ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾನುವಾರ ದೀಪಾವಳಿ ಸಂಭ್ರಮ. ಸೋಮವಾರ ಗೋಪೂಜೆ ಆಚರಿಸಿದರೆ, ಮಂಗಳವಾರ ‘ಅಂಗಡಿ ಪೂಜೆ’ಗೆ ಜಿಲ್ಲೆಯ ಜನತೆ ಸಿದ್ಧರಾಗಿದ್ದಾರೆ.ಮನೆಗಳು ಗೂಡುದೀಪಗಳಿಂದ ಅಲಂಕೃತಗೊಂಡಿದ್ದವು. ದೀಪಾವಳಿ ಪ್ರಯುಕ್ತ ಬೆಳಗ್ಗೆದ್ದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ವಿಶೇಷ ಅಡುಗೆ ಮಾಡಿ ಸಂಭ್ರಮಿಸಿದರು. ರಾತ್ರಿ ವೇಳೆ ಬೆಳಕಿನಲಂಕಾರದಿಂದ ಮನೆ ಮನೆಗಳು ಕಂಗೊಳಿಸುತ್ತಿದ್ದವು.
ಗೂಡುದೀಪ ಮಾರಾಟ ಭರಾಟೆ: ಮಾರುಕಟ್ಟೆ, ಅಂಗಡಿಗಳಲ್ಲಿ ಗೂಡುದೀಪ ಭರದಿಂದ ಮಾರಾಟವಾದವು. ವಿವಿಧ ಬಣ್ಣ, ಗಾತ್ರದ ಗೂಡುದೀಪ ನೋಡುಗರ ಮನ ಸೆಳೆಯುತ್ತಿತ್ತು. 50 ರು.ನಿಂದ ಹಿಡಿದು ಸಾವಿರ ರು.ವರೆಗಿನ ಗೂಡುದೀಪಗಳು ಮಾರಾಟವಾದವು. 40ಕ್ಕೂ ಹೆಚ್ಚು ವಿಧದ ಗೂಡುದೀಪ ಮಾರಾಟ ಮಾಡುತ್ತಿರುವುದಾಗಿ ಮಂಗಳೂರಿನ ಮಾರಾಟಗಾರರು ತಿಳಿಸಿದರು.ಇದಲ್ಲದೆ, ಮಣ್ಣಿನ ಹಣತೆಗಳ ಮಾರಾಟವೂ ಭರದಿಂದ ಸಾಗಿದೆ. ಒಂದು ಡಜನ್ ಮಣ್ಣಿನ ಹಣತೆ 40-50 ರು.ಗೆ ಮಾರಾಟವಾದವು. ಬೆಲೆ ಏರಿಕೆ ನಡುವೆಯೂ ದೀಪಾವಳಿ ಪ್ರಯುಕ್ತ ಮಾರುಕಟ್ಟೆಗಳು, ಅಂಗಡಿ ಮಳಿಗೆಗಳು, ರಸ್ತೆ ಬದಿಗಳಲ್ಲಿ ಖರೀದಿ ಜೋರಾಗಿಯೇ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದಿಂದ 2-3 ದಿನಗಳ ಹಿಂದೆಯೇ ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ಆಗಮಿಸಿ ಜಿಲ್ಲಾದ್ಯಂತ ಪ್ರಮುಖ ಸ್ಥಳಗಳಲ್ಲಿ ರಸ್ತೆ ಬದಿ ಬಿರುಸಿನ ವ್ಯಾಪಾರದಲ್ಲಿ ತೊಡಗಿದ್ದಾರೆ.
ಹಸಿರು ಪಟಾಕಿಗೆ ಅನುಮತಿ: ಜಿಲ್ಲೆಯ ನೂರಾರು ಕಡೆ ಪಟಾಕಿ ಮಳಿಗೆಗಳು ತೆರೆದುಕೊಂಡಿವೆ. ಆದರೆ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶವಿದೆ. ರಾತ್ರಿ 10 ಗಂಟೆಯ ಬಳಿಕ ಪಟಾಕಿ ಸಿಡಿಸಲು ನಿರ್ಬಂಧ ಇದ್ದರೂ ಕೆಲವೆಡೆ ತಡರಾತ್ರಿಯೂ ಪಟಾಕಿ ಸದ್ದು ಕೇಳುತ್ತಲೇ ಇತ್ತು.ಭಾವೈಕ್ಯತೆಯ ದೀಪಾವಳಿ: ಮಾಜಿ ಎಂಎಲ್ಸಿ ಐವನ್ ಡಿಸೋಜ ನೇತೃತ್ವದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಪ್ರತಿ ವರ್ಷದಂತೆ ಈ ಬಾರಿಯೂ ಭಾವೈಕ್ಯತೆಯ ದೀಪಾವಳಿಯಾಗಿ ಆಚರಿಸಲಾಯಿತು. ಕದ್ರಿ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ, ಚಿತ್ರಕಲಾ ಸ್ಪರ್ಧೆಗಳು ನಡೆದವು. ಜತೆಗೆ ಗೂಡುದೀಪ ಸ್ಪರ್ಧೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ರಜಾ ದಿನಗಳೂ ಇರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಮುಂತಾದ ಪುಣ್ಯಕ್ಷೇತ್ರಗಳು, ಬೇಕಲ ಕೋಟೆ, ಸೋಮೇಶ್ವರ, ಪಣಂಬೂರು ಕಡಲ ಕಿನಾರೆ, ಸಸಿಹಿತ್ಲು ಬೀಚ್ ಮತ್ತಿತರ ಪ್ರವಾಸಿ ತಾಣ, ನಗರದ ಮಾಲ್‌ಗಳಲ್ಲಿ ಜನರ ದಟ್ಟಣೆ ಹೆಚ್ಚಿತ್ತು.ಹಳ್ಳಿ ಸೊಗಡು, ಬೇಸಾಯ ಇರುವ ಜಿಲ್ಲೆಯ ಅನೇಕ ಕಡೆ ಇಂದಿಗೂ ತುಳುನಾಡಿನ ಸಾಂಪ್ರದಾಯಿಕ ಆಚರಣೆ ಮುಂದುವರಿದಿದೆ. ಬಲಿ ಚಕ್ರವರ್ತಿಯನ್ನು ಕೆಲವೆಡೆ ಭಾನುವಾರವೇ ಆರಾಧನೆ ಮಾಡಿ, ಕೃಷಿ ಪರಿಕರಗಳನ್ನು ಇಟ್ಟು ವಿಶೇಷ ಪೂಜೆ ನೆರವೇರಿಸಿದರು. ಈ ಬಾರಿ ಜಿಲ್ಲಾದ್ಯಂತ ಬತ್ತ ಕಟಾವಿನ ಸಂದರ್ಭದಲ್ಲೇ ಮಳೆ ಸುರಿಯುತ್ತಿರುವುದರಿಂದ ಈ ನೋವಿನಲ್ಲೂ ರೈತರು ಸಂಭ್ರಮದಿಂದ ಪಾಲ್ಗೊಂಡರು.