ಮೂವರು ಅಧಿಕಾರಿಗಳ ಮನೆ-ಕಚೇರಿಗೆ ಲೋಕಾಯುಕ್ತ ದಾಳಿ

KannadaprabhaNewsNetwork |  
Published : Jun 17, 2026, 01:30 AM IST
16ಕೆಡಿವಿಜಿ7-ದಾವಣಗೆರೆಯಲ್ಲಿ ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಯೊಬ್ಬರ ಮನೆಯಲ್ಲಿ ಪತ್ತೆಯಾದ ನಗದು, ಚಿನ್ನಾಭರಣ, ಬೆಳ್ಳಿ ಆಭರಣ, ವಸ್ತುಗಳು. | Kannada Prabha

ಸಾರಾಂಶ

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇರೆಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಅಧಿಕಾರಿಗಳ ಕಚೇರಿಗಳ ಜೊತೆಗೆ ದಾವಣಗೆರೆ ನಿವಾಸಗಳು ಸೇರಿದಂತೆ ಒಟ್ಟು 12 ಕಡೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ, ಅಪಾರ ಸಂಪತ್ತು, ಆಸ್ತಿಪತ್ರಗಳನ್ನು ಪತ್ತೆ ಮಾಡಲಾಗಿದೆ.

- ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ, ಎನ್‌ಡಬ್ಲ್ಯು ಕೆಎಸ್ಸಾರ್ಟಿಸಿ ಅಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌ ನಿವಾಸ, ಕೆಆರ್‌ಐಡಿಎಲ್ ಎಸ್‌ಇ ಸಣ್ಣ ಕೆಂಚಪ್ಪ ಮನೆ, ಕಚೇರಿ ಪರಿಶೀಲನೆ । ಒಟ್ಟು 12 ಕಡೆ ದಾಳಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇರೆಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಅಧಿಕಾರಿಗಳ ಕಚೇರಿಗಳ ಜೊತೆಗೆ ದಾವಣಗೆರೆ ನಿವಾಸಗಳು ಸೇರಿದಂತೆ ಒಟ್ಟು 12 ಕಡೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ, ಅಪಾರ ಸಂಪತ್ತು, ಆಸ್ತಿಪತ್ರಗಳನ್ನು ಪತ್ತೆ ಮಾಡಲಾಗಿದೆ.

ಚಿತ್ರದುರ್ಗದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ, ಹುಬ್ಬಳ್ಳಿಯ ಎನ್‌ಡಬ್ಲ್ಯು ಕೆಎಸ್ಸಾರ್ಟಿಸಿ ಮುಖ್ಯ ಯಾಂತ್ರಿಕ (ಮೆಕ್ಯಾನಿಕಲ್) ವಿಭಾಗದ ಎಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಹಾಗೂ ಕೆಆರ್ಐಡಿಎಲ್ ಅಧೀಕ್ಷಕ ಅಭಿಯಂತರ ಸಣ್ಣ ಕೆಂಚಪ್ಪ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡಗಳು ದಾಳಿ ನಡೆಸಿವೆ.

ಇಲ್ಲಿನ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಕೃಷ್ಣಾ ನಾಯ್ಕರ ಎರಡು ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಆಂಜನೇಯ ಬಡಾವಣೆಯಲ್ಲಿರುವ ಸಿದ್ದೇಶ್ವರ ಹೆಬ್ಬಾಳ್‌ ನಿವಾಸ ಹಾಗೂ ಇತರೆಡೆ ಹಾಗೂ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಸಣ್ಣ ಕೆಂಚಪ್ಪ ನಿವಾಸದ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು, ಆಸ್ತಿಪತ್ರ, ನಗದು, ಚಿನ್ನ-ಬೆಳ್ಳಿ ಇತರೆ ಆಭರಣಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸಣ್ಣ ಕೆಂಚಪ್ಪನವರ ಶಿವಕುಮಾರ ಸ್ವಾಮಿ ಬಡಾವಣೆ ಮನೆ, ಹರಪನಹಳ್ಳಿಯಲ್ಲಿರುವ ಮನೆ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಗಿದೆ. ಮೂವರೂ ಅಧಿಕಾರಿಗಳ ಕಚೇರಿಗಳು, ಮನೆ, ಇತರೆ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಪ್ರತ್ಯೇಕ ತಂಡಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದು, ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದ ದಾಖಲೆ ಕಲೆ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ದಾಳಿ ವೇಳೆ ಅಧಿಕಾರಿಗಳ ಮನೆಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಚರ ಮತ್ತು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿವೆ ಎನ್ನಲಾಗಿದೆ. ಹುಬ್ಬಳ್ಳಿಯ ಎನ್‌ಡಬ್ಲ್ಯು ಕೆಎಎಸ್ಆರ್‌ಟಿಸಿ ಮುಖ್ಯ ಯಾಂತ್ರಿಕ ಎಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ನಿವಾಸದಲ್ಲಿ ಸುಮಾರು ₹40 ಲಕ್ಷ ನಗದು ಪತ್ತೆಯಾಗಿದೆ. ಮೂವರೂ ಅಧಿಕಾರಿಗಳ ಮನೆಗಳು, ಅವರವರ ಕಚೇರಿ ಇತರೆಡೆ ಮಂಗಳವಾರ ಸಂಜೆಯೂ ಪರಿಶೀಲನೆ ಕಾರ್ಯ ಮುಂದುವರಿದಿತ್ತು. ಎಲ್ಲೆಲ್ಲಿ ಸ್ಥಿರ ಮತ್ತು ಚರಾಸ್ಥಿ ಹೊಂದಿದ್ದಾರೆಂಬ ಬಗ್ಗೆಯೂ ಶೋಧ ಮುಂದುವರಿದಿದೆ. ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ, ದಾಳಿಯಲ್ಲಿ ಪತ್ತೆಯಾದ ದಾಖಲೆಗಳು, ನಗದು, ಸ್ಥಿರ ಮತ್ತು ಚರಾಸ್ಥಿಗಳ ದಾಖಲೆಗಳು ಇತರೆ ಎಲ್ಲವುಗಳ ಮೌಲ್ಯಮಾನಪ ಪ್ರಕ್ರಿಯೆ ಮುಂದುವರಿದಿದೆ. ಪರಿಶೀಲನೆ ಪೂರ್ಣಗೊಂಡ ನಂತರ ಸಂಪೂರ್ಣ ವಿವರಗಳನ್ನು ಅಧಿಕೃತವಾಗಿ ನೀಡುವುದಾಗಿ ಪ್ರತಿಕ್ರಿಯಿಸಿದ್ದಾರೆ. ಮೂವರು ಅಧಿಕಾರಿಗಳ ನಿವಾಸಳ ಮೇಲೆ ದಿಢೀರನೇ ಲೋಕಾಯುಕ್ತರ ದಾಳಿ ನಡೆಸಿರುವುದು ಸರ್ಕಾರಿ ಅಧಿಕಾರಿಗಳ ವಲಯದಲ್ಲಿ ಒಂದಿಷ್ಟು ಕಳವಳ, ಆತಂಕವನ್ನು ತಂದಿರುವುದು ಸುಳ್ಳಲ್ಲ.

. . .

-16ಕೆಡಿವಿಜಿ7:

ದಾವಣಗೆರೆಯಲ್ಲಿ ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಯೊಬ್ಬರ ಮನೆಯಲ್ಲಿ ಪತ್ತೆಯಾದ ನಗದು, ಚಿನ್ನಾಭರಣ, ಬೆಳ್ಳಿ ಆಭರಣ, ವಸ್ತುಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ ಮರು ಪರೀಕ್ಷೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ: ಡಾ.ಕುಮಾರ
ಮತದಾರರ ಪಟ್ಟಿ ನಿಖರವಾಗಿ ಪರಿಷ್ಕರಿಸಿ: ಪಿ.ರವಿಕುಮಾರ್