ಜಿಲ್ಲೆಯ 8 ಉಪ ನೋಂದಣಿ ಕಚೇರಿಯಿಂದ ದಾಖಲೆ ವಶಕ್ಕೆ ಪಡೆದ ಲೋಕಾಯುಕ್ತರು

KannadaprabhaNewsNetwork |  
Published : Nov 06, 2025, 02:30 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ 8 ಉಪ ನೋಂದಣಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಹತ್ವದ ದಾಖಲೆ ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡ ಜಿಲ್ಲೆಯ 8 ಉಪ ನೋಂದಣಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಹತ್ವದ ದಾಖಲೆ ವಶಕ್ಕೆ ಪಡೆದಿದ್ದಾರೆ.

ಮುಂಡಗೋಡ, ಶಿರಸಿ, ಸಿದ್ಧಾಪುರ, ಯಲ್ಲಾಪುರ, ಹಳಿಯಾಳ, ಕುಮಟಾ, ಭಟ್ಕಳ, ಕಾರವಾರ ಕಚೇರಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಅಂಕೋಲಾ ಮತ್ತು ಹೊನ್ನಾವರದ ಕಚೇರಿಗಳಲ್ಲಿ ದಾಖಲೆ ವಶಪಡಿಸಿಕೊಳ್ಳಲಾಗಿತ್ತು.

ಈ ದಾಖಲೆಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಿ ಬೆಂಗಳೂರು ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕ ದೂರುಗಳು ಬಂದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ, ಮಂಗಳೂರು ಹಾಗೂ ಧಾರವಾಡದ ನಾಲ್ಕು ತಂಡಗಳು ಹಾಗೂ ಜಿಲ್ಲೆಯ ನಾಲ್ಕು ತಂಡಗಳು ಸೇರಿ 8 ಕಡೆ ದಾಳಿ ನಡೆದಿದೆ.

ಈ ದಾಳಿಗಳಿಗೂ ಯೂಟ್ಯೂಬರ್ ಮುಕಳೆಪ್ಪ ವಿವಾಹ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಸಾರ್ವಜನಿಕ ದೂರುಗಳ ಹಿನ್ನೆಲೆ ನಡೆದಿದೆ ಎಂದು ಲೋಕಾಯುಕ್ತ ಡಿಎಸ್ಪಿ ಧನ್ಯಾ ನಾಯಕ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಮುಂಡಗೋಡ ಉಪ ನೋಂದಣಾಧಿಕಾರಿ ಕಚೇರಿಗೆ ಲೋಕಾಯಕ್ತ ಭೇಟಿ:ಮುಂಡಗೋಡದ ಉಪ ನೋಂದಣಾಧಿಕಾರಿ ಕಚೇರಿಗೆ ಬುಧವಾರ ಲೋಕಾಯಕ್ತ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದರು.

ಇಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ದಾಳಿ ನಡೆಸಿ ಸಬ್ ರಿಜಿಸ್ಟರ್ ಕಚೇರಿಯ ಸಂಪೂರ್ಣ ದಾಖಲಾತಿಗಳನ್ನು ಪರಿಶೀಲಿಸಿದರು. ಬಳಿಗ್ಗೆ ಪ್ರಾರಂಭವಾದ ದಾಖಲೆ ಪರೀಶೀಲನಾ ಕಾರ್ಯ ಸಂಜೆವರೆಗೂ ನಿರಂತರವಾಗಿ ನಡೆಯಿತು.ಇತ್ತೀಚಿಗೆ ಖ್ಯಾತ ಯುಟ್ಯೂಬರ್‌ ಮುಕಳೆಪ್ಪ ಉರ್ಫ್‌ ಖ್ವಾಜಾ ಬಂದೇನವಾಜ್‌ ನಕಲಿ ದಾಖಲೆ, ವಿಳಾಸ ನೀಡಿ ಇದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹಿಂದು ಯುವತಿಯನ್ನು ವಿವಾಹವಾಗಿದ್ದರು. ಯುವತಿಯ ತಾಯಿ ಮತ್ತು ಹಿಂದುಪರ ಸಂಘಟನೆಗಳು ಇದರ ಬಗ್ಗೆ ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದರು. ಈ ಹಿನ್ನೆಲೆ ಈ ದಾಳಿಗೆ ಮಹತ್ವ ಬಂದಿದೆ.

ಲೋಕಾಯುಕ್ತರು ದಾಳಿ ನಡೆಸಿದ ಸುದ್ದಿ ಹಬ್ಬುತ್ತಿದ್ದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆ ಸಾರ್ವಜನಿಕರು, ಕಚೇರಿ ಬಳಿ ಜಮಾಯಿಸಿ ಸಬ್ ರಿಜಿಸ್ಟರ್ ಕಚೇರಿ ಕರ್ಮಕಾಂಡಗಳ ಬಗ್ಗೆ ದೂರಿನ ಸುರಿಮಳೆಗೈದರು.

ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಚಿದಾನಂದ ಹರಿಜನ, ದಲಿತ ವಿಮೋಚನಾ ಸೇನೆಯ ಶರೀಪ್ ಮುಗಳಿಕಟ್ಟಿ ಹಾಗೂ ಕೆಲ ಹಿಂದೂಪರ ಸಂಘಟನೆ ಕಾರ್ಯಕರ್ತರು, ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹಣ ನೀಡಿದರೆ ಎಲ್ಲವು ನಡೆಯುತ್ತದೆ. ಕಚೇರಿಯಲ್ಲಿ ಕಳೆದ ಕೆಲ ವರ್ಷಗಳ ದಾಖಲಾತಿ ಪರಿಶೀಲಿಸಿದರೆ ಇಲ್ಲಿ ನಡೆದಿರುವ ಅವ್ಯವಹಾರ ಕರ್ಮಕಾಂಡ ಹೊರಬರುತ್ತದೆ. ಅಲ್ಲದೇ ಸಬ್ ರಿಜಿಸ್ಟರ್ ಜೊತೆಗೆ ಇಲ್ಲಿ ಹಲವು ವರ್ಷಗಳಿಂದ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೇ ನೇರವಾಗಿ ಜನರ ಕೆಲಸ ಮಾಡದೆ ಮಧ್ಯವರ್ತಿಗಳ ಮೂಲಕ ಡೀಲ್ ಮಾಡಿಸುತ್ತಾರೆ. ಹಾಗಾಗಿ ಅವರನ್ನು ಕೆಲಸದಿಂದ ವಜಾಗೊಳಿಸಬೇಕಲ್ಲದೇ ಅವರ ಅವಧಿಯಲ್ಲಿ ನಡೆದ ಎಲ್ಲ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಪೊಲೀಸ ಅಧಿಕಾರಿ ಎಸ್.ಎಸ್. ತೇಲಿ, ನಾವು ಮೇಲಾಧಿಕಾರಿಗಳ ಆದೇಶದ ಮೇರೆಗೆ ಇಲ್ಲಿ ದಾಖಲೆ ಪರಿಶೀಲಿಸಲು ಆಗಮಿಸಿದ್ದೇವೆ. ನಿಮ್ಮ ದೂರುಗಳೇನಿದ್ದರೂ ಜಿಲ್ಲಾ ಲೋಕಾಯುಕ್ತ ಎಸ್.ಪಿ ಅವರಿಗೆ ವಾಟ್ಸಪ್ ಸಂದೇಶದ ಮೂಲಕ ಕಳುಹಿಸಿ ಎಂದು ತಿಳಿಸಿದರು. ಇದರಿಂದ ಕೆಲ ಕಾಲ ಸಬ್ ರಿಜಿಸ್ಟರ್ ಕಚೇರಿ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

PREV

Recommended Stories

ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ
ಕುತಂತ್ರ-ಅಸೂಯೆಯಿಂದ ಟನಲ್‌ ರಸ್ತೆಗೆ ಬಿಜೆಪಿ ವಿರೋಧ : ಡಿ.ಕೆ.ಸು