ಕುಷ್ಟಗಿ: ಪಟ್ಟಣದ ಹೊರ ವಲಯದ ಟೆಂಗುಂಟಿ ರಸ್ತೆಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿರ್ಮಾಣಗೊಂಡಿರುವ ಕಂಪೌಂಡ್ ಕಾಮಗಾರಿಯ ಗುಣಮಟ್ಟ ಪರಿಶೀಲನೆಗೆ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ದೂರಿನನ್ವಯ ಶನಿವಾರ ಬೆಳಗ್ಗೆ ಪಟ್ಟಣಕ್ಕೆ ಆಗಮಿಸಿದ ಲೋಕಾಯುಕ್ತ ತನಿಖಾಧಿಕಾರಿಗಳ ತಂಡವೂ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಪುರಸಭೆ ಸಿಬ್ಬಂದಿಗಳು ಹಾಗೂ ದೂರುದಾರರು ನೀಡಿರುವ ದೂರಿನ ಕುರಿತು ದಾಖಲಾತಿ ಪರಿಶೀಲನೆ ನಡೆಸಿದರು. ನಂತರ ಕಾಮಗಾರಿ ನಡೆದ ಘನತ್ಯಾಜ್ಯ ವಿಲೇವಾರಿ ಘಟಕದ ಸ್ಥಳಕ್ಕೆ ಭೇಟಿ ನೀಡಿ ಕಂಪೌಂಡ್ ವಾಲ್ ಗುಣಮಟ್ಟ ಹಾಗೂ ಅಳತೆ ಮಾಡುವ ಮೂಲಕ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆಯಲ್ಲಿ ಕಂಪೌಂಡ್ ಮರಳು ಮಿಶ್ರಿತ ನೆಲಸದಲ್ಲಿ ಸರಿಯಾದ ಬೇಸ್ಮೆಂಟ್ ಹಾಕದೆ ಮಾಡಿರುವದು, ಸಿಮೇಂಟ್ ಉದುರುವದು, ಸರಿಯಾಗಿ ಕ್ಯೂರಿಂಗ್ ಆಗದೆ ಇರುವದು ಸೇರಿದಂತೆ ಅನೇಕ ಸಮಸ್ಯೆಗಳು ಕಂಡು ಬಂದಿದ್ದು, ಇದನ್ನು ಕಂಡ ಲೋಕಾಯುಕ್ತ ತನಿಖಾಧಿಕಾರಿ ಸ್ಥಳದಲ್ಲಿದ್ದ ಇಂಜನಿಯರ್ ಅವರನ್ನು ತರಾಟೆಗೆ ತೆಗದುಕೊಂಡು ಯಾವ ರೀತಿ ಕಾಮಗಾರಿ ನಿರ್ವಹಿಸಿದ್ದಿರಿ ಗುಣಮಟ್ಟದ ಕಾಮಗಾರಿ ಮಾಡಲು ಬರುವುದಿಲ್ಲವೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಕಂಪೌಂಡ ಕಾಮಗಾರಿ ಪರಿಶೀಲನೆ ಬಳಿಕ ಫೆ. 6ರೊಳಗಾಗಿ ಈ ಕಾಮಗಾರಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಹಾಗೂ ಇಂಜಿನಿಯರಗಳ ಮಾಹಿತಿ ಬೆಂಗಳೂರು ಲೋಕಾಯುಕ್ತ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಪುರಸಭೆ ಇಂಜಿನಿಯರ ಶಿಲ್ಪಾಗೆ ಸೂಚಿಸಿದರು.
ಕುಷ್ಟಗಿ ಪಟ್ಟಣದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತಲೂ ನಿರ್ಮಾಣವಾಗಿರುವ ಕಾಂಪೌಂಡ್ ಕಳಪೆಯಿಂದ ಕೂಡಿರುವ ಕುರಿತು ದೂರು ದಾಖಲಾದ ಹಿನ್ನೆಲೆಯಲ್ಲಿ ಭೇಟಿ ನೀಡಲಾಗಿದ್ದು ಕಟ್ಟಡ ಕಾಮಗಾರಿ ಪರಿಶೀಲಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಸೂಕ್ತ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವದು ಎಂದು ಬೆಂಗಳೂರ ಲೋಕಾಯುಕ್ತ ತಾಂತ್ರಿಕ ತನಿಖಾಧಿಕಾರಿ ಸದ್ಗುಣಶೆಟ್ಟಿ ತಿಳಿಸಿದ್ದಾರೆ.