ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಮೇಲೆ ಲೋಕಾ ದಾಳಿ

KannadaprabhaNewsNetwork | Published : Nov 16, 2024 12:32 AM

ಸಾರಾಂಶ

ಲೋಕಾಯುಕ್ತ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಸಂಜೆ ಕಾರವಾರಕ್ಕೆ ಮುಖ್ಯಾಧಿಕಾರಿ ಅವರನ್ನು ಕರೆದೊಯ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಕಾರವಾರ ಲೋಕಾಯುಕ್ತ ಎಸ್ಪಿ ಕಚೇರಿಯ ಸುಮಾರು 14 ಮಂದಿ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಭಟ್ಕಳ: ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು ಫಾರ್ಮ್ ನಂಬರ್ 3 ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸಲು ವ್ಯಕ್ತಿಯೊಬ್ಬರಿಂದ ಶುಕ್ರವಾರ ₹50 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಪಟ್ಟಣದ ಇದ್ರೀಸ್‌ ಮೊಹತೆಶ್ಯಾಂ ಅವರು ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರನ್ನು ಲೋಕಾಯುಕ್ತರ ಬಲೆಗೆ ಬೀಳುವಂತೆ ಮಾಡಿದ್ದಾರೆ. ಈ ಕುರಿತು ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಮಾಹಿತಿ ನೀಡಿದ್ದು, ಇದ್ರೀಸ್‌ ಮೊಹತೆಶ್ಯಾಂ ಅವರ ಚಿಕ್ಕಪ್ಪ ಚೆನ್ನೈ ನಿವಾಸಿಯಾಗಿದ್ದು, ಪುರಸಭೆ ವ್ಯಾಪ್ತಿಯ ಕಿದ್ವಾಯಿ ರಸ್ತೆಯಲ್ಲಿರುವ 20 ಗುಂಟೆ ಜಾಗದಲ್ಲಿ ಮನೆ ಕಟ್ಟಲು 2003ರಲ್ಲಿ ಪುರಸಭೆಯಿಂದ ಪರವಾನಗಿ ಪಡೆದಿದ್ದರು.

ಮನೆಯನ್ನು ಪರವಾನಗಿ ಪಡೆದ ವರ್ಷ ನಿರ್ಮಿಸಲಾಗದೇ 2015ರಲ್ಲಿ ಪೂರ್ಣಗೊಳಿಸಿದ್ದರು. 2024ರ ಜೂನ್‌ನಲ್ಲಿ ಈ ಮನೆಯಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಿ ಫಾರ್ಮ್ ನಂಬರ್ 3 ಮತ್ತು ಒಳಚರಂಡಿ ಸಂಪರ್ಕ ಪಡೆಯಲು ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಫಾರ್ಮ್ ನಂಬರ್ 3 ಮಾಡಲು ಪುರಸಭೆಯ ಮುಖ್ಯಾಧಿಕಾರಿ ಅವರು ₹2 ಲಕ್ಷ ಲಂಚ ಪಡೆದು ₹90 ಸಾವಿರಕ್ಕೆ ಮಾತ್ರ ತೆರಿಗೆ ಪಾವತಿ ನೀಡಿದ್ದಾರೆ. ಆದರೂ ಅರ್ಜಿದಾರರಿಗೆ ಫಾರ್ಮ್ ನಂಬರ್ 3 ನೀಡಿರಲಿಲ್ಲ. ಇದ್ರೀಸ್ ಅವರು ನ. 13ರಂದು ಫಾರ್ಮ್ ನಂ. 3 ಮತ್ತು ಮನೆಯ ಒಳಚರಂಡಿ ಸಂಪರ್ಕಕ್ಕಾಗಿ ಪುರಸಭೆ ಅಧ್ಯಕ್ಷರನ್ನು ಭೇಟಿಯಾಗಿದ್ದು, ಅಧ್ಯಕ್ಷರು ಮುಖ್ಯಾಧಿಕಾರಿಗೆ ಫಾರ್ಮ್ ನಂಬರ್ 3 ಮತ್ತು ಒಳಚರಂಡಿ ಸಂರ್ಪಕ ಬೇಗ ನೀಡುವಂತೆ ಸೂಚಿಸಿದ್ದರು. ಆದರೆ ಮುಖ್ಯಾಧಿಕಾರಿ ಅವರು ಫಾರ್ಮ್ ನಂಬರ್ 3 ಮತ್ತು ಒಳಚರಂಡಿ ಸಂಪರ್ಕಕ್ಕೆ ಮತ್ತೆ ₹1 ಲಕ್ಷ ಕೇಳಿದ್ದು, ₹50 ಸಾವಿರ ಕೊಟ್ಟರೆ ಫಾರ್ಮ್ ನಂ. 3 ಮತ್ತು ಒಳಚರಂಡಿ ಸಂಪರ್ಕ ಕೂಡಲೇ ಕೊಡುವುದಾಗಿ ಹೇಳಿದ್ದರು.

ಇದ್ರೀಸ್ ಅವರು ನಾಳೆ ಬರುತ್ತೇನೆಂದು ಹೇಳಿ ಹೋಗಿದ್ದರು. ಮತ್ತೆ ಹಣ ಕೊಡಲು ಮನಸ್ಸಿಲ್ಲದ ಇದ್ರೀಸ್ ಅವರು ಗುರುವಾರ ಕಾರವಾರದ ಲೋಕಾಯುಕ್ತ ಕಚೇರಿಗೆ ಬಂದು ಘಟನೆ ಬಗ್ಗೆ ದೂರು ಸಲ್ಲಿಸಿದ್ದರು. ಅವರ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಮುಖ್ಯಾಧಿಕಾರಿ ಮೇಲೆ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದಾಗ ₹50 ಸಾವಿರ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ವಾಹನ ಚಾಲಕ ಶಂಕರ ನಾಯ್ಕ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಲೋಕಾಯುಕ್ತ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಸಂಜೆ ಕಾರವಾರಕ್ಕೆ ಮುಖ್ಯಾಧಿಕಾರಿ ಅವರನ್ನು ಕರೆದೊಯ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಕಾರವಾರ ಲೋಕಾಯುಕ್ತ ಎಸ್ಪಿ ಕಚೇರಿಯ ಸುಮಾರು 14 ಮಂದಿ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

Share this article