ಪೂಜೆ ಸಲ್ಲಿಸಿದ ಭವಾನಿ ರೇವಣ್ಣ । ವಿವಿದ ಕಲಾ ಪ್ರದರ್ಶನ
ಹಾಸನ: ನಗರದ ಗಾಂಧಿ ಬಜಾರಿನ ಬಳಿ ಇರುವ ದೇಗುಲದಲ್ಲಿ ೫ನೇ ದಿನವಾದ ಶನಿವಾರ ಶ್ರೀ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ರಥೋತ್ಸವವು ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ ವಿಜೃಂಭಣೆಯಿಂದ ನೆರೆವೇರಿತು. ಶಾಸಕ ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಭವಾನಿ ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿ, ವಿಶ್ವಕರ್ಮ ಸಮಾಜದವರು ಒಗ್ಗಟ್ಟಾಗಿ ಶ್ರೀ ಕಾಳಿಕಾಂಬ ದೇವಸ್ಥಾನದ ಜಾತ್ರೆ ನೆರವೇರಿಸಲಾಗುತ್ತಿದ್ದು, ಉರಿ ಬಿಸಿಲನ್ನು ಲೆಕ್ಕಿಸದೇ ದೇವರ ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ. ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಮಹಾಸ್ವಾಮಿ ಆಗಮಿಸಿದ್ದು, ನೂತನವಾಗಿ ನಿರ್ಮಿಸಿರುವ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ದೇವಾಲಯ ತುಂಬ ಚನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.ಶ್ರೀ ಕಾಳಿಕಾಂಬ-ಕಮಠೇಶ್ವರ ದೇವಾಲಯ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಹರೀಶ್ ಮಾತನಾಡಿ, ಮಾ.೨೬ ರಿಂದ ೩೦ರ ವರೆಗೂ ಹಾಸನ ನಗರದ ಗಾಂಧಿ ಬಜಾರಿನ ಬಳಿ ಇರುವ ಶ್ರೀ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ದೇವಾಲಯದ ಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಳಶೋತ್ಸವ ಸಂಭ್ರಮದಿಂದ ನೆರವೇರಿದೆ ಎಂದರು.
ಬೆಳಗಿನಿಂದ ರುದ್ರಹೋಮ, ಗುರುಹೋಮ, ವೆಂಕಟೇಶ್ವರ ಹೋಮ, ಆಂಜನೇಯ ಹೋಮ, ನವಗ್ರಹ ಹೋಮ, ಮಹಾಪೂಜೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಪೂರ್ಣಾಹುತಿ, ವೈದಿಕ ಸಂಭಾವನೆ, ಕರ್ಮಸಮಾಪ್ತಿ ನಂತರ ಮಹಾಪ್ರಸಾದ ನೆರವೇರಿದೆ. ಸಂಜೆ ಶ್ರೀ ಕಾಳಿಕಾಂಬ ದೇವಾಲಯದ ಲೋಕಾರ್ಪಣೆ ನೆರವೇರಿದೆ ಎಂದು ಮಾಹಿತಿ ನೀಡಿದರು.ರಥೋತ್ಸವದಲ್ಲಿ ನಾದಸ್ವರ, ಚಂಡೆವಾದ, ಡೋಲು, ವೀರಗಾಸೆ ಸೇರಿ ನಾನಾ ಸಾಂಸ್ಕೃತಿಕ ಕಲಾತಂಡಗಳು ಆಕರ್ಷಿಸಿದವು.
ಗಿರೀಶ್ ಚನ್ನವೀರಪ್ಪ, ಪ್ರಸನ್ನ, ಎಚ್.ಬಿ. ಗೋಪಾಲ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಬಿ. ಕುಮಾರಚಾರ್, ಸಮಿತಿ ಅಧ್ಯಕ್ಷ ಎಚ್.ಕೆ.ಆನಂದಾಚಾರ್, ಉಪಾಧ್ಯಕ್ಷ ಎಚ್.ಎಚ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಹರೀಶ್, ಮುಖಂಡರಾದ ಬ್ಯಾಟರಂಗಚಾರ್, ಕೇಶವಪ್ರಸಾದ್, ಅನಿಲ್ ಪದ್ಮನಾಬ್, ಎಚ್.ಕೆ. ಸತೀಶ್, ಶ್ರೀನಿವಾಸ್, ಗೋಪಾಲಚಾರ್, ಶ್ರೀಕಂಠಮೂರ್ತಿ, ಲೋಕೇಶ್, ಸುರೇಶ್, ಆನಂದ್, ನಾಗೇಶ್ ಮತ್ತು ಮೋಹನ್ ಇದ್ದರು.ಹಾಸನದ ಗಾಂಧಿ ಬಜಾರಿನ ಬಳಿ ಇರುವ ದೇಗುಲದಲ್ಲಿ ೫ನೇ ದಿನವಾದ ಶನಿವಾರ ಶ್ರೀ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.