ರಾಮನಗರ: ಮಧ್ಯವರ್ತಿಗಳ ಹಾವಳಿ, ಲಂಚ ಸೇರಿದಂತೆ ಹಲವು ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಮೇಲೆ ಶುಕ್ರವಾರ ಬೆಳಗ್ಗೆ ದಿಢೀರ್ ದಾಳಿ ಮಾಡಿ ಕಡತಗಳನ್ನು ಪರಿಶೀಲಿಸಿದರಲ್ಲದೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತ ಅಧಿಕಾರಿಗಳು ದಾಳಿ ಆರಂಭಿಸುವಷ್ಟರಲ್ಲಿ ಚಾಲನಾ ಪರವಾನಗಿ ಪಡೆಯಲು ಒಂದಷ್ಟು ಮಂದಿ ಆಗಮಿಸಿದ್ದರು. ಲೋಕಾಯುಕ್ತರ ಕಂಡ ಬೆನ್ನಲ್ಲೇ ಆರ್‌ಟಿಒ ಸಿಬ್ಬಂದಿ ಅವರನ್ನೆಲ್ಲಾ ಸಾಲಾಗಿ ನಿಲ್ಲಿಸಿ, ಶಿಸ್ತು ಪ್ರದರ್ಶಿಸಲು ಯತ್ನಿಸಿದರು. ಈ ವೇಳೆ ಅಲ್ಲಿಗೆ ಆಗಮಿಸಿದ ಅಧಿಕಾರಿಗಳು ನೀವು ಯಾವ ಶಾಲೆಯಿಂದ ಬಂದಿದ್ದೀರಿ, ಯಾವುದಕ್ಕೆ ಪರವಾನಗಿ ಪಡೆಯಲು ಬಂದಿದ್ದೀರಿ, ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಕೆಲವರು ಅಗತ್ಯಕ್ಕಿಂತ ಹೆಚ್ಚು ಹಣ ನೀಡಿದ್ದೇವೆ ಎಂದು ಉತ್ತರಿಸಿದರು. ಅವರು ಯಾವ ಶಾಲೆಯವರು ಎಂಬುದನ್ನು ತಿಳಿದು, ಮಾಲೀಕರಿಗೆ ಅಗತ್ಯಕ್ಕಿಂತ ಹೆಚ್ಚು ಹಣ ಏಕೆ ಪಡೆದಿದ್ದೀರಿ ಎಂದು ಪ್ರಶ್ನಿಸಿ, ಅವರನ್ನು ತರಾಟೆಗೆ ತೆಗೆದುಕೊಂಡರು.ಜತೆಗೆ ಸಾರ್ವಜನಿಕರು ಸುಳ್ಳು ಹೇಳುತ್ತಿರುವುದನ್ನು ಅರಿತ ಅಧಿಕಾರಿಗಳು ಯಾವುದಕ್ಕೆ ಎಷ್ಟು ಹಣ ನೀಡಬೇಕೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನಂತರ ನಿಗದಿತ ಶುಲ್ಕವನ್ನೇ ಪಾವತಿಸಬೇಕು. ಡ್ರೈವಿಂಗ್ ಸ್ಕೂಲ್‌ನವರು ಕೇಳಿದಷ್ಟು ಹಣವನ್ನು ಕಣ್ಮುಚ್ಚಿ ನೀಡಿದರೆ ಅವರು ಶ್ರೀಮಂತರಾಗುತ್ತಾರೆ. ಸಮಾಜ ಪರಿವರ್ತನೆ ಆಗುವುದಿಲ್ಲ ಎಂದರು.
ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದ ಲೋಕಾಯುಕ್ತರು, ಆರ್.ಟಿ.ಒ ಸತೀಶ್ ಬಾಬು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿ, ಕಡತಗಳನ್ನು ಪರಿಶೀಲಿಸಿತು.
ಕಚೇರಿಯಲ್ಲಿ ನಡೆಯುತ್ತಿರುವ ವಸೂಲಿಬಾಜಿ, ಮಧ್ಯವರ್ತಿಗಳ ಹಾವಳಿ ಬಗ್ಗೆ ಲೋಕಾಯುಕ್ತ ಎಸ್ಪಿ ಸ್ನೇಹಾ ಅವರು ಆರ್‌ಟಿಒ ಅಧಿಕಾರಿಯನ್ನು ಪ್ರಶ್ನಿಸಿದರು. ಮಧ್ಯವರ್ತಿಗಳನ್ನು ಕಚೇರಿ ಒಳಗೆ ಏಕೆ ಸೇರಿಸುತ್ತೀರಿ, ಸ್ಮಾರ್ಟ್ ಕಾರ್ಡ್ ಗಳನ್ನು ಏಕೆ ತಲುಪಿಸಿಲ್ಲ, ಕಚೇರಿ ಒಳಗೆ ನಡೆದಿರುವ ಗಲಾಟೆ ಬಗ್ಗೆ ಪೊಲೀಸರಿಗೆ ಏಕೆ ದೂರು ನೀಡಿಲ್ಲ ಎಂದು ಪ್ರಶ್ನಿಸಿದರು. ಇಂದೇ ಪೊಲೀಸರಿಗೆ ದೂರು ನೀಡುವುದಾಗಿ ಆರ್‌ಟಿಒ ಸತೀಶ್ ಬಾಬು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಆರ್ ಟಿಒ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ತಮ್ಮ ಪ್ರಶ್ನೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸದ ಹಾಗೂ ಕಡತಗಳನ್ನು ಸರಿಯಾಗಿ ತೋರಿಸದೆ ಸಬೂಬು ಹೇಳಲು ಮುಂದಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.
ಇನ್ನು ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳು ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿತು. ದ್ವಿತೀಯ ದರ್ಜೆ ಸಹಾಯಕಿ ಅನಾರೋಗ್ಯದ ಕಾರಣ ಮೌಖಿಕವಾಗಿ ಪುತ್ರಿ ಕೆಲಸ ಮಾಡಲು ಅವಕಾಶ ನೀಡಿದ್ದೇನೆ ಎಂದು ಆರ್‌ಟಿಒ ಹೇಳಿದರು.
ಬಾಕ್ಸ್ ...................
ಲೋಕಾಯುಕ್ತ ಅಧಿಕಾರಿಗಳ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯವರ್ತಿಗಳು ಸ್ಥಳದಿಂದ ಪರಾರಿಯಾಗಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡರು. ಡ್ರೈವಿಂಗ್ ಸ್ಕೂಲ್‌ಗಳ ಮಾಲೀಕರು ಕೂಡ ಕಚೇರಿ ಕಡೆಗೆ ತಲೆ ಹಾಕಲಿಲ್ಲ. ಆರ್‌ಟಿಒ ಕಚೇರಿ ಸುತ್ತಮುತ್ತಲಿನ ಕಂಪ್ಯೂಟರ್ ಸೆಂಟರ್‌ಗಳು ಬಾಗಿಲು ಬಂದ್ ಮಾಡಿಕೊಂಡರು. ಸದಾ ಜನರಿಂದ ತುಂಬಿರುತ್ತಿದ್ದ ಟೀ ಅಂಗಡಿಗಳು ಗಿರಾಕಿಗಳಿಲ್ಲದೆ ಬಾಗಿಲು ಮುಚ್ಚಿದವು. ಒಟ್ಟಾರೆಯಾಗಿ ಇಡೀ ಆರ್‌ಟಿಒ ಕಚೇರಿಯ ಸುತ್ತಮುತ್ತಲಿನ ಪ್ರದೇಶ ಬಿಕೋ ಎನ್ನುತ್ತಿತ್ತು.
ಬಾಕ್ಸ್ ..................ಆರ್ ಟಿಒ ಕಚೇರಿಯಲ್ಲಿಯೇ ಜನಸಂಪರ್ಕ ಕಾರ್ಯಕ್ರಮ
ರಾಮನಗರ: ರಾಮನಗರದ ಆರ್‌ಟಿಒ ಕಚೇರಿಯಲ್ಲಿಯೇ ಜೂನ್ 19 ಮತ್ತು 20ರಂದು ಲೋಕಾಯುಕ್ತರು ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಹಿಂದೆ ಬೇರೆ ಸ್ಥಳಗಳಲ್ಲಿ ಈ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಸರಿಯಾಗಿ ಸೇವೆ ದೊರೆಯದ ಬಗ್ಗೆ ಹಲವಾರು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಆರ್‌ಟಿಒ ಕಚೇರಿ ಆವರಣದಲ್ಲಿ ಜನಸಂಪರ್ಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.ಸಾರ್ವಜನಿಕರು ಕಚೇರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ಬಗ್ಗೆ ನಮಗೆ ದೂರು, ಅಹವಾಲುಗಳನ್ನು ಸಲ್ಲಿಸಬಹುದು. ಈ ಬಗ್ಗೆ ತನಿಖೆ ನಡೆಸಿ, ಸಾರ್ವಜನಿಕರ ಕೆಲಸಗಳನ್ನು ನಿಗದಿ ಅವಧಿಯೊಳಗೆ ಮಾಡಿಸಿಕೊಡಲಾಗುವುದು. ಜತೆಗೆ ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
12ಕೆಆರ್ ಎಂಎನ್ 4.ಜೆಪಿಜಿರಾಮನಗರ ಆರ್ ಟಿಒ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ಸ್ನೇಹಾರವರು ಆರ್ ಟಿಒ ಸತೀಶ್ ಬಾಬು ಅವರನ್ನು ಪ್ರಶ್ನೆ ಮಾಡುತ್ತಿರುವುದು.