ಕನ್ನಡಪ್ರಭ ವಾರ್ತೆ ಹಳಿಯಾಳ
ಸಿದ್ಧಾಪುರದ ಕೋಲ ಸಿರ್ಸಿ ಗ್ರೂಪ್‌ನ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ ಸಿಇಒ ಮಾರುತಿ ಯಶ್ವಂತ ಮಾಳ್ವಿಯವರ ಪಟ್ಟಣದಲ್ಲಿರುವ ಮನೆ ಹಾಗೂ ವಾಣಿಜ್ಯ ಮಳಿಗೆ ಮೇಲೆ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವ ಆರೋಪದಡಿ ಪಟ್ಟಣದಲ್ಲಿರುವ ಮನೆ ಹಾಗೂ ಸೇವೆ ಸಲ್ಲಿಸುತ್ತಿರುವ ಸಿದ್ದಾಪುರದ ತಾಲೂಕಿನಲ್ಲಿ ಏಕಕಾಲದಲ್ಲಿ ಲೋಕಾ ತಂಡದಿಂದ ದಾಳಿ ನಡೆದಿದೆ.ದಾಳಿಯ ಸಮಯದಲ್ಲಿ ಮಾಳ್ವಿಯವರು ಇದ್ದಿರಲಿಲ್ಲ, ಅವರು ನಾಲ್ಕು ದಿನಗಳ ಹಿಂದೇ ಪತ್ನಿಯ ಜೊತೆ ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ.
ಹಳಿಯಾಳದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ್ ಮುಂದಾಳತ್ವದಲ್ಲಿ ದಾಳಿ ನಡೆಯಿತು. ದಾಳಿಯ ಸಮಯದಲ್ಲಿ ದಾಖಲೆ ಪರಿಶೀಲನೆ ಹಾಗೂ ನಗದು ಹಾಗೂ ಆಸ್ತಿ ಸಂಬಂಧಿತ ವಿವರಗಳ ಸಂಗ್ರಹ ಕಾರ್ಯ ರಾತ್ರಿಯವರೆಗೆ ಮುಂದುವರೆದಿತ್ತು.
ಸಿದ್ದಾಪುರದಲ್ಲೂ ದಾಳಿ:ಸಿದ್ದಾಪುರ ತಾಲೂಕಿನ ಕೋಲಸಿರ್ಸಿ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಮಾಳ್ವಿಯವರ ಕುರಿತಾದ ಮಾಹಿತಿಗಳನ್ನು ಪಡೆಯಲು ಲೋಕಾಯುಕ್ತ ಪೊಲೀಸರ ತಂಡ ಸೇವಾ ಸಹಕಾರಿ ಸಂಘಕ್ಕೆ ಮಂಗಳವಾರ ಬೆಳಗ್ಗೆ ಬಂದಿದ್ದಾಗಿ ತಿಳಿದುಬಂದಿದೆ. ಕಾರ್ಯನಿರ್ವಹಣಾಧಿಕಾರಿಯಾಗಿ ಯಾವಾಗಿನಿಂದ ಕಾರ್ಯನಿರ್ವಹಿಸುತ್ತಿದ್ದರು ಎನ್ನುವ ಹಾಗೂ ಅವರ ವೇತನದ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದು ಇನ್ನುಳಿದಂತೆ ಅವರ ಕುರಿತಾದ ಯಾವ ಮಾಹಿತಿಗಳು ಇಲ್ಲಿ ದೊರಕಿಲ್ಲ.