ಖಾತರಿಪಡಿಸಬೇಕು. ಪೊಲೀಸರು ಈಗಾಗಲೇ ಬೀಟ್‌ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಮನೆಯಲ್ಲಿ ಒಂಟಿಯಾಗಿ ಇರುವವರು ಹಾಗೂ ಮನೆಯಿಂದ ಹಲವು ದಿನಗಳವರೆಗೆ ಹೊರ ಹೋಗುವುದಿದ್ದರೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಅಂತಹ ಪ್ರದೇಶಗಳಲ್ಲಿ ಬೀಟ್‌ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ