ಅಕ್ಕಿ ನಾಪತ್ತೆ ಪ್ರಕರಣ ಲೋಕಾಯುಕ್ತ ತನಿಖೆಗೆ?

KannadaprabhaNewsNetwork |  
Published : Feb 11, 2025, 12:50 AM IST
ಅಕ್ಕಿ ಅಕ್ರಮ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿ.  | Kannada Prabha

ಸಾರಾಂಶ

Lokayukta to investigate rice disappearance case?

-ಶಹಾಪುರ ಪಡಿತರ ಅಕ್ಕಿ ಅಕ್ರಮ ಪ್ರಕರಣಕ್ಕೆ ಮರುಜೀವ । ದಾಖಲೆ ಸಮೇತ ಹೇಳಿಕೆ ನೀಡಿದ ಅಶೋಕ್‌ ಮಲ್ಲಾಬಾದಿ । ತನಿಖಾಧಿಕಾರಿ ಬಗ್ಗೆ ಅನುಮಾನ

---

ಕನ್ನಡಪ್ರಭ ವಾರ್ತೆ ಯಾದಗಿರಿ

ತೀವ್ರ ಚರ್ಚೆಗೆ ಗ್ರಾಸವಾಗಿದ್ದ, ಶಹಾಪುರದಲ್ಲಿನ ಸಮಾರು 2 ಕೋಟಿ ರು.ಗಳ ಪಡಿತರ ಅಕ್ಕಿ ನಾಪತ್ತೆ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಕೋರಿ ಸಾಮಾಜಿಕ ಕಾರ್ಯಕರ್ತ, ಶಹಾಪುರ ತಾಲೂಕು ಮುಡಬೂಳದ ಅಶೋಕರಾವ್‌ ಕುಲಕರ್ಣಿ ಮಲ್ಲಾಬಾದಿ ನೀಡಿದ್ದ ದೂರಿನ ಮೇರೆಗೆ, ಅವರ ವಿಚಾರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ದಾಖಲೆಗಳ ಸಮೇತ ಹೇಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ, ಮೂಲ ಆರೋಪಿಗಳ ಪತ್ತೆಯಾಗದೆ, ಬಹುತೇಕ ಮುಚ್ಚಿಯೇ ಹೋಯ್ತು ಎನ್ನಲಾಗುತ್ತಿರುವ ಶಹಾಪುರ ಪಡಿತರ ಅಕ್ಕಿ ಅಕ್ರಮ ಪ್ರಕರಣಕ್ಕೆ ಮರುಜೀವ ಸಾಧ್ಯತೆಯಿದೆ.

"ಅಕ್ಕಿ ನಾಪತ್ತೆ ಪ್ರಕರಣದ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಆಗ ನಾನು ಬೆಂಗಳೂರಿಗೆ ತೆರಳಿ ದೂರು ನೀಡಿದ್ದೆ. ಈ ಕುರಿತು, ಮೇಲಧಿಕಾರಿಗಳ ಸೂಚನೆ ಮೇರೆಗೆ ವಿಚಾರಣೆಗೆ ಹಾಜರಾಗುವಂತೆ ನನಗೆ ಪತ್ರ ಬಂದಿದ್ದರಿಂದ ಯಾದಗಿರಿ ಲೋಕಾಯುಕ್ತ ಕಚೇರಿಗೆ ತೆರಳಿ ದಾಖಲಾತಿಗಳ ಸಮೇತ ಎಲ್ಲ ವಿವರಣೆ ನೀಡಿದ್ದೇನೆ. ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ಮರೆ ಮಾಚಲಾಗಿದೆ, ಮೂಲ ದಂಧೆಕೋರರನ್ನು ಬಿಟ್ಟು, ಲಂಚ ನೀಡದ ಕೆಲವು ಅಮಾಯಕರನ್ನು ದೂರಿನಲ್ಲಿ ದಾಖಲಿಸಲಾಗಿದೆ. ಪ್ರಕರಣದ ತನಿಖಾಧಿಕಾರಿ ಮೇಲೆಯೇ ಅನುಮಾನಗಳಿದ್ದಾಗ, ಅವರಿಂದಲೇ ಈ ತನಿಖೆ ನಡೆಸಿದಾಗ, ಸತ್ಯ ಹೊರಬರುವುದಾದರೂ ಹೇಗೆ ಎಂದು ನಾನು ದೂರಿನಲ್ಲಿ ತಿಳಿಸಿದ್ದೇನೆ. ನನ್ನ ಈ ಎಲ್ಲ ಹೇಳಿಕೆಯನ್ನು ಅಧಿಕಾರಿಗಳು ಪಡೆದಿದ್ದು, ಇಲಾಖೆಯ ಮೇಲ್ಮಟ್ಟಕ್ಕೆ ಕಳುಹಿಸುವುದಾಗಿ ಅವರು ತಿಳಿಸಿದ್ದಾರೆ. " ಎಂದು ದೂರುದಾರ ಅಶೋಕರಾವ್‌ ಕುಲಕರ್ಣಿ ಮಲ್ಲಾಬಾದಿ "ಕನ್ನಡಪ್ರಭ "ಕ್ಕೆ ತಿಳಿಸಿದರು.

=====ಬಾಕ್ಸ್‌:1=====

- ಪ್ರಕರಣ ರದ್ದು ಕೋರಿದ್ದ ಅರ್ಜಿ ಹೈಕೋರ್ಟಿನಲ್ಲಿ ವಜಾ

- ಆರೋಪಿ ಅಧಿಕಾರಿ ಭೀಮರಾಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಕನ್ನಡಪ್ರಭ ವಾರ್ತೆ ಯಾದಗಿರಿ

ಶಹಾಪುರ ಅಕ್ಕಿ ಪ್ರಕರಣದ ಕುರಿತು ಸೆ.19, 2024 ರಂದು ಶಹಾಪುರ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟಿನಲ್ಲಿ 14ನೇ ಆರೋಪಿ, ಹಾಲಿ ಕಲಬುರಗಿಯಲ್ಲಿ ಜಿಲ್ಲಾ ಆಹಾರ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಳಿ, ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ಇದೇ ಜ.27 ರಂದು ವಜಾಗೊಳಿಸಿದೆ.

ಶಹಾಪುರದ ಅಕ್ಕಿ ನಾಪತ್ತೆ ಪ್ರಕರಣದ ದೂರುದಾರರೂ ಆಗಿದ್ದ ಭೀಮರಾಯನನ್ನು ಚಾರ್ಚ್‌ಶೀಟಿನಲ್ಲಿ ಆರೋಪಿಯನ್ನಾಗಿಸಿದೆ. ನಾಪತ್ತೆ ಪ್ರಕರಣದ ವೇಳೆ ಯಾದಗಿರಿ ಜಿಲ್ಲೆಯ ಆಹಾರ ಸರಬರಾಜು ಇಲಾಖೆ ಉಪ ನಿರ್ದೇಶಕರಾಗಿದ್ದ ಭೀಮರಾಯ ಈ ಪ್ರಕರಣದ ದೂರುದಾರರೂ ಆಗಿದ್ದರು. ಆದರೆ, ಅವರ ವಿರುದ್ಧವೇ ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಕ್ರಮಕ್ಕೆ ಕೋರಿ ಯಾದಗಿರಿ ಜಿಲ್ಲಾಧಿಕಾರಿಗಳೇ ಇಲಾಖೆಯ ಬೆಂಗಳೂರು ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ, ಭೀಮರಾಯ ವಿರುದ್ಧ ಇಲಾಖೆ ಕ್ರಮಕ್ಕೆ ಮುಂದಾಗದಿರುವುದು ಅಚ್ಚರಿ ಮೂಡಿಸಿತ್ತು.

ಶಹಾಪುರದ ಈ ಪ್ರಕರಣವಷ್ಟೇ ಅಲ್ಲ, ಯಾದಗಿರಿ ಜಿಲ್ಲೆಯ ವಿವಿಧೆಡೆ ನಡೆದ ಕೋಟ್ಯಂತರ ರುಪಾಯಿಗಳ ನಾಪತ್ತೆ-ಅಕ್ರಮ ಪ್ರಕರಣದಲ್ಲಿ ಭೀಮರಾಯ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಶಹಾಪುರದ ಅಕ್ಕಿ ಪ್ರಕರಣದ ಚಾರ್ಜ್‌ಶೀಟಿನಲ್ಲಿ ಅವರನ್ನು ಆರೋಪಿಯನ್ನಾಗಿಸಿದ್ದರೂ, ಸಚಿವರ ಪ್ರಭಾವದಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಇಲಾಖೆಯ ಮೇಲಧಿಕಾರಿಗಳ ಹಿಂದೇಟು ಅನುಮಾನ ಮೂಡಿಸಿದೆ. ಸದ್ಯ, ತಮ್ಮ ಮೇಲಿನ ಪ್ರಕರಣ ರದ್ದು ಕೋರಿ ಭೀಮರಾಯ ಸಲ್ಲಿಸಿದ್ದ ಅರ್ಜಿ ಹೈಕೋರ್ಟಿನಲ್ಲಿ ವಜಾಗೊಂಡಿದೆ.

====ಬಾಕ್ಸ್‌:2====

* ಏನಿದು ಅಕ್ಕಿ ಅಕ್ರಮ ಪ್ರಕರಣ ?

ಜಿಲ್ಲೆಯ ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿಯಮಿತ (ಟಿ.ಎ.ಪಿ.ಸಿ.ಎಂ.ಎಸ್‌) ಗೋದಾಮಿನಿಂದ, ಸುಮಾರು 2 ಕೋಟಿ ರು. ಗಳಿಗೂ ಹೆಚ್ಚಿನ ಮೌಲ್ಯದ 6077 ಕ್ವಿಂಟಾಲ್‌ ಪಡಿತರ ಅಕ್ಕಿ ನಾಪತ್ತೆ ಕುರಿತು 25 ನವೆಂಬರ್‌ 2023ರಂದು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಕುರಿತು ವಿಚಾರಣೆ ನಡೆಸಿದ್ದ ಪೊಲೀಸರು ಸೆ.19, 2024 ರಂದು ಶಹಾಪುರ ಜೆಎಂಎಫ್ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಭಾವಿಗಳ ಕೈವಾಡದಿಂದ ತನಿಖೆಯು ಸರಿಯಾಗಿ ನಡೆದಿಲ್ಲ, ತನಿಖಾಧಿಕಾರಿಯಾಗಿರುವ ಸುರಪುರದ ಡಿವೈಎಸ್ಪಿ ವಿರುದ್ಧವೇ ಆರೋಪ ಕೇಳಿ ಬರುತ್ತಿದೆಯೆಲ್ಲದೆ, ಮೂಲ ಆರೋಪಿಗಳ ಬಂಧಿಸುವಲ್ಲಿ ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಆರೋಪಗಳು ಮೂಡಿಬಂದಿದ್ದವು. ಜಿಲ್ಲಾಧಿಕಾರಿ ಸಲ್ಲಿಸಿದ ವರದಿಗೂ, ದೂರು ದಾಖಲಾದ ವರದಿಯಲ್ಲಿ ಸಾಕಷ್ಟು ವ್ಯತ್ಯಾಸವಿತ್ತು. 7800 ಕ್ವಿಂ. ನಷ್ಟು ಅಕ್ಕಿ ಕೊರತೆಯಿದೆ ಎಂದು ಜಿಲ್ಲಾಧಿಕಾರಿಗಳು ಮೇಲಧಿಕಾರಿಗಳಿಗೆ ವರದಿ ನೀಡಿದ್ದರೂ, ದೂರಿನಲ್ಲಿ 6077 ಕ್ವಿಂ. ದಾಖಲಿಸಿ, 1800 ಕ್ವಿಂ.ನಷ್ಟು ದಾಸ್ತಾನಿನ ಬಗ್ಗೆ ದೂರಿನಲ್ಲಿ ಉಲ್ಲೇಖಿಸದಿರುವುದು ಅನುಮಾನ ಮೂಡಿಸಿತ್ತು. ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಈ ಕುರಿತು ಅಧಿವೇಶನದಲ್ಲಿ ಪ್ರಶ್ನಿಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

-----

....ಕೋಟ್‌..1

ಯಾದಗಿರಿ ಲೋಕಾಯುಕ್ತ ಕಚೇರಿಗೆ ತೆರಳಿ ದಾಖಲಾತಿಗಳ ಸಮೇತ ಎಲ್ಲ ವಿವರಣೆ ನೀಡಿದ್ದೇನೆ. ನನ್ನ ಹೇಳಿಕೆಯನ್ನು ಬೆಂಗಳೂರಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.

- ಅಶೋಕರಾವ್‌ ಕುಲಕರ್ಣಿ ಮಲ್ಲಾಬಾದಿ, ಶಹಾಪುರ. (10ವೈಡಿಆರ್‌3)

----

10ವೈಡಿಆರ್‌1 : ಅಕ್ಕಿ ಅಕ್ರಮ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿ.

10ವೈಡಿಆರ್2

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ