ಶಿರಸಿ: ಮನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿಗೆ ನಗರಸಭೆ ಸದಸ್ಯ ಮತ್ತು ಅಧಿಕಾರಿ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿದೆ.
ಶಿರಸಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಗಣಪತಿ ನಾಯ್ಕ ಮತ್ತು ಕಂದಾಯ ಅಧಿಕಾರಿ ಆರ್.ಎಂ. ವೆರ್ಣೇಕರ ಅವರನ್ನು ನಗರದ ಎಪಿಎಂಸಿ ಹೊರಾಂಗಣದ ಜಿಯೋ ಕಚೇರಿ ಸಮೀಪದಲ್ಲಿ ರಮೇಶ ಹೆಗಡೆ ಎಂಬುವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಬಂಧಿಸಲಾಗಿದೆ. ಇದೇ ಗಣಪತಿ ನಾಯ್ಕ ಪೈಪ್ ಕಳ್ಳತನ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ.ಘಟನೆಯ ವಿವರ:
ನಗರಸಭೆ ಹಿಂಬದಿ ವಾಸವಿರುವ ರಮೇಶ ಹೆಗಡೆ ಹಾಗೂ ನಗರಸಭೆ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಲ್ಲಿ ಪ್ರಕರಣವಿತ್ತು. 2016ರಲ್ಲಿ ಅರ್ಜಿದಾರರ ಹಿತಕ್ಷರಣೆಯಂತೆ ನಗರಸಭೆ ನಿಯಮಾವಳಿ ಪ್ರಕಾರ ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ. ಬಳಿಕ 2025ರಲ್ಲಿ 9 ವರ್ಷ ಬಳಿಕ ರಮೇಶ ಹೆಗಡೆಗೆ ನಗರಸಭೆಯಿಂದ ಜಾಗ ಮತ್ತು ಮನೆ ಖಾಲಿ ಮಾಡುವಂತೆ ನೊಟೀಸ್ ನೀಡಲಾಗಿದೆ. ಬಳಿಕ ಎರಡನೇ, ಮೂರನೇ ನೊಟೀಸ್ ನೀಡಲಾಗಿದೆ. ಅದಾದ ನಂತರ ರಮೇಶ ಹೆಗಡೆ ಹೈಕೋರ್ಟ್‌ನಲ್ಲಿ ರಿಟ್ ದಾಖಲಿಸುತ್ತಾರೆ. ನಗರಸಭೆ ಅಂತಿಮ ನಿರ್ಣಯ ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ. ನಂತರ ಕಳೆದ ಜುಲೈ 4 ರಂದು ರಮೇಶ ಹೆಗಡೆ ಮನೆಗೆ ಗಣಪತಿ ನಾಯ್ಕ ಹಾಗೂ ಆರ್.ಎಂ. ವೆರ್ಣೇಕರ ಭೇಟಿ ನೀಡಿ ₹3 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಪ್ರಕರಣ ಮುಗಿಸುವುದಾಗಿ ತಿಳಿಸುತ್ತಾರೆ. ಬಳಿಕ ಜುಲೈ 8 ರಂದು ನಗರಸಭೆಗೆ ರಮೇಶ ಹೆಗಡೆ ಕರೆಸಿಕೊಂಡು ಹಣದ ಕುರಿತು ವಿಚಾರಿಸಿದ್ದು, ಶೀಘ್ರ ತಿಳಿಸಲು ಹೇಳುತ್ತಾರೆ. ಆದರೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ಲೋಕಾಯುಕ್ತದಲ್ಲಿ ರಮೇಶ ಹೆಗಡೆ ದೂರು ದಾಖಲಿಸಿದ್ದಾರೆ ಎಂದು ಲೋಕಾಯುಕ್ತ ಎಸ್ಪಿ ಕುಮಾರಚಂದ ತಿಳಿಸಿದ್ದಾರೆ.ನಗರಸಭೆ ಸದಸ್ಯ ಗಣಪತಿ ನಾಯ್ಕ ಕಾರಿನಲ್ಲಿ ₹3 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಲಾಗಿದೆ. ಮೊದಲಿಗೆ ವೆರ್ಣೇಕರ್ ಲಂಚ ಪಡೆದಿದ್ದು, ಬಳಿಕ ಅದನ್ನು ಗಣಪತಿ ನಾಯ್ಕ ಅವರಿಗೆ ನೀಡಿದ್ದಾರೆ. ಬಂಧಿತರು ಯಾವುದೇ ಬೇರೆ ಹೆಸರು ಹೇಳಿಲ್ಲ. ಅವರನ್ನು ಕಾರವಾರದಲ್ಲಿ ನ್ಯಾಯಾಲಕ್ಕೆ ಹಾಜರು ಪಡಿಸಲಾಗುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದರು. ಈ ವೇಳೆ ಲೋಕಾಯುಕ್ತ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ಇದ್ದರು.