ಶ್ರೀಕೃಷ್ಣನ ಬೋಧನೆಗಳು ನಮ್ಮ ಬದುಕಿಗೆ ಮಾರ್ಗದರ್ಶನ: ತಹಸೀಲ್ದಾರ್‌ ರಶ್ಮಿ

KannadaprabhaNewsNetwork |  
Published : Aug 18, 2025, 12:00 AM IST
ಸಿಕೆಬಿ-2 ಬಿಜಿಎಸ್ ಶಾಲೆಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆಯಲ್ಲಿ ಶ್ರೀಕೃಷ್ಣ ಮತ್ತು ರಾಧೆಯ ವೇಷಧಾರಿ ಮಕ್ಕಳೊಂದಿಗೆ ಅತಿಥಿಗಳು | Kannada Prabha

ಸಾರಾಂಶ

ಶ್ರೀಕೃಷ್ಣನ ಆರಾಧನೆಯಿಂದ ಹೆಚ್ಚಿನ ಸಂತೋಷ ಮತ್ತು ಏಕತೆಯ ಭಾವವನ್ನು ತರುತ್ತದೆ. ಶ್ರೀಕೃಷ್ಣನ ಗೀತೆಯಲ್ಲಿ ಅನೇಕ ಸಲಹೆಗಳು ಮತ್ತು ಉಪದೇಶಗಳನ್ನು ನೀಡಿದ್ದಾನೆ. ಆತ ಉಚ್ಚರಿಸಿದ ಪ್ರತಿಯೊಂದು ಪದವೂ ಅನ್ಯಾಯದ ವಿರುದ್ಧ ಹೋರಾಡಲು ಯಾವಾಗಲೂ ಸ್ಫೂರ್ತಿಯಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇವರು ಬೇರೆ ಬೇರೆ ರೂಪಗಳಲ್ಲಿ ಜನರ ಕಷ್ಟಗಳನ್ನು ನಿವಾರಿಸಲು ಅವತರಿಸುತ್ತಾರೆ. ಅಂತಹ ವಿಷ್ಣುವಿನ ಅವತಾರಗಳಲ್ಲಿ ಶ್ರೀಕೃಷ್ಣ ಮತ್ತು ಶ್ರೀರಾಮನ ಅವತಾರಗಳು ಅತ್ಯಂತ ಶ್ರೇಷ್ಠವಾದವು ಎಂದು ತಹಸೀಲ್ದಾರ್‌ ರಶ್ಮಿ ಹೇಳಿದರು.

ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲಿಷ್ ಶಾಲೆಯಲ್ಲಿ ನಡೆದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಶ್ರೀಕೃಷ್ಣನ ಆರಾಧನೆಯಿಂದ ಹೆಚ್ಚಿನ ಸಂತೋಷ ಮತ್ತು ಏಕತೆಯ ಭಾವವನ್ನು ತರುತ್ತದೆ. ಶ್ರೀಕೃಷ್ಣನ ಗೀತೆಯಲ್ಲಿ ಅನೇಕ ಸಲಹೆಗಳು ಮತ್ತು ಉಪದೇಶಗಳನ್ನು ನೀಡಿದ್ದಾನೆ. ಆತ ಉಚ್ಚರಿಸಿದ ಪ್ರತಿಯೊಂದು ಪದವೂ ಅನ್ಯಾಯದ ವಿರುದ್ಧ ಹೋರಾಡಲು ಯಾವಾಗಲೂ ಸ್ಫೂರ್ತಿಯಾಗಿದೆ. ಜನ್ಮಾಷ್ಟಮಿ ಎಂಬುದು ಕೇವಲ ಹಬ್ಬವಲ್ಲ, ಬದಲಾಗಿ ಜೀವನ ವಿಧಾನವಾಗಿದೆ. ಶ್ರೀಕೃಷ್ಣನ ಬೋಧನೆಗಳು ನಮ್ಮ ದೈನಂದಿನ ಜೀವನದಲ್ಲಿ ನಮಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತವೆ ಮತ್ತು ಉತ್ತಮ ಮನುಷ್ಯರಾಗಲು ಸಹಾಯ ಮಾಡುತ್ತದೆ ಎಂದರು.

ಶ್ರೀ ಕೃಷ್ಣ ಉತ್ತಮವಾದ ಅಣ್ಣ, ಸ್ನೇಹಿತ, ದೇವರು, ಗುರುಗಳು ಹೌದು. ಶ್ರೀ ಕೃಷ್ಣನ ತುಂಟಾಟ ಮತ್ತು ಮುಗ್ಧತೆ ಎಲ್ಲರಿಗೂ ಮೆಚ್ಚುಗೆ ಯಾಗುತ್ತದೆ. ಶ್ರೀಕೃಷ್ಣನು ಕುಚೇಲನೊಂದಿಗೆ ಹೊಂದಿದ್ದ ಸ್ನೇಹವೇ ಅತ್ಯುತ್ತಮವಾದ ಸ್ನೇಹಕ್ಕೆ ಉದಾಹರಣೆ. ಸತ್ಯ ಮಾರ್ಗ, ಧರ್ಮ ಮಾರ್ಗಗಳಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.

ಬಿಜಿಎಸ್ ಸಂವಿತ್ ಶಾಲೆಯ ಕೌನ್ಸಿಲರ್ ಕೆ.ಆರ್.ಕಲಾವತಿ ಮಾತನಾಡಿ, ಪ್ರತಿಯೊಬ್ಬ ಮಗುವೂ ಗುರು- ಹಿರಿಯರಿಗೆ ಗೌರವವನ್ನು ನೀಡಬೇಕೆಂಬುದು ಮಹಾಭಾರತ ತಿಳಿಸುತ್ತದೆ. ಮಕ್ಕಳಲ್ಲಿ ಯಾವಾಗಲೂ ನಗುವಿರಲಿ, ಸ್ವಯಂ ಶಿಸ್ತಿರಲಿ. ಪೋಷಕರು ಅವರ ಕೆಲಸವನ್ನು ಮಾಡಿಕೊಳ್ಳಲು ಅವರಿಗೇ ಬಿಡಬೇಕು. ಮಕ್ಕಳಿಗೆ ಪ್ರಾಮಾಣಿಕತೆ, ಸತ್ಯ, ತ್ಯಾಗಗಳ ಬಗ್ಗೆ ಅರಿವುಮೂಡಿಸಿ ಎಂದು ಸಲಹೆ ನೀಡಿದರು.

ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಬಿ. ರಮೇಶ್ ಮಾತನಾಡಿ, ಪ್ರಪಂಚದ ಎಲ್ಲಾ ಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿ ಪರಿಹಾರವಿದೆ. ಮಹಾಭಾರತ ನಾವು ಏನನ್ನು ಮಾಡಬಾರದೆಂಬುದನ್ನು ಹೇಳಿಕೊಡುತ್ತದೆ. ನಮ್ಮ ಕರ್ತವ್ಯವನ್ನು ನಾವು ಮಾಡಿದರೆ ಅದರ ಫಲ ಮುಂದೆ ಸಿಗುತ್ತದೆ. ಭಗವದ್ಗೀತೆಯನ್ನು ಬೇರೆ ದೇಶಗಳಲ್ಲಿ ಬೋಧಿಸುವುದರ ಮೂಲಕ ಭಗವದ್ಗೀತೆಯ ಮಹತ್ವವನ್ನು ತಿಳಿಸುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಇಂತಹ ಭಗವದ್ಗೀತೆಯನ್ನು ಹೇಳಿಕೊಡಲು ಹಿಂಜರಿಯುತ್ತಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನಿನಗೆ ಸೈನ್ಯ ಬೇಕಾ ಅಥವಾ ನಾನು ಬೇಕಾ ಎಂದು ಕೇಳಿದಾಗ ಅರ್ಜುನನು ನನಗೆ ಸೈನ್ಯ ಬೇಡ, ನೀನು ಬೇಕೆಂದು ಶ್ರೀಕೃಷ್ಣನ ಸಾಮರ್ಥ್ಯವನ್ನು ಕೊಂಡಾಡುತ್ತಾನೆ. ಮಕ್ಕಳು ಜೇಡಿಮಣ್ಣು ಇದ್ದಹಾಗೆ, ಆ ಜೇಡಿಮಣ್ಣಿನಿಂದ ನಾವು ಯಾವ ರೂಪವನ್ನು ಬೇಕಾದರೂ ಮಾಡಬಹುದು ಎಂದರು.

ಪೋಷಕರು ಮಕ್ಕಳಿಂದ ಸಾಕಷ್ಟು ಗುಣಗಳನ್ನು ಕಲಿಯಬೇಕು. ಮಕ್ಕಳು ಯಾವುದೇ ಬೇಧವಿಲ್ಲದೆ ಒಗ್ಗೂಡಿ ಆಟವಾಡುತ್ತಾರೆ, ಯಾವುದೇ ದ್ವೇಷ ಭಾವನೆಯನ್ನು ಬೆಳೆಸಿಕೊಳ್ಳದೆ ವರ್ತಿಸುತ್ತಾರೆ. ಆದರೆ ನಾವು ಜಗಳವಾಡಿದರೆ ದ್ವೇಷ ಸಾಧಿಸುತ್ತೇವೆ. ಮಕ್ಕಳು ಕೆಲವು ನಿಮಿಷಗಳ ನಂತರ ಮರೆತು ಹೋಗುತ್ತಾರೆ. ಆದ್ದರಿಂದ ಮನೆಯಲ್ಲಿ ಪೋಷಕರು ಮಕ್ಕಳ ಮುಂದೆ ಯಾವುದೇ ರೀತಿಯ ಜಗಳವಾಡದೆ ತಾಳ್ಮೆಯಿಂದ ವರ್ತಿಸಬೇಕೆಂಬ ಕಿವಿಮಾತನ್ನು ಪೋಷಕರಿಗೆ ಹೇಳಿದರು.

ಬಿಜಿಎಸ್‌ ಆಂಗ್ಲ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ ಕುಮಾರ್ ಮಾತನಾಡಿ, ಶಾಲೆಗಳಲ್ಲಿ ನಮ್ಮ ದೇಶದ ಹಬ್ಬಗಳನ್ನು ಆಚರಿಸುವುದರಿಂದ ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರಗಳು ಪರಿಚಯವಾಗಿ ಸುಸಂಸ್ಕೃತರಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಶ್ರೀ ಕೃಷ್ಣನ ಬಾಲ್ಯದ ಲೀಲೆಗಳು ನಮ್ಮ ಸಂಸ್ಕೃತಿಯಲ್ಲಿ ಮಿಳಿತವಾಗಿದ್ದು ಪ್ರತಿಯೊಬ್ಬರನ್ನು ಆಕರ್ಷಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಪುಟಾಣಿಗಳು ಶ್ರೀಕೃಷ್ಣ ಮತ್ತು ರಾಧೆಯ ವೇಷಭೂಷಣಗಳನ್ನು ತೊಟ್ಟು ಜನ್ಮಾಷ್ಟಮಿಯ ವಿವಿಧ ಹಾಡುಗಳಲ್ಲಿ ಕುಣಿದು ಕುಪ್ಪಳಿಸಿದರು. ಕೃಷ್ಣನ ಬಾಲ್ಯಲೀಲೆಗಳನ್ನು ನೆನಪಿಸುವ ಪುಟಾಣಿಗಳ ನೃತ್ಯರೂಪಕ ಎಲ್ಲಾ ಪೋಷಕರ ಮನಸ್ಸೆಳೆಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌