ಧಾರವಾಡ: ಭಾನುವಾರ ನಸುಕಿನ ವೇಳೆ ನಡೆದ ಲಾರಿ ಮತ್ತು ಆಟೋ ಮಧ್ಯೆ ನಡೆದ ಅಪಘಾತದಲ್ಲಿ ಏಳು ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಮೂವರು ಅಸುನೀಗಿದ ಮನಕಲಕುವ ದುರ್ಘಟನೆ ಇಲ್ಲಿಯ ಕೆಲಗೇರಿ ರಸ್ತೆಯ ಸಂಪಿಗೆ ನಗರದ ಮೋರ್ ಎದುರು ನಡೆದಿದೆ.
ಬೆಳಗಿನ ಇಂಟರ್‌ಸಿಟಿ ರೈಲಿನ ಮೂಲಕ ಬ್ಯಾಡಗಿಗೆ ತೆರಳಲು ಆಟೋ ಮೂಲಕ ರೈಲು ನಿಲ್ದಾಣಕ್ಕೆ ಹೊರಟಿದ್ದ ಕೆಲಗೇರಿಯ ಹಂಚಿನಮನಿ ಕುಟುಂಬದ ಇಬ್ಬರು ಮಕ್ಕಳು ಸೇರಿ ಐವರ ಪೈಕಿ ರಮೇಶ ಹಂಚಿನಮನಿ (35) (ಆಟೋ ಚಾಲಕ), ಹತ್ತಿರದ ಸಂಬಂಧಿ ಮರೆವ್ವ ಹಂಚಿಮನಿ (55) ಆಕೆಯ ಮೊಮ್ಮಗ ಪ್ರಣವ (7) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಆಟೋದಲ್ಲಿದ್ದ ಮರೆವ್ವ ಅವರ ಸೊಸೆ ರೇಣುಕಾ (25) ಹಾಗೂ ಇನ್ನೊಬ್ಬ ಮೊಮ್ಮಗ ಪೃಥ್ವಿ (4) ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ.
ಬಿಡಾಡಿ ದನವೇ ಕಾರಣಸಂಪಿಗೆ ನಗರದ ಮೋರ್ ಎದುರು ಸಾಕಷ್ಟು ಅಗಲವಾದ ರಸ್ತೆ ಇದ್ದು, ಅಪಘಾತದ ಸ್ಥಳವೇನಲ್ಲ. ಆದರೆ, ರಸ್ತೆಯ ಒಂದು ಬದಿ ಬಿಡಾಡಿ ದನ ಮಲಗಿದ್ದರಿಂದ ಅದನ್ನು ತಪ್ಪಿಸಲು ಲಾರಿ ಹಾಗೂ ಆಟೋ ಒಂದೇ ಪಥದಲ್ಲಿ ಸಂಚಾರ ಮಾಡಿದ್ದೇ ಈ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಬೆಳಗಿನ ಜಾವ ಯಾವ ವಾಹನಗಳಿಲ್ಲದ ಕಾರಣ ಲಾರಿ ಸಹ ವೇಗವಾಗಿಯೇ ಬಂದಿದ್ದು, ಲಾರಿ ಹೊಡೆತಕ್ಕೆ ಆಟೋ ನಜ್ಜುಗುಜ್ಜಾಗಿದೆ. ಮೃತ ದೇಹವನ್ನು ಲಾರಿ ಚಕ್ರಗಳು ತುಸು ದೂರ ಎಳೆದೊಯ್ದಿದೆ. ಒಂದೇ ಕುಟುಂಬದ ಸದಸ್ಯರು ಮೃತಪಟ್ಟಿದ್ದರಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ಮರೆವ್ವ, ಅವರ ಒಂದು ಮೊಮ್ಮಗ ಹಾಗೂ ಅವರ ದೊಡ್ಡಪ್ಪನ ಮಗ ಆಟೋ ಚಾಲಕ ಮೃತಪಟ್ಟಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಟ್ರಾಫಿಕ್ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.