ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಿರೇಕೆರೂರು ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ 250 ಮನೆಗಳ ಕಾಮಗಾರಿಯಲ್ಲಿ ಭಾರಿ ಹಗರಣ ನಡೆದಿದೆ. ಬಡವರಿಗೆ ಮನೆ ಕಟ್ಟಿಕೊಡುವ ಬದಲು ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.
ಹಿರೇಕೆರೂರು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ 250 ಮನೆಗಳ ಕಾಮಗಾರಿಯಲ್ಲಿ ಭಾರಿ ಹಗರಣ ನಡೆದಿದೆ. ಬಡವರಿಗೆ ಮನೆ ಕಟ್ಟಿಕೊಡುವ ಬದಲು ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದಲ್ಲಿ 250 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಗೆ 7 ಲಕ್ಷ 40 ಸಾವಿರ ಅನುದಾನ ನಿಗದಿಪಡಿಸಲಾಗಿದೆ. ಮನೆ ನಿರ್ಮಾಣದ ಜವಾಬ್ದಾರಿ ಹೊತ್ತ ಕೊಳಗೇರಿ ಅಭಿವೃದ್ಧಿ ಮಂಡಳಿ ದಾವಣಗೆರೆ ವಿಭಾಗದ ಅಧಿಕಾರಿಗಳು ಮನೆ ನಿರ್ಮಾಣದ ಫಲಾನುಭವಿಗಳಿಗೆ ಮನೆ ನೀವೇ ಕಟ್ಟಿಸಿಕೊಳ್ಳಿ, ನಾವು ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಡಿಸುತ್ತೇವೆ ಎಂದು ಹೇಳಿ ಕೆಲವು ಸಾಮಗ್ರಿ ನೀಡಿದ್ದಾರೆ. ಫಲಾನುಭವಿಗಳ ಕಡೆಯಿಂದಲೇ ಮನೆ ನಿರ್ಮಾಣ ಮಾಡಿಸಿಕೊಂಡಿದ್ದಾರೆ. ಫಲಾನುಭವಿಗಳ ಹೇಳಿಕೆ ಪ್ರಕಾರ ಒಂದು ಮನೆಗೆ ಒಂದು ಲೋಡ್ ಮರಳು, ಒಂದು ಲೋಡ್ ಜಲ್ಲಿ, ಅಲ್ಪ ಸ್ವಲ್ಪ ಸಿಮೆಂಟ್ ಹಾಗೂ ಗೌಂಡಿಗಳ ವೇತನ ಎಂದು ₹40 ಸಾವಿರ ಮಾತ್ರ ನೀಡಿದ್ದಾರೆ. ಅಂದಾಜು ಒಂದು ಮನೆಗೆ ₹2 ಲಕ್ಷ ಮಾತ್ರ ಖರ್ಚು ಮಾಡಿ, ಉಳಿದ ಹಣವನ್ನು ಫಲಾನುಭವಿಗಳಿಗೆ ನೀಡದೇ ಅನ್ಯಾಯ ಎಸಗುವ ಮೂಲಕ ಹಗರಣ ಮಾಡಿದ್ದಾರೆ. ಫಲಾನುಭವಿಗಳಿಗೆ ಮನೆ ಮಂಜೂರು ವೇಳೆಯಲ್ಲಿ ಒಂದು ಲಕ್ಷ ರುಗಳ ಡಿಡಿಯನ್ನು ವಂತಿಕೆ ರೂಪದಲ್ಲಿ ಪಡೆದಿದ್ದಾರೆ. ಎಷ್ಟೋ ಮನೆಗಳ ಕೆಲಸ ಬಾಕಿ ಇದ್ದರೂ ಪೂರ್ಣಗೊಂಡಿವೆ ಎಂದು ವರದಿ ಸಲ್ಲಿಸಿದ್ದಾರೆ. ಇದರ ಜವಾಬ್ದಾರಿ ಹೊತ್ತ ಅಧಿಕಾರಿಗಳು ಸಹ ಸುಮ್ಮನಿರುವುದು ಅನುಮಾನಕ್ಕೆ ಆಸ್ಪದ ಮಾಡಿ ಕೊಡುತ್ತಿದೆ. ಸಾರ್ವಜನಿಕರಿಗೆ ಸಹಾಯಹಸ್ತ ಚಾಚಬೇಕಾದ ಸರ್ಕಾರ ಮತ್ತು ಅಧಿಕಾರಿಗಳು, ಬಡವರ ಹೆಸರಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸ್ಲಮ್ ಅಭಿವೃದ್ಧಿ ಬೋರ್ಡ್‌ನಿಂದ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯಲ್ಲಿ ನಡೆದ ಹಗರಣ ಕುರಿತು ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರ ನೀಡುತ್ತೇನೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಗಳಿಗೆ ಕಾನೂಕು ಕ್ರಮ ಕೈಗೊಳ್ಳುವ ವರೆಗೆ ಹೋರಾಟ ನಡೆಸುತ್ತೇನೆ ಎಂದರು.
ಆನಂತರ ಪಟ್ಟಣದಲ್ಲಿ ನಿರ್ಮಾಣಗೊಂಡ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ಜತೆ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.