ಕನ್ನಡಪ್ರಭ ವಾರ್ತೆ ತುಮಕೂರು
ಲಾರಿ ಚಾಲಕರು ಅತಿ ವೇಗವಾಗಿ ವಾಹನ ಚಲಾಯಿಸಬೇಡಿ, ಅವಸರದ ಚಾಲನೆಯಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚು. ವಾಹನವನ್ನು ನಿಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಚಾಲನೆ ಮಾಡಿ, 10- 20 ನಿಮಿಷ ಬೇಗ ಸೇರುವುದಕ್ಕಾಗಿ ಹತೋಟಿ ಮೀರಿ ವಾಹನ ಚಲಾಯಿಸದೇ ಸ್ವಲ್ಪ ತಡವಾದರೂ ಸುರಕ್ಷಿತ ಚಾಲನೆ ಮುಖ್ಯ ಎಂದು ಮಾಜಿ ಶಾಸಕ ಡಾ.ಎಸ್.ರಫಿಕ್ ಅಹ್ಮದ್ ಹೇಳಿದರು.ಗುರುವಾರ ನಗರದ ಸಂತೆಪೇಟೆಯ ಜಿಲ್ಲಾ ಲಾರಿ ಚಾಲಕರು ಮತ್ತು ಸಹಾಯಕರ ಸಂಘಕ್ಕೆ ತಮ್ಮ ತಂದೆ, ಶಿಕ್ಷಣ ತಜ್ಞ ಎಸ್.ಎಂ.ಇಸ್ಮಾಯಿಲ್ ಅವರ ಸ್ಮರಣಾರ್ಥ ತಾವು ಕೊಡುಗೆ ನೀಡಿದ ಆ್ಯಂಬುಲೆನ್ಸ್ ಹಸ್ತಾಂತರ ಮಾಡಿ ಮಾತನಾಡಿದರು.
ಲಾರಿ ಚಾಲಕರು ಸರಕು- ಸಾಮಗ್ರಿ ತುಂಬಿಕೊಂಡು ಹೊರ ಜಿಲ್ಲೆಗಳಿಗೂ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಅಪಘಾತವಾದರೆ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಆ್ಯಂಬುಲೆನ್ಸ್ ಸಹಾಯಕ್ಕೆ ಬರುತ್ತದೆ. ಅಪಘಾತ, ಅವಘಡದ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಜೀವ ಉಳಿಸುವ ವಾಹನವಾಗಿದೆ. ಲಾರಿ ಚಾಲಕರು ಮತ್ತು ಸಹಾಯಕರ ಪ್ರಯಾಣ ಸುಖಕರವಾಗಿರಲಿ, ಅಚಾತುರ್ಯದಿಂದ ಸಂಭವಿಸುವ ಅಪಘಾತಗಳಿಗೆ ಆ್ಯಂಬುಲೆನ್ಸ್ ನೆರವಿಗೆ ಬರುತ್ತದೆ ಎಂದರು.ಮಾಜಿ ಶಾಸಕ ಎಸ್.ಷಫಿ ಅಹ್ಮದ್ ಹಾಗೂ ತಮ್ಮ ತಂದೆ ಇಬ್ಬರಲ್ಲೂ ಸಾಮ್ಯತೆ ಇದೆ. ಇಬ್ಬರೂ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದವರು. ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕು ಕೊಟ್ಟವರು. ಪ್ರಪಂಚದ ವಿವಿಧೆಡೆ ತಮ್ಮನ್ನು ಭೇಟಿಯಾಗುವವರು, ಸಾರ್, ನಾನು ನಿಮ್ಮ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದು ಎಂದು ಹೇಳುವಾಗ ಹೆಮ್ಮೆ ಎನಿಸುತ್ತದೆ. ಶಿಕ್ಷಣಕ್ಕೆ ಅಂತಹ ಶಕ್ತಿ, ಸಂಬಂಧವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬುದು ತಮ್ಮ ತಂದೆ ಎಸ್.ಎಂ.ಇಸ್ಮಾಯಿಲ್ ಅವರ ಆಶಯವಾಗಿತ್ತು. ಅದಕ್ಕಾಗಿಯೇ ಶಿಕ್ಷಣ ಸಂಸ್ಥೆ ತೆರೆದರು. ಮಕ್ಕಳಾದ ನಾವೂ ಉನ್ನತ ಶಿಕ್ಷಣ ಪಡೆಯಲು ಮಾರ್ಗದರ್ಶನ ಮಾಡಿದರು. ಶಿಕ್ಷಣದ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದರು ಎಂದು ಡಾ.ರಫಿಕ್ ಅಹ್ಮದ್ ತಂದೆ ನೆನೆದು ಅಭಿಮಾನಪಟ್ಟರು.
ಮಾಜಿ ಶಾಸಕ ಎಸ್.ಷಫಿ ಅಹ್ಮದ್ ಅವರು ಮಾತನಾಡಿ, ಲಾರಿ ಚಾಲಕರು ಮತ್ತು ಸಹಾಯಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಲು ಸಂಘದ ಪದಾಧಿಕಾರಿಗಳು ನೆರವಾಗಬೇಕು. ಚಾಲಕರಿಗೆ ವಿಮಾ ಸೌಲಭ್ಯ ಒದಗಿಸಲು ಸಹಾಯ ಮಾಡಿದ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಿದರು.ಲಾರಿ ಚಾಲಕರು, ಸಹಾಯಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ವಿದ್ಯೆಯಿಂದ ಇಂದು ಏನನ್ನಾದರೂ ಸಾಧನೆ ಮಾಡಬಹುದು. ಸರ್ಕಾರದಿಂದ ಮಕ್ಕಳಿಗೆ ದೊರೆಯುವ ವಿದ್ಯಾರ್ಥಿ ವೇತನ, ಹಾಸ್ಟೆಲ್ ಅನುಕೂಲಗಳನ್ನು ಪಡೆದು ಶಿಕ್ಷಣ ಪಡೆಯಬೇಕು. ಹೀಗೆ ಸರ್ಕಾರದಿಂದ ನಾನಾ ರೀತಿಯ ಯೋಜನೆಗಳಿವೆ. ಅವುಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಲಾರಿ ಚಾಲಕರು ಮತ್ತು ಸಹಾಯಕರ ಸಂಘದ ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಪಾಷಾ ಅವರು, ಸಂಘ ನಡೆದುಬಂದ ದಾರಿ ಬಗ್ಗೆ ಹೇಳುತ್ತಾ, ರಾಜ್ಯದಲ್ಲಿ ಇಂತಹ ಸಂಘ ಆರಂಭವಾಗಿದ್ದು ತುಮಕೂರಿನಲ್ಲೇ ಮೊದಲು. ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದ ಲಾರಿ ಚಾಲಕರು ಮತ್ತು ಸಹಾಯಕರನ್ನು ಸಂಘಟಿಸಿ ಅವರಿಗೆ ಸಹಾಯ ಮಾಡುವ ಸಲುವಾಗಿ ಹಿರಿಯರು ಸಂಘ ಸ್ಥಾಪನೆ ಮಾಡಿದರು. ಎಸ್.ಷಫಿ ಅಹ್ಮದ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಸಂತೆಪೇಟೆಯಲ್ಲಿ ಸಂಘದ ಕಚೇರಿಗೆ ನಿವೇಶನ ನೀಡಿದರು ಎಂದು ಸ್ಮರಿಸಿದರು.ಸಂಘದ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ಎಸ್.ತರುಣೇಶ್, ನಗರಪಾಲಿಕೆ ಮಾಜಿ ಸದಸ್ಯರಾದ ಇನಾಯತ್ ಉಲ್ಲಾಖಾನ್, ನದೀಂ ಪಾಷಾ, ಮುಖಂಡರಾದ ಅಕ್ರಮ್ ಉಲ್ಲಾಖಾನ್, ಕೆ.ನಯಾಜ್ ಅಹ್ಮದ್, ಅಫ್ತಾಬ್ ಅಹ್ಮದ್, ಜಿಯಾ ಉಲ್ಲಾ, ಸೈಫತ್ತುಲ್ಲಾ, ಅತೀಕ್ ಅಹ್ಮದ್, ಆಟೋ ರಾಜು, ಮುಕ್ತೀಯಾರ್ ಅಹ್ಮದ್, ಬಾಬು, ಜಾಕೀರ್ ಪಾಷಾ, ಚಾಂದ್ ಪಾಷಾ, ಅದೀಬ್ ಅಹ್ಮದ್, ಮಹ್ಮದ್ ಜಾಹಿದ್ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.