ಕಂಪ್ಲಿ: ತಾಲೂಕಿನ ದೇವಸಮುದ್ರ ಮತ್ತು ರಾಮಸಾಗರ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡವು ದಿಢೀರ್ ಭೇಟಿ ನೀಡಿ, ಆಸ್ಪತ್ರೆಗಳ ಕಾರ್ಯವೈಖರಿ ಹಾಗೂ ಸೌಲಭ್ಯಗಳ ಸ್ಥಿತಿ ಪರಿಶೀಲಿಸಿದರು.
ಆಸ್ಪತ್ರೆಯ ಒಳಾಂಗಣ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರೋಗಿಗಳಿಗೆ ದೊರೆಯುತ್ತಿರುವ ಸೇವೆಗಳ ಬಗ್ಗೆ ಸ್ಥಳದಲ್ಲಿಯೇ ಮಾಹಿತಿ ಪಡೆದರು.
ಇನ್ನು ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ನೇರವಾಗಿ ಮಾತನಾಡಿ, ಆಸ್ಪತ್ರೆಯ ಸೇವೆಗಳ ಕುರಿತು ಅವರ ಅಭಿಪ್ರಾಯ ಹಾಗೂ ಅಸಮಾಧಾನಗಳನ್ನು ಕೇಳಿಕೊಂಡರು. ರೋಗಿಗಳಿಂದ ಬಂದ ಅಸಮಾಧಾನಗಳನ್ನು ದಾಖಲು ಮಾಡಿ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಈ ವೇಳೆ ಬಳ್ಳಾರಿಯ ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳು ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಪ್ರಮುಖ ತಾಣಗಳು. ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಔಷಧಿ ಹೊರಗಡೆ ಖರೀದಿಸಲು ರೋಗಿಗಳನ್ನು ಸೂಚಿಸಬಾರದು. ಯಾವುದೇ ರೀತಿಯ ಲಂಚ, ಆಮೀಷ ಅಥವಾ ಅಕ್ರಮ ವ್ಯವಹಾರಗಳಿಗೆ ತೊಡಗದಂತೆ ಎಚ್ಚರವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಸಾಗರ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಜಿ. ಅರುಣ್, ದೇವಸಮುದ್ರ ಪಿಎಚ್‌ಸಿ ವೈದ್ಯಾಧಿಕಾರಿ ಡಾ. ರುಕ್ಮಿಣಿ, ಆಸ್ಪತ್ರೆ ಸಿಬ್ಬಂದಿ ಹಾಗೂ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.