ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಅಂತರವನ್ನು ಶಮನಗೊಳಿಸಲು ವ್ಯವಸ್ಥೆ ಜಾರಿ । ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಕನ್ನಡಪ್ರಭ ವಾರ್ತೆ ಕೆಜಿಎಫ್ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸುವ ಉದ್ದೇಶದಿಂದ ಕೆಜಿಎಫ್ ಪೊಲೀಸ್, ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ನೂತನವಾಗಿ ಲೋಕಸ್ಪಂದನ ಕ್ಯೂ ಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಸ್ಪಂದನ ಕ್ಯೂ ಆರ್ ಕೋಡ್ ಸ್ಕ್ಯಾನ್ ಬೋರ್ಡ್‌ಗಳನ್ನು ಇಡಲಾಗಿದೆ. ಪೊಲೀಸ್ ಠಾಣೆಗೆ ಭೇಟಿ ನೀಡುವಂತಹ ದೂರುದಾರರು ಅಥವಾ ಅರ್ಜಿದಾರರು ಠಾಣಾಧಿಕಾರಿಗಳು, ಅಲ್ಲಿನ ಠಾಣಾ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ಸೌಹಾರ್ದತೆ, ಸೌಜನ್ಯದ ಕುರಿತು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ.ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ನೀಡುವ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಉತ್ತಮಪಡಿಸಲು ಹಾಗೂ ಸಾರ್ವಜನಿಕರೊಂದಿಗೆ ಪೊಲೀಸರು ಅನ್ಯೋನ್ಯವಾಗಿ, ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸುವಂತೆ ಅನುಕೂಲವಾಗಲು ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಲೋಕಸ್ಪಂದನ ಕ್ಯೂ ಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಪೊಲೀಸ್ ಠಾಣೆಗೆ ಭೇಟಿ ನೀಡುವ ಯಾವುದೇ ವ್ಯಕ್ತಿ ಕ್ಯೂ ಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದ ತಕ್ಷಣ ಮೊದಲಿಗೆ ಇರುವಂತಹ ೬ ಪ್ರಶ್ನೆಗಳಿಗೆ ಸರಿ ಅಥವಾ ತಪ್ಪು ಎಂಬ ಉತ್ತರವನ್ನು ನೀಡಬೇಕು. ಬಳಿಕ ಠಾಣೆಯಲ್ಲಿ ತಮಗೆ ಪೊಲೀಸರಿಂದ ದೊರೆತ ಸೇವೆಯ ಕುರಿತು ತಮ್ಮ ಅಭಿಪ್ರಾಯವನ್ನು ದಾಖಲಿಸಬಹುದಾಗಿದೆ. ಕ್ಯೂ ಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ವ್ಯಕ್ತಿಯ ಅಭಿಪ್ರಾಯಗಳನ್ನು ಲೋಕಸ್ಪಂದನ ತಂತ್ರಾಂಶದ ಮೂಲಕ ನೇರವಾಗಿ ಮೇಲಾಧಿಕಾರಿಗಳು ವೀಕ್ಷಣೆ ಮಾಡುವಂತೆ ಅಭಿವೃದ್ಧಿಪಡಿಸಲಾಗಿದ್ದು, ಆಗಿಂದಾಗ್ಗೆ ಸಾರ್ವಜನಿಕರ ದೂರುಗಳಿಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಅಲ್ಲದೇ ಇದರಿಂದಾಗಿ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸಲು ಅನುಕೂಲವಾಗುತ್ತದೆ.ತಮ್ಮ ಕಷ್ಟಗಳಿಗಾಗಿ ಪೊಲೀಸ್ ಠಾಣೆಗೆ ಬರುವವರೊಂದಿಗೆ ಠಾಣೆಗಳಲ್ಲಿರುವ ಸಿಬ್ಬಂದಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ, ಹೇಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಂಡಿದ್ದಾರೆ ಎಂಬುದರ ಮಾಹಿತಿ ಲೋಕಸ್ಪಂದನ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆಯಿಂದ ತಿಳಿಯಬಹುದಾಗಿದ್ದು, ಆಡಳಿತದಲ್ಲಿ ಮತ್ತಷ್ಟು ಕ್ರಿಯಾಶೀಲತೆ ತರಲು ಲೋಕಸ್ಪಂದನ ಸ್ಕ್ಯಾನಿಂಗ್ ವ್ಯವಸ್ಥೆ ಉಪಯುಕ್ತವಾಗಿದೆ.
ಕೋಟ್....ಕೆಜಿಎಫ್ ಪೊಲೀಸ್, ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಲೋಕಸ್ಪಂದನ ಕ್ಯೂ ಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಬೆಮೆಲ್ ಪೊಲೀಸ್ ಠಾಣೆಗೆ ಭೇಟಿ ನೀಡಿದ ೧೬ ಮಂದಿ ಲೋಕಸ್ಪಂದನ ಕ್ಯೂ ಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡರು, ಎಲ್ಲರೂ ೫ ಸ್ಟಾರ್ ರೇಟಿಂಗ್ ನೀಡಿದ್ದಾರೆ. ಜಿಲ್ಲೆಯ ಉಳಿದ ಠಾಣೆಗಳಿಗೆ ಭೇಟಿ ನೀಡುವ ಸಾರ್ವಜನಿಕರು ಮತ್ತು ಫಿರ್ಯಾದುದಾರರಿಗೆ ಲೋಕಸ್ಪಂದನ ಕ್ಯೂ ಆರ್ ಕೋಡ್ ಬಳಸುವ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ತಿಳುವಳಿಕೆ ನೀಡುವಂತೆ ಸೂಚಿಸಲಾಗಿದೆ.
- ಕೆ.ಎಂ.ಶಾಂತರಾಜು, ಪೊಲೀಸ್ ವರಿಷ್ಠಾಧಿಕಾರಿ, ಕೆಜಿಎಫ್.---