ಜಗಳೂರು : ಸಾಮಾನ್ಯವಾಗಿ ಗೊಲ್ಲರ ಹಟ್ಟಿಗಳಲ್ಲಿ ಋತುಮತಿ, ಹೆರಿಗೆಯಾದಾಗ ಇಲ್ಲವೇ ತಿಂಗಳ ಮುಟ್ಟಾದಾಗ ಮಹಿಳೆಯರನ್ನು ಊರಿನ ಆಚೆಯ ಗುಡಿಸಲುಗಳಲ್ಲಿ ಮೂರು ದಿನಗಳ ಕಾಲ ಹೊರಗಿಡುವ ಮೌಢ್ಯ ಇಂದಿಗೂ ಜೀವಂತವಾಗಿದೆ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ವಿಷಾದಿಸಿದರು.
ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಗ್ರಾಮದ ಕುಂದುಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ವಯಸ್ಸಿನಲ್ಲಿ ನಾನೂ ಸಮಸ್ಯೆ ಅನುಭವಿಸಿದ್ದೇನೆ. ಗೊಲ್ಲ ಸಮುದಾಯದ ಆರಾಧ್ಯದೈವ ಶ್ರೀಕೃಷ್ಣ ಪರಮಾತ್ಮ ಎಲ್ಲಿಯೂ ಮುಟ್ಟಾದ ಸ್ತ್ರೀಯರನ್ನು ಮನೆಯಿಂದ ಹೊರಗಿಡಿ ಎಂದು ಹೇಳಿಲ್ಲ. ಸರ್ವಜ್ಞ ಹೇಳಿದಂತೆ ಮುಟ್ಟೇ ಹುಟ್ಟಿನ ಗುಟ್ಟು. ಮೌಢ್ಯದಿಂದ ಹೊರಬನ್ನಿ ಎಂದು ಮಹಿಳೆಯರಿಗೆ ಅರಿವು ಮೂಡಿಸಿದರು.
ಮುಟ್ಟಾಗದಿದ್ದರೆ ಜನ್ಮ ನೀಡಲು ಸಾಧ್ಯವಿಲ್ಲ. ಮುಟ್ಟು ಶುಭದ ಸಂಕೇತ, ಮುಟ್ಟಿಗೆ ಮಡಿಯಿಲ್ಲ. ಇದು ಬಸವಣ್ಣನ ನಾಡು. ಪುರುಷನಿಗೆ ಸ್ತ್ರೀ, ಸ್ತ್ರೀಗೆ ಪುರುಷ ಇಲ್ಲದಿದ್ದರೆ ಸೃಷ್ಠಿಯಿಲ್ಲ. ಮಹಿಳೆಯರ ಮುಟ್ಟಿನ ವಿಚಾರದಲ್ಲಿ ಪುರುಷರು ಹೊರಗಿಡುವ ಅನಿಷ್ಟವನ್ನು ಬಿಡಿ. ಅವಳನ್ನು ತಾಯಿಯಂತೆ ಗೌರವಿಸಿ. ಆಯಕೆಯೂ ದೇವತೆಗೆ ಸಮ ಎಂದು ಕಾಣಿರಿ ಎಂದು ಪುರುಷರಿಗೆ ತಿಳಿಹೇಳಿದರು. ನಿಮ್ಮ ಗ್ರಾಮದಲ್ಲಿ ಮುಟ್ಟಿನ ವೇಳೆ ಸ್ತ್ರೀಯರನ್ನು ಊರಿಂದ ಹೊರಗಿಡುವ ಬದ್ಧತಿ ಇದ್ದರೆ ಹೇಳಿ ಎಂದು ಪ್ರಶ್ನಿಸಿದರು. ಆಗ ಮಹಿಳೆಯರು ನಮ್ಮೂರಿನಲ್ಲಿ ಅಂತಹ ಮೂಢನಂಬಿಕೆ ಇಲ್ಲ ಎಂದು ಹೇಳಿದರು.
ಗ್ರಾಮ ಸಭೆಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಮುಖ್ಯ. ಪ್ರತಿ ಗ್ರಾಮ ಸಭೆ ನಡೆಸುವಾಗ ಮಹಿಳೆಯರನ್ನೂ ಸೇರಿಸಿಕೊಳ್ಳಿ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಶುದ್ಧನೀರು, ಕೌಶಲ ತರಬೇತಿ ಮಾಡಿಸಿ. ಈ ಕುರಿತು ಜಿಲ್ಲಾಧಿಕಾರಿ, ಸಿಇಒ ಸಭೆಯಲ್ಲಿ ಚರ್ಚಿಸುತ್ತೇನೆ. ಗ್ರಾಮಕ್ಕೆ ತಕ್ಷಣವೇ ಕೆಎಸ್ಆರ್ಟಿಸಿ ಸಾರಿಗೆ ಸೌಕರ್ಯ ಕಲ್ಪಿಸಬೇಕು ಎಂದು ರೂಟ್ ಆಫೀಸರ್ ಫಕ್ರುದ್ಧೀನ್ ಅವರಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ರಾಜಾನಾಯ್ಕ್, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ಡಿಎಚ್ಒ ಡಾ.ಷಣ್ಮುಖಪ್ಪ, ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಪಿಡಿಒ ಓಬಣ್ಣ, ಗ್ರಾಪಂ ಅಧ್ಯಕ್ಷೆ ಅಶ್ವಿನಿ ಅಂಜನಪ್ಪ, ತಾಪಂ ಇಒ ಕೆಂಚಪ್ಪ, ಸದಸ್ಯರಾದ ಶಿವು ಯಾದವ್, ಚೌಡಮ್ಮ, ಉಪನ್ಯಾಸಕ ಡಾ.ಬಸವರಾಜ್, ಚಿತಪ್ಪ, ವೈದ್ಯಾಧಿಕಾರಿ ಡಾ.ಷಣ್ಮುಖ ಮತ್ತಿತರರು ಇದ್ದರು.
ಆಸ್ಪತ್ರೆ ವ್ಯವಸ್ಥೆ ಪರಿಶೀಲನೆ:
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡುವ ಮುನ್ನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಔಷಧಿ ವಿತರಣಾ ಘಟಕ, ಹೆರಿಗೆ ವಾರ್ಡ್ ಭೇಟಿ ನೀಡಿ ನೀರು, ಶೌಚಾಲಯದ ಬಗ್ಗೆ ವಿಚಾರಿಸಿದರು. ಪ್ರಮುಖ ಸಮಸ್ಯೆಗಳಾದ ಫಿಜಿಷಿಯನ್ ಕೊರತೆ, ಡಯಾಲಿಸಿಸ್ ಘಟಕ ಸ್ಥಾಪನೆ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ವೇದಿಕೆಯಲ್ಲೇ ಅಧಿಕಾರಿಗಳಿಗೆ ಕ್ಲಾಸ್ ಕುಡಿಯುವ ನೀರಿನ ಸಮಸ್ಯೆ, ಆರ್‌ಒ ಘಟಕವಿಲ್ಲ, ಸರ್ಕಾರಿ ಬಸ್ ಸೌಲಭ್ಯವಿಲ್ಲ, ನರೇಗಾ ಉದ್ಯೋಗವಿಲ್ಲ, ರಸ್ತೆಯಿಲ್ಲ ಎಂದು ಗ್ರಾಮದ ಯುವಕರು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಗಮನಕ್ಕೆ ತಂದರು. ಆಗ ವೇದಿಕೆ ಮೇಲೆ ಇದ್ದ ಪಿಡಿಒ ಓಬಣ್ಣ ಅವರನ್ನು ಕರೆಸಿ, ಗ್ರಾಮಕ್ಕೆ ಸಕಲ ವ್ಯವಸ್ಥೆ ಕಲ್ಪಿಸುವುದು ಪಿಡಿಒ ಆಗಿ ನಿಮ್ಮ ಕರ್ತವ್ಯ. ನರೇಗಾ ಯೋಜನೆಯಲ್ಲಿ ಉದ್ಯೋಗ ಕೊಡುವುದು ಜಿಲ್ಲಾ ಪಂಚಾಯಿತಿಯ ಆದ್ಯ ಕರ್ತವ್ಯ ಎಂದು ವೇದಿಕೆಯಲ್ಲಿದ್ದ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಅವರಿಗೆ ಸೂಚನೆ ನೀಡಿದರು.