ಕನ್ನಡಪ್ರಭ ವಾರ್ತೆ ತುಮಕೂರು
ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಲೋಕಾಯುಕ್ತ ಎಸ್ಪಿ ವಲಿಬಾಷ ನೇತೃತ್ವದಲ್ಲಿ ಬೆಂಗಳೂರು ಮತ್ತು ತುಮಕೂರಿನ ಸುಮಾರು 25 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ಇಡೀ ಕಚೇರಿಯನ್ನು ತಮ್ಮ ಹಿಡಿತಕ್ಕೆ ಪಡೆದು ವಿವಿಧ ಶಾಖೆಗಳಲ್ಲಿ ಅಗತ್ಯ ದಾಖಲಾತಿಗಳ ಪರಿಶೀಲನೆ ನಡೆಸಿದರು.
6 ವಾಹನಗಳಲ್ಲಿ ಬಂದಿರುವ ಲೋಕಾಯುಕ್ತ ಅಧಿಕಾರಿಗಳು ಮಹಾನಗರ ಪಾಲಿಕೆಯ ಕಂದಾಯ ಶಾಖೆ, ಎಂಜಿನಿಯರ್ ಶಾಖೆ, ಆರೋಗ್ಯ ಶಾಖೆ, ಯುಜಿಡಿ ಸೇರಿದಂತೆ ವಿವಿಧ ಶಾಖೆಗಳಿಗೆ ತೆರಳಿ ಅಗತ್ಯ ಕಡತಗಳು, ದಾಖಲಾತಿಗಳ ತಪಾಸಣೆ ನಡೆಸಿದರು.ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಕೇಳಿ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪಾಲಿಕೆಯ ವಿವಿಧ ಶಾಖೆಗಳನ್ನು ಜಾಲಾಡಿದರು.
ಮಹಾನಗರ ಪಾಲಿಕೆಯ ಹೊಸ ಆಡಳಿತ ಕಚೇರಿ ಸೇರಿದಂತೆ ಇಡೀ ಮಹಾನಗರ ಪಾಲಿಕೆಯ ಕಚೇರಿ ಆವರಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ಸಂಪೂರ್ಣ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ತಮ್ಮ ಕೆಲ ಕಾರ್ಯಗಳಿಗಾಗಿ ಪಾಲಿಕೆ ಕಚೇರಿಗೆ ಬಂದಿದ್ದ ಸಾರ್ವಜನಿಕರು ಸಹ ಹೊರ ಬರಲಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಹಾನಗರ ಪಾಲಿಕೆಯ ಎಲ್ಲ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಕಲೆ ಹಾಕಿದರು.ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ವಲಿಭಾಷ, ಡಿವೈಎಸ್ಪಿ ಉಮಾಶಂಕರ್, ಇನ್ಸ್‌ಪೆಕ್ಟರ್ ರಾಮಕೃಷ್ಣ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.