ವಿಶೇಷ ವರದಿ
ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ 32ನೇ ವಯಸ್ಸಿನಲ್ಲಿಯೇ (2023ರಲ್ಲಿ ನಡೆದ) ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಭಾರಿ ಅಂತರದಿಂದ ಗೆದ್ದು, ಕ್ಷೇತ್ರದ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದರು.
ಕಾಂಗ್ರೆಸ್ಸಿನ ಸುಜಾತಾ ದೊಡ್ಡಮನಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು 30 ಸಾವಿರ ಮತಗಳಿಗೂ ಅಧಿಕ ಅಂತರದಿಂದ ಸೋಲಿಸಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರು ಕೃಪಾಕಟಾಕ್ಷದಿಂದ ಇವರಿಗೆ ಬಿಜೆಪಿ ಟಿಕೆಟ್ ದಕ್ಕಿದ್ದು. ಪಕ್ಷದ ಯಾವುದೇ ಬ್ಯಾನರ್ ಕಟ್ಟದೇ, ಸಭೆ- ಸಮಾರಂಭಗಳಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡದೇ ಕೊನೆಯ ಕ್ಷಣದ ವರೆಗೂ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ, ಅಂತಿಮ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು.ಆದರೆ ಆಯ್ಕೆಯಾದ ಆನಂತರ ಕ್ಷೇತ್ರದಲ್ಲಿ ನಡೆದ ವಿಚಿತ್ರ ಬೆಳವಣಿಗೆಯಿಂದಾಗಿ ಹಾಗೂ ಶಾಸಕರ ವರ್ತನೆಯಿಂದಾಗಿ ಪಕ್ಷದಲ್ಲಿಯೇ ಎರಡು ಗುಂಪುಗಳಾದವು. ಅಲ್ಲದೇ ಈ ಬೆಳವಣಿಗೆ ಮುಂದೆ ಎಷ್ಟೊಂದು ತೀವ್ರಕ್ಕೆ ಹೋಯಿತು ಎಂದರೆ ಶಾಸಕರು ಅನಗತ್ಯವಾಗಿ ಯಾರದ್ದೊ ಮಾತುಗಳನ್ನು ಕೇಳಿ, ಕ್ಷೇತ್ರದಲ್ಲಿನ ಲಿಂಗಾಯತ ಪಂಗಡದ ಕೆಲವರ ತೀವ್ರ ವಿರೋಧ ಕಟ್ಟಿಕೊಳ್ಳುವಂತಾಗಿದ್ದು, ಈಗ ನಡೆದಿರುವ ಪ್ರಕರಣಕ್ಕೆ ಅದು ಥಳಕು ಹಾಕಿಕೊಳ್ಳುತ್ತಿವೆ.ಬಡತನದಲ್ಲಿ ಬೆಳೆದ ಚಂದ್ರು
ಶಾಸಕ ಡಾ ಚಂದ್ರು ಲಮಾಣಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದ ಬಡಕುಟುಂಬದಲ್ಲಿ 1989ರ ಆ. 1ರಂದು ಜನಿಸಿದ್ದು, ಸ್ಥಳೀಯ ಪ್ರಾಥಮಿಕ ಶಿಕ್ಷಣ ಮುಗಿಸಿ, ಡೋಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿ, ಪಿಯು ಶಿಕ್ಷಣವನ್ನು ಗದುಗಿನಲ್ಲಿ ಪೂರ್ಣಗೊಳಿಸಿದರು.ಹುಬ್ಬಳ್ಳಿ ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಮುಗಿಸಿ, ತುಮಕೂರಿನಲ್ಲಿ ಎಂಡಿ ಉನ್ನತ ವ್ಯಾಸಂಗ ಮಾಡಿದರು. ಕಡು ಬಡತನದಲ್ಲಿ ಹುಟ್ಟಿ ಕಷ್ಟದ ಜೀವನ ಕಂಡು ಅನುಭವಿಸಿದ್ದು ಶಾಸಕ ಡಾ. ಚಂದ್ರು ಲಮಾಣಿ ಅವರು ತಮ್ಮ ಹಿಂದಿನ ಕಹಿ ನೆನಪುಗಳನ್ನು ಬೇಗ ಮರೆತು ನಡೆದುಕೊಂಡಿದ್ದೇ ಇಂದು ಈ ರೀತಿಯ ತೊಂದರೆ ಎದುರಿಸಲು ಕಾರಣವಾಗಿದೆ ಎಂದು ಅವರನ್ನು ಸಮೀಪದಿಂದ ಬಲ್ಲವರು ಹಾಗೂ ಬಿಜೆಪಿ ಕಾರ್ಯಕರ್ತರೇ ಹೇಳುತ್ತಾರೆ.
ವೈದ್ಯಕೀಯ ಪದವಿ ಪಡೆದ ನಂತರ ಶಿರಹಟ್ಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಗೆ ಸೇರಿದ ಶಾಸಕ ಡಾ. ಚಂದ್ರು ಲಮಾಣಿ ಅಂದಿನ ಶಾಸಕ ರಾಮಣ್ಣ ಲಮಾಣಿ ಅವರು ವಿರೋಧ ಕಟ್ಟಿಕೊಂಡಿದ್ದರು ಎನ್ನುವ ಮಾತು ಚಾಲ್ತಿಗೆ ಬಮದಿದೆ.