27 ಪಡಿತರ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ

KannadaprabhaNewsNetwork |  
Published : Jun 13, 2026, 03:45 AM IST
Lokayuktha raid (2) | Kannada Prabha

ಸಾರಾಂಶ

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು ಗೋದಾಮಿನಲ್ಲಿ ಆಹಾರ ಧಾನ್ಯಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿವಿಧ ಗೋದಾಮುಗಳಿಂದ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುವ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರು ನಗರ ಜಿಲ್ಲೆಯ 22 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಕಡೆ ಸೇರಿ ಒಟ್ಟು 27 ಕಡೆ ಲೋಕಾಯುಕ್ತ ಪೊಲೀಸರು ಹಾಗೂ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಈ ಅಕ್ರಮಗಳ ಸಂಬಂಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್‌ ಅವರು ಈ ಸಂಬಂಧ ಗೌಪ್ಯ ತನಿಖೆ ನಡೆಸಿ ವರದಿ ಸಲ್ಲಿಸಲು ಲೋಕಾಯುಕ್ತ ಎಸ್ಪಿಗೆ ಸೂಚಿಸಿದ್ದರು. ಅದರಂತೆ ಸಲ್ಲಿಕೆಯಾದ ಗೌಪ್ಯ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸರ್ಕಾರಿ ಹಾಗೂ ಖಾಸಗಿ ಗೋದಾಮುಗಳ ಮೇಲೆ ಈ ದಾಳಿ ನಡೆಸಲಾಗಿದೆ. ಪರಿಶೀಲನೆ ವೇಳೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು ಯಶವಂತಪುರ ಯಾರ್ಡ್‌ನ ಮೂರು ಗೋದಾಮುಗಳಿಗೆ ಖದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಯಶವಂತಪುರ ಯಾರ್ಡ್‌ನ ವಿಜಯನಗರ-1ರ ಕೆಎಫ್‌ಸಿಎಸ್‌ಸಿ ಗೋದಾಮಿನ ಗೇಟ್ ಬಳಿ ಒಂದು ಖಾಸಗಿ ಕ್ಯಾಂಟರ್‌ ವಾಹನಕ್ಕೆ ಯಾವುದೇ ಬಿಲ್ ತಯಾರಿಸದೆ 120 ಕ್ವಿಂಟಾಲ್‌ ಅಕ್ಕಿ (240 ಚೀಲ) ತುಂಬಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಹಾಜರಿದ್ದ ಗೋದಾಮಿನ ಮ್ಯಾನೇಜರ್‌ ನರಸಿಂಹಗೌಡ ಅವರನ್ನು ಪ್ರಶ್ನಿಸಿದಾಗ ಈ ಅಕ್ಕಿ ಚೀಲಗಳನ್ನು ಮೈಸೂರು ರಸ್ತೆಯ ಅಕ್ರಮ ಪಾಷಾ ಎಂಬುವವರ ನ್ಯಾಯಬೆಲೆ ಅಂಗಡಿಗೆ ಕಳುಹಿಸಲಾಗುತ್ತಿದೆ. ಬಿಲ್ ತಯಾರಿಸುವುದಾಗಿ ತಡೆವಾಗಿದೆ ಎಂದು ಉತ್ತರಿಸಿದ್ದಾರೆ.

120 ಕ್ವಿಂಟಾಲ್ ಅಕ್ಕಿ ಜಪ್ತಿ:

ಈ ವೇಳೆ ಅಲ್ಲೇ ಇದ್ದ ಅಕ್ರಮ ಪಾಷಾನನ್ನು ಪ್ರಶ್ನಿಸಿದಾಗ ಆರಂಭದಲ್ಲಿ ನನ್ನ ನ್ಯಾಯಬೆಲೆ ಅಂಗಡಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಬಿಲ್‌ ಹಾಗೂ ಇತರೆ ವಿವರ ಕೇಳಿದಾಗ ಈ ಅಕ್ಕಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಈ ಸಂಬಂಧ ಗೋದಾಮಿನ ಮ್ಯಾನೇಜರ್ ಮತ್ತು ಇತರೆ ಸಿಬ್ಬಂದಿಗಳ ವಿರುದ್ಧ ದೂರು ನೀಡಿ ಆ ಕ್ಯಾಂಟರ್‌ ವಾಹನದಲ್ಲಿ ಅಕ್ರಮವಾಗಿ ತುಂಬಿದ್ದ ಅಕ್ಕಿಯನ್ನು ವಶಪಡಿಸಿಕೊಳ್ಳಲು ಲೋಕಾಯುಕ್ತ ನ್ಯಾಯಮೂರ್ತಿ ಸೂಚಿಸಿದ್ದಾರೆ.

100 ಕ್ವಿಂಟಾಲ್‌ ಅಕ್ಕಿಗೆ ಲೆಕ್ಕವೇ ಇಲ್ಲ:

ಯಶವಂತಪುರ ಯಾರ್ಡ್‌ನ ಎನ್‌ಜಿಜಿ-1 ಗೋದಾಮಿಗೆ ಭೇಟಿ ನೀಡಿದಾಗ ಆ ಗೋದಾಮಿಗೆ ಬಂದಿರು ದಾಸ್ತಾನು ಮತ್ತು ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಿರುವ ಆಹಾರ ಧಾನ್ಯಗಳ ಕಡತ ಪರಿಶೀಲಿಸಿದಾಗ, ಬಿಲ್‌ ಇಲ್ಲದೆ 100 ಕ್ವಿಂಟಲ್‌ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗೋದಾಮಿನ ಮ್ಯಾನೇಜರ್‌ ನಾರಾಯಣ್‌ ಮತ್ತು ಕಂಪ್ಯೂಟರ್‌ ಆಪರೇಟರ್‌ ಶಂಕರ್‌ ಅವರನ್ನು ಪ್ರಶ್ನಿಸಿದಾಗ, ಕನ್ನಡ ಗೆಳೆಯ ಬಳಗ ನ್ಯಾಯಬೆಲೆ ಅಂಗಡಿಗೆ ಈ ನೂರು ಕ್ವಿಂಟಾಲ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಇಬ್ಬರು ಪೊಲೀಸರ ವಶಕ್ಕೆ:

ಈ ನ್ಯಾಯಬೆಲೆ ಅಂಗಡಿ ಮಾಲೀಕರಾದ ರಾಧಾ ಅವರಿಗೆ ಲೋಕಾಯುಕ್ತ ಪೊಲೀಸರು ಕರೆ ಮಾಡಿ ವಿಚಾರಿಸಿದಾಗ, ನಮಗೆ ಯಾವುದೇ ಅಕ್ಕಿ ಚೀಲ ಬಂದಿಲ್ಲ. ನಾವು ಇಂಡೆಂಟ್ ಹಾಕಿಲ್ಲ ಎಂದಿದ್ದಾರೆ. ಈ ವೇಳೆ ಮ್ಯಾನೇಜರ್‌ ನಾರಾಯಣ ಮತ್ತು ಕಂಪ್ಯೂಟರ್‌ ಆಪರೇಟರ್‌ ಶಂಕರ್‌ ಸಮರ್ಪಕ ಉತ್ತರ ನೀಡಲು ತಡಬಡಾಯಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಯಶವಂತಪುರ ಪೊಲೀಸರಿಗೆ ಈ ಇಬ್ಬರನ್ನು ಒಪ್ಪಿಸಿ, ಈ 100 ಕ್ವಿಂಟಾಲ್‌ ಅಕ್ಕಿ ಅಕ್ರಮ ಸಾಗಣೆಯ ಜಾಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಬಿ.ಎಸ್‌.ಪಾಟೀಲ್‌ ಸೂಚಿಸಿದ್ದಾರೆ.

ಹಲವು ಲೋಷದೋಷಗಳು ಪತ್ತೆ:

ಅಂತೆಯೆ ಉಪ ಲೋಕಾಯುಕ್ತರಾದ ಕೆ.ಎನ್‌.ಫಣೀಂದ್ರ ಮತ್ತು ಬಿ.ವೀರಪ್ಪ ಅವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ನಗರದ ವಿವಿಧ ಗೋದಾಮುಗಳು, ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಬಹುತೇಕ ಗೋದಾಮುಗಳಲ್ಲಿ ಅಕ್ರಮಗಳು, ಲೋಪದೋಷಗಳು ಕಂಡು ಬಂದಿವೆ. ಗೋದಾಮಿನಲ್ಲಿರುವ ದಾಸ್ತಾನು ಮತ್ತು ಲೆಕ್ಕಪುಸ್ತಕದಲ್ಲಿ ನಮೂದಿಸಿರುವ ಆಹಾರ ಧಾನ್ಯಗಳ ಲೆಕ್ಕೂ ತಾಳೆ ಆಗದೇ ಇರುವುದು ಕಂಡು ಬಂದಿದೆ. ಗೋದಾಮುಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯ ಲೋಪ ಎಸೆಗಿರುವುದು ಬೆಳಕಿಗೆ ಬಂದಿದೆ. ಬಹುತೇಕ ಕಡೆ ಸರಿಯಾದ ದಾಖಲೆ ನಿರ್ವಹಿಸದಿರುವುದು, ಗೋದಾಮುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೌಕರ್ಯ ಕಲ್ಪಿಸದಿರುವುದು ಸೇರಿದಂತೆ ಹಲವು ಲೋಪದೋಷಗಳು ಕಂಡು ಬಂದಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ನೇತೃತ್ವದಲ್ಲಿ ಉದ್ಯೊಗಾಧಾರಿತಕೈಗಾರಿಕೆಗಳಿಗೆ ಉತ್ತೇಜನ: ಎಚ್‌ಡಿಕೆ
ಹತ್ಯೆಯನ್ನು ಮುಚ್ಚಿ ಹಾಕಲು ಹೆತ್ತವಳೇ ಸಾಥ್‌