ಪ್ರಜ್ವಲ್‌ ಇದ್ದಲ್ಲಿಗೇ ಹೋಗಿ ಅರೆಸ್ಟ್‌ ಮಾಡ್ತೀವಿ: ಪರಂ

KannadaprabhaNewsNetwork | Updated : May 03 2024, 09:28 AM IST

ಸಾರಾಂಶ

 ಅಗತ್ಯಬಿದ್ದರೆ ಪೊಲೀಸರು ಪ್ರಜ್ವಲ್ ಇದ್ದಲ್ಲಿಗೆ ಹೋಗಿ ಬಂಧಿಸಿ ಭಾರತಕ್ಕೆ ತರಲಿದ್ದಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ್‌ ಹೇಳಿದರು.

 ಕಲಬುರಗಿ :  ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿರೋದರಿಂದ 24 ಗಂಟೆಯೊಳಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲವೆಂದು ವಕೀಲರ ಮೂಲಕ 7 ದಿನಗಳ ಕಾಲಾವಕಾಶ ಕೋರಿದ್ದಾರೆ. ಆದರೆ, ಕಾನೂನು ವ್ಯಾಪ್ತಿಯಲ್ಲಿ ಸಮಯಾವಕಾಶ ನೀಡಲು ಸಾಧ್ಯವಿಲ್ಲ. ಆದರೂ ಅಧಿಕಾರಿಗಳು ಕಾನೂನು ಪರಿಣಿತರ ಸಲಹೆ ಪಡೆಯುತ್ತಿದ್ದಾರೆ. ಅಗತ್ಯಬಿದ್ದರೆ ಪೊಲೀಸರು ಪ್ರಜ್ವಲ್ ಇದ್ದಲ್ಲಿಗೆ ಹೋಗಿ ಬಂಧಿಸಿ ಭಾರತಕ್ಕೆ ತರಲಿದ್ದಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ್‌ ಹೇಳಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಗಂಭೀರ ಪ್ರಕರಣ. ನೂರಾರು ಮಹಿಳೆಯರ ಬದುಕು ಇದರಲ್ಲಿ ಅಡಗಿರುವುದರಿಂದ ಪ್ರಕರಣದಲ್ಲಿ ವಾಸ್ತವ ಸಂಗತಿಗಳನ್ನಾಧರಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆಂದು ಹೇಳಿದರು.

ಈಗಾಗಲೇ ಹಗರಣದ ಆರೋಪಿಗಳಾದ ಪ್ರಜ್ವಲ್‌ ಹಾಗೂ ರೇವಣ್ಣ ಇಬ್ಬರಿಗೂ ನಮ್ಮ ಅಧಿಕಾರಿಗಳು ಸೆಕ್ಷನ್‌ 41-ಎ ಪ್ರಕಾರ ನೋಟಿಸ್‌ ನೀಡಿದ್ದಾರೆ. ನೋಟಿಸ್‌ ಪಡೆದವರು 24 ಗಂಟೆಯೊಳಗೆ ವಿಚಾರಣಾಧಿಕಾರಿ ಮುಂದೆ ಹಾಜರಾಗಬೇಕು. ಅದರಂತೆ ಎಚ್‌.ಡಿ.ರೇವಣ್ಣ ಅವರೂ ವಿಚಾರಣೆಗೆ ಹಾಜರಾಗಬೇಕು. ಇಲ್ಲದೇ ಹೋದರೆ ಬಂಧನ ನಿಶ್ಚಿತ. ಆರೋಪಿಗಳನ್ನು ಬಂಧಿಸಿ ಕರೆತಂದು ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆಂದು ತಿಳಿಸಿದರು.

ಆರೋಪಿ ಪ್ರಜ್ವಲ್‌ ವಿದೇಶದಲ್ಲಿದ್ದಾರೆ, ಅವರ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಹೊರಡಿಸಲಾಗಿದೆ. ಅದರಂತೆ ದೇಶದ ಎಲ್ಲಾ ಏರ್‌ಪೋರ್ಟ್‌, ಬಂದರುಗಳಿಗೆ ಪ್ರಜ್ವಲ್‌ ರೇವಣ್ಣ ಅವರ ಕುರಿತು ಮಾಹಿತಿ ರವಾನಿಸಲಾಗಿದೆ ಎಂದರು.

ಹಾಸನದಲ್ಲಿ ಮತ್ತೊಬ್ಬ ಸಂತ್ರಸ್ತೆ ಮುಂದೆ ಬಂದು ಪ್ರಜ್ವಲ್‌ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಅಧಿಕೃತವಾಗಿ ಇಬ್ಬರು ಮಹಿಳೆಯರಿಂದ ದೂರು ದಾಖಲಾಗಿವೆ. ಆದರೆ ಅವರ ದೂರಿನ ವಿವರಗಳನ್ನು ಸಾರ್ವಜನಿಕಗೊಳಿಸುವುದಿಲ್ಲ ಎಂದರು.

ಪ್ರಕರಣದಲ್ಲಿ ಕಾಂಗ್ರೆಸ್‌ ಯಾಕೆ ಸುಮ್ಮನೆ ಕೂತಿದೆ ಎಂದು ಬಿಜೆಪಿಯವರು ಕೇಳಿದ್ದಾರೆ, ಇವೆಲ್ಲ ಸೂಕ್ಷ್ಮ ಪ್ರಕರಣ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮುಂದುವರಿಯಲು ಆಗಲ್ಲ. ದೂರು ಸಲ್ಲಿಕೆಯಾಗುತ್ತಿದ್ದಂತೆ ನಾವು ಕ್ರಮಕ್ಕೆ ಮುಂದಾಗಿದ್ದೇವೆ. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

ಪ್ರಜ್ವಲ್‌ ಅದೆಲ್ಲೇ ಇದ್ದರೂ ನಾವು ಆತನನ್ನು ಕರೆತರುತ್ತೇವೆ. ಯಾರದ್ದೋ ಹೇಳಿಗಳನ್ನಾಧರಿಸಿ ತನಿಖೆ ನಡೆಯುವುದಿಲ್ಲ. ತನಿಖೆ ಏನಿದ್ದರೂ ಫ್ಯಾಕ್ಟ್‌ಗಳ ಹಿನ್ನೆಲೆಯಲ್ಲಿ ನಡೆಯುತ್ತದೆ. ಇಂಥ ಪ್ರಕರಣಗಳಲ್ಲಿ ಸಾಧ್ಯವಿದ್ದಷ್ಟು ಸಾಕ್ಷ್ಯ-ಪುರಾವೆ ಕಲೆ ಹಾಕಿ ನೊಂದವರಿಗೆ ನ್ಯಾಯ ಕೊಡಿಸುವುದೇ ಮುಖ್ಯವಾಗಲಿದೆ ಎಂದರು.

ಪ್ರಜ್ವಲ್‌ ರೇವಣ್ಣ ಸದ್ಯ ತನ್ನ ಬಳಿ ಹೊಂದಿರುವ ವೀಸಾದಂತೆ 45 ದೇಶಗಳಿಗೆ ಸುತ್ತಾಡಬಹುದು. ಪ್ರಜ್ವಲ್‌ ಡಿಪ್ಲೋಮ್ಯಾಟಿಕ್‌ ಪಾಸ್‌ ರದ್ದು ಮಾಡುವಂತೆ ಕೋರಿ ಪತ್ರ ಬರೆಯಲಾಗಿದೆ. ಪ್ರಜ್ವಲ್‌ ರೇವಣ್ಣ ಹೊರದೇಶದಲ್ಲಿರುವ ಕಾರಣ ಕೇಂದ್ರದ ಸಹಕಾರ ಕೋರಿದ್ದೇವೆ. ಉಳಿದಂತೆ ರಾಜ್ಯ ಸರ್ಕಾರವೇ ಅವರ ವಿರುದ್ಧ ಅಗತ್ಯ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಪರಮೇಶ್ವರ್‌ ಹೇಳಿದರು.

ಸಂತ್ರಸ್ತರಿಗೆ ರಕ್ಷಣೆ: ಪ್ರಜ್ವಲ್‌ ರೇವಣ್ಣರಿಂದ ಲೈಂಗಿಕವಾಗಿ ಕಿರುಕುಳಕ್ಕೊಳಗಾದ ಸಂತ್ರಸ್ತ ಮಹಿಳೆಯರನ್ನು ಗುರುತಿಸಿ ಅವರನ್ನು ಭೇಟಿ ಮಾಡಿ ಹೇಳಿಕೆ ಪಡೆಯುವ ಪ್ರಕ್ರಿಯೆ ಚುರುಕಿನಿಂದ ಸಾಗಿದೆ. ನೂರಾರು ವಿಡಿಯೋ ಇರುವುದರಿಂದ ಎಲ್ಲದರ ಪರಿಶೀಲನೆಯೂ ಮಾಡಲಾಗುತ್ತಿದೆ ಎಂದರು.

ದೂರು ನೀಡಿದ ಸಂತ್ರಸ್ತರಿಗೆ ಸರ್ಕಾರದಿಂದ ಸಂಪೂರ್ಣ ರಕ್ಷಣೆ ನೀಡುತ್ತೇವೆ, ಎಸ್‌ಐಟಿ ಈಗ ತಾನೆ ತನಿಖೆ ಶುರು ಮಾಡಿದೆ. ನೂರಾರು ವಿಡಿಯೋ ಇರುವುದರಿಂದ ಇದು ಸೂಕ್ಷ್ಮ ಪ್ರಕರಣ. ಬೇಕಾಬಿಟ್ಟಿ ವಿಚಾರಣೆ ಮಾಡಲಾಗದು. ಇದರಲ್ಲಿ ನೂರಾರು ಮಹಿಳೆಯರ ಬದುಕೇ ಅಡಗಿದೆ. ಇದನ್ನು ಗಂಭೀರ ಹಗರಣವಾಗಿ ಸರ್ಕಾರ ಪರಿಗಣಿಸಿದೆ ಎಂದರು.

ವಿಡಿಯೋಗಳು ವೈರಲ್‌ ವಿಚಾರ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಬೀದಿಬೀದಿಗಳಲ್ಲಿ ಎಲ್ಲರ ಮೊಬೈಲ್‌ಗಳಲ್ಲೂ ಹರಿದಾಡುತ್ತಿರುವ ಬಗ್ಗೆ ನಮಗೂ ಖೇದವಿದೆ. ಈ ಬಗ್ಗೆ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಿಗೆ ಪತ್ರ ಬರೆದು ಈ ವಿಡಿಯೋ ಪ್ರಸಾರವಾಗದಂತೆ ತಡೆಯಲು ಕೋರಿದ್ದೇವೆ. ಅಲ್ಲಿಂದ ಸ್ಪಂದನೆ ಅಷ್ಟಾಗಿ ಸಿಕ್ಕಿಲ್ಲವೆಂದು ಗೃಹ ಸಚಿವರು ಹೇಳಿದರು.

ಆದಾಗ್ಯೂ ಈ ಏಜನ್ಸಿಗಳಿಂದ ಅಂತಹ ಸ್ಪಂದನೆ ಸಿಕ್ಕಿಲ್ಲ. ಫೇಸಬುಕ್‌ನವರಂತು ಇಟ್‌ ಡಸಂಟ್‌ ಹ್ಯಾವ್‌ ನ್ಯಾಶನಲ್‌ ಇಂಪ್ಯಾಕ್ಟ್‌ ಎಂದು ನಮ್ಮ ಮೇಲ್‌ಗೆ ಉತ್ತರ ಬರೆದು ಕೈತೊಳೆದುಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪುನಃ ಮನವಿ ಮಾಡಲಿದ್ದಾರೆ ಎಂದರು.

Share this article