ಶಿಕ್ಷಣ ಇಲಾಖೆಯ 12 ಕಚೇರಿಮೇಲೆ ಲೋಕಾಯುಕ್ತ ದಾಳಿ

KannadaprabhaNewsNetwork |  
Published : Dec 04, 2025, 04:15 AM IST

ಸಾರಾಂಶ

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಬಗ್ಗೆ ಸಾಲು ಸಾಲು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಲಾಖೆಯ ವಿವಿಧೆಡೆ ಇರುವ 12 ಕಚೇರಿಗಳ ಮೇಲೆ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಬಗ್ಗೆ ಸಾಲು ಸಾಲು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಲಾಖೆಯ ವಿವಿಧೆಡೆ ಇರುವ 12 ಕಚೇರಿಗಳ ಮೇಲೆ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಆದೇಶದ ಮೇರೆಗೆ, ಬೆಂಗಳೂರಿನ ಜಂಟಿ ನಿರ್ದೇಶಕರ (ಆಡಳಿತ) ಕಚೇರಿ, ಉಪ ನಿರ್ದೇಶಕರ (ಸಾರ್ವಜನಿಕ ಶಿಕ್ಷಣ ಇಲಾಖೆ) ಕಚೇರಿ ಹಾಗೂ 9 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಸೇರಿದಂತೆ ಒಟ್ಟು 12 ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸಾರ್ವಜನಿಕರಿಂದ ಬಂದಂತಹ ದೂರುಗಳ ಆಧಾರದ ಮೇಲೆ ಸತ್ಯಾಸತ್ಯತೆಯನ್ನು ಅರಿಯಲು ಲೋಕಾಯುಕ್ತ ಅಧಿಕಾರಿಗಳು ಗೌಪ್ಯ ತನಿಖೆ ನಡೆಸಿದ್ದರು. ಆರೋಪಗಳಲ್ಲಿ ಹುರುಳಿದೆ ಎಂದು ಖಚಿತವಾದ ಬಳಿಕ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಲಾಗಿದೆ.

ನ್ಯಾಯಾಂಗ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 12 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, 12 ಶೋಧನಾ ವಾರಂಟ್‌ಗಳೊಂದಿಗೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಭ್ರಷ್ಟಾಚಾರದ ಪುರಾವೆಗಳನ್ನು ಜಪ್ತಿ ಮಾಡುವ ಪ್ರಕ್ರಿಯೆ ತಡರಾತ್ರಿಯವರೆಗೂ ಮುಂದುವರಿಯಿತು. ತನಿಖೆಯ ನಂತರವಷ್ಟೇ ಯಾವ ಕಚೇರಿಯಲ್ಲಿ ಎಷ್ಟು ಪ್ರಮಾಣದ ಅಕ್ರಮ ನಡೆದಿದೆ ಎಂಬ ಮಾಹಿತಿ ಹೊರಬೀಳಲಿದೆ.

ಮಹತ್ವದ ದಾಖಲೆಗಳು ಜಪ್ತಿ:

ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ತನಿಖೆಯ ನಂತರವಷ್ಟೇ ಯಾವ ಕಚೇರಿಯಲ್ಲಿ ಎಷ್ಟು ಪ್ರಮಾಣದ ಅಕ್ರಮ ನಡೆದಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಅವ್ಯವಹಾರ ನಡೆದಿರುವುದು ಪತ್ತೆ:

ಖಾಸಗಿ ಶಾಲೆಗಳ ನೋಂದಣಿ, ಮಾನ್ಯತೆ ನವೀಕರಣದಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಲಂಚಕ್ಕೆ ಬೇಡಿಕೆ. ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಖಾಸಗಿ ಶಾಲೆಗಳಿಗೆ ಅನಗತ್ಯ ಭೇಟಿ ನೀಡಿ ಕಿರುಕುಳ ನೀಡುವುದು ಮತ್ತು ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಅನುದಾನ ಬಳಕೆಯಲ್ಲಿ ಅವ್ಯವಹಾರ. ಅತಿಥಿ ಶಿಕ್ಷಕರ ಗೌರವ ಧನ ಮಂಜೂರಾತಿಯಲ್ಲೂ ಭ್ರಷ್ಟಾಚಾರ ನಡೆಸಲಾಗಿದೆ. ಶಾಲೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮತ್ತು ಮದ್ಯ ಮಾರಾಟ ನಿಷೇಧವಿದ್ದರೂ, ಈ ನಿಯಮ ಪಾಲನೆಯಾಗದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು. ಶಾಲಾ ಆಟದ ಮೈದಾನ ಮತ್ತು ಕಟ್ಟಡಗಳ ಭೂ ಪರಿವರ್ತನೆಯಲ್ಲಿ ಅವ್ಯವಹಾರ ನಡೆದಿರುವುದು ದಾಖಲೆಗಳ ಮೂಲಕ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ.

ದೂರುಗಳ ಸುರಿಮಳೆ:

ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಲಂಚಕ್ಕಾಗಿ ಸಾರ್ವಜನಿಕರನ್ನು ಹಾಗೂ ಶಿಕ್ಷಕರನ್ನು ಪೀಡಿಸುತ್ತಿದ್ದಾರೆ ಎಂದು ಲೋಕಾಯುಕ್ತಕ್ಕೆ ನಿರಂತರ ದೂರುಗಳು ಬಂದಿದ್ದವು. ಹೀಗಾಗಿ ಕಾರ್ಯಾಚರಣೆ ನಡೆಸಲಾಗಿದೆ. ರಜೆ ಮಂಜೂರಾತಿ, ವೇತನ, ಬಡ್ತಿ, ವರ್ಗಾವಣೆ, ನಿವೃತ್ತಿ ವೇತನ ಮತ್ತು ಶಿಸ್ತು ಕ್ರಮದ ಕಡತಗಳ ವಿಲೇವಾರಿಗೆ ಲಂಚದ ಬೇಡಿಕೆ ಹಾಗೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಅನುಕಂಪದ ಆಧಾರದ ನೌಕರಿ, ವಿದ್ಯಾರ್ಥಿಗಳ ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ತಿದ್ದುಪಡಿಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಗೌರವಗಳೊಂದಿಗೆ ದೇವರಾಜ್‌ ಅಂತ್ಯಕ್ರಿಯೆ
28 ಕೋಟಿಯ ಡ್ರಗ್ಸ್ ಜಪ್ತಿ: 2 ವಿದೇಶಿ ಪೆಡ್ಲರ್ಸ್‌ ಸೆರೆ