ಕನ್ನಡಪ್ರಭ ವಾರ್ತೆ ಪಾಂಡವಪುರ
ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಮಹಿಳೆ, ಯುವತಿ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಮಹದೇಶ್ವರಪುರ ಗ್ರಾಮದ ಬಳಿ ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ತಾಲೂಕಿನ ನೀಲನಹಳ್ಳಿಯ ಶಿವಣ್ಣೇಗೌಡರ ಪತ್ನಿ ಶಿಲ್ಪಶ್ರೀ (34) ಮತ್ತು ಅದೇ ಗ್ರಾಮದ ಪ್ರದೀಪ ಎಂಬುವವರ ಪುತ್ರಿ ಸಂಧ್ಯಾ (17) ಮೃತಪಟ್ಟ ದುರ್ದೈವಿಗಳು. ಮೃತ ಸಂಧ್ಯಾರ ತಾಯಿ ಶೈಲಜಾ ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಶಿಲ್ಪಶ್ರೀ ಹಾಗೂ ಗಾಯಾಳು ಶೈಲಜಾ ಅವರು ತಿರುಪತಿಗೆ ಹೋಗುತ್ತಿದ್ದ ಹಿನ್ನೆಲೆಯಲ್ಲಿ ಶೈಲಜಾರ ಪುತ್ರಿ ಸಂಧ್ಯಾ ಇಬ್ಬರನ್ನು ಬೈಕ್‌ನಲ್ಲಿ ಡ್ರಾಪ್ ಮಾಡಲೆಂದು ಪಾಂಡವಪುರಕ್ಕೆ ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದರು.ಈ ವೇಳೆ ಮಹದೇಶ್ವರಪುರ ಗೇಟ್ ಬಳಿ ನಾಗಮಂಗಲ ಕಡೆಯಿಂದ ವೇಗವಾಗಿ ಬಂದು ಈರುಳ್ಳಿ ತುಬ್ಬಿದ್ದ ಲಾರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಶಿಲ್ಪಶ್ರೀ ಹಾಗೂ ಸಂಧ್ಯಾ ಸ್ಥಳದಲ್ಲಿಯೇ ಮೃಪಟ್ಟಿದ್ದಾರೆ. ಸಂಧ್ಯಾ ಅವರ ತಾಯಿ ಶೈಲಜಾ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಳು ಶೈಲಜಾ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾಸಿದ್ದಾರೆ.
ಮೃತ ಶ್ರಿಲ್ಪಶ್ರೀಗೆ ಒಂದು ಗಂಡು, ಹೆಣ್ಣು ಮಗುವಿದೆ, ಮೃತ ಯುವತಿ ಸಂಧ್ಯಾ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಷಯ ತಿಳಿದ ಡಿವೈಎಸ್ಪಿ ಮುರುಳಿ, ಪಿಎಸ್ ಐ ಪ್ರಮೋದ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರದ ಎದುರು ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಸ್ಥಳಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿಕೊಟ್ಟು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.