ಕನ್ನಡಪ್ರಭ ವಾರ್ತೆ ಬೆಳಗಾವಿ
ಖಾನಾಪುರ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದುರದುಂಡೇಶ್ವರ ಬನ್ನೂರ ಹಾಗೂ ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರಗೌಡ ಕುರಡಗಿ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಬನ್ನೂರ ಅವರ ಬೆಳಗಾವಿ ತಾಲೂಕಿನ ಯಳ್ಳೂರು ಮತ್ತು ವಿಜಯ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಪ್ರತಿಯೊಂದು ಕೊಠಡಿಗಳನ್ನು ಪರಿಶೀಲಿಸಲಾಯಿತು. ಈ ಹಿಂದೆಯು ಬನ್ನೂರ ಅವರ ಮನೆಗಳ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದರು. ಅದರ ಮುಂದುವರೆದ ಭಾಗವಾಗಿ ಮತ್ತೆ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಅವರ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳ ಶೋಧನೆ ಕಾರ್ಯ ನಡೆದಿದೆ.ಮತ್ತೊಬ್ಬ ಅಧಿಕಾರಿ ಶೇಖರಗೌಡ ಕುರಡಗಿ ಅವರ ಬೆಳಗಾವಿಯ ವಿದ್ಯಾಗಿರಿಯ 1ನೇ ಕ್ರಾಸಿನಲ್ಲಿರುವ ಮನೆ ಹಾಗೂ ಗಣೇಶಪುರದಲ್ಲಿರುವ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದರು.