ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಇಲಾಖೆಗಳ ವಿರುದ್ಧ ದಾಖಲಾಗಿದ್ದ ಒಟ್ಟು 115 ಪ್ರಕರಣಗಳ ಪೈಕಿ 40 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಪರಿಶೀಲನೆ ವೇಳೆ ಹಲವು ಸರ್ಕಾರಿ ಕಚೇರಿಗಳಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿವೆ ಎಂದರು.
ಬೆಳಗಾವಿ ಎಪಿಎಂಸಿಯಲ್ಲಿ ವರ್ತಕರು ಬಿಲ್‌ಗಳಿಲ್ಲದೆ ವ್ಯಾಪಾರ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಮಾರುಕಟ್ಟೆಯಲ್ಲಿ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಕೊರತೆ ಸೇರಿದಂತೆ ಒಟ್ಟು 16 ಲೋಪದೋಷಗಳು ಪತ್ತೆಯಾಗಿವೆ. ಅದೇ ರೀತಿ ಕೇಂದ್ರ ಬಸ್ ನಿಲ್ದಾಣದ ಆಹಾರ ಮಾರಾಟ ಮಳಿಗೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿದ್ದು, ಒಟ್ಟು ಒಂಬತ್ತು ಸಮಸ್ಯೆಗಳು ಕಂಡುಬಂದಿವೆ. ಅವುಗಳನ್ನು ಸರಿಪಡಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಔಷಧ ವಿತರಣಾ ಕೇಂದ್ರ ಹೆಚ್ಚಳಕ್ಕೆ ಸೂಚನೆ:
ಬೆಳಗಾವಿ ಮಹಾನಗರ ಪಾಲಿಕೆಯಿಂದ ಒಟ್ಟು 91 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ. ಈ ಪೈಕಿ 78 ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಅವುಗಳನ್ನು ಪಾಲಿಕೆ ವಶಕ್ಕೆ ಪಡೆದಿಲ್ಲ. ಪಾಲಿಕೆಯಲ್ಲಿ ಚೀಟ್‌ಫಂಡ್ ವ್ಯವಹಾರ ನಡೆಯುತ್ತಿರುವ ಆರೋಪವೂ ಕೇಳಿಬಂದಿದೆ. ಕಚೇರಿಯ ಅಂಕ್ಷಕಿ ಮೀನಾಕ್ಷಿ ಅವರ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿರುವ ಕುರಿತು ದೂರು ದಾಖಲಿಸಿಕೊಳ್ಳಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್ ಸಿಟಿ ಕಚೇರಿಯಿಂದ ಕೈಗೊಂಡಿರುವ ಕಾಮಗಾರಿಗಳ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ನಗರಕ್ಕೆ ನೀರು ಪೂರೈಸುವ ಜಲಶುದ್ಧೀಕರಣ ಘಟಕದಲ್ಲಿ ಮಣ್ಣಿನ ಫಿಲ್ಟರ್‌ಗಳು ಹಾಳಾಗಿದ್ದರೂ ಅವುಗಳನ್ನೇ ಬಳಸುತ್ತಿರುವುದು ಕಂಡುಬಂದಿದೆ. ತುರುಮರಿ ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕದಲ್ಲಿಯೂ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಸುತ್ತಮುತ್ತಲಿನ ಗ್ರಾಮಸ್ಥರಿಂದ ಬಂದ ದೂರುಗಳ ಆಧಾರದ ಮೇಲೆ ಸ್ಥಳೀಯ ನಿವಾಸಿಗಳು ಹಾಗೂ ಅವರ ಮಕ್ಕಳ ಆರೋಗ್ಯದ ಸ್ಥಿತಿಗತಿ ಕುರಿತು ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.