ಎಫ್‌ಸಿ ಮಾಡದ ಆರ್‌ಟಿಒ ವಿರುದ್ಧ ಗೂಡ್ಸ್‌ಶೆಡ್‌ ಲಾರಿ ಮಾಲೀಕರ ಆಕ್ರೋಶ

KannadaprabhaNewsNetwork |  
Published : Nov 20, 2026, 01:30 AM IST
ಲಾರಿ ಮಾಲೀಕರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಹಾಸನ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶೇಕ್ ಅಹಮದ್ ಮತ್ತು ಲೋಕೇಶ್ ಮಾಧ್ಯಮದೊಂದಿಗೆ ಮಾತನಾಡಿ, ಲಾರಿಗಳಿಗೆ ಈಗಾಗಲೇ ವೇಗ ನಿಯಂತ್ರಕ ಅಳವಡಿಸಲಾಗಿದ್ದು, ಸಂಬಂಧಪಟ್ಟ ಕಂಪನಿಗಳಿಂದ ದೃಢೀಕರಣ ಪತ್ರವನ್ನೂ ಪಡೆಯಲಾಗಿದೆ. ಆದರೂ ಆರ್‌ಟಿಒ ಕಚೇರಿಯಲ್ಲಿ ಎಫ್‌ಸಿ ಮಾಡಿಕೊಡುತ್ತಿಲ್ಲ. ಸರ್ಕಾರದಿಂದ ಯಾವ ಕಂಪನಿಯ ವೇಗ ನಿಯಂತ್ರಕವನ್ನು ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಅಥವಾ ಮಾರ್ಗಸೂಚಿ ನೀಡದಿರುವುದರಿಂದ ವಾಹನ ಮಾಲೀಕರು ಗೊಂದಲಕ್ಕೀಡಾಗಿದ್ದಾರೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ವೇಗ ನಿಯಂತ್ರಕ (ಸ್ಪೀಡ್ ಗವರ್ನರ್‌) ಅಳವಡಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಗೂಡ್ಸ್ ಶೆಡ್ ಲಾರಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೇಟ್) ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿರುವ ಲಾರಿಗಳಿಗೂ ಫಿಟ್‌ನೆಸ್ ಪ್ರಮಾಣಪತ್ರ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಲಾರಿ ಮಾಲೀಕರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಯು ನಗರದ ಸಂತೇಪೇಟೆ ವೃತ್ತದ ಬಳಿಯಿಂದ ಆರಂಭಗೊಂಡು ಬಿ.ಎಂ. ರಸ್ತೆಯ ಮೂಲಕ ಎನ್.ಆರ್. ವೃತ್ತ ತಲುಪಿತು. ಅಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ತಮ್ಮ ಬೇಡಿಕೆಗಳ ಪರವಾಗಿ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ನೀಡಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಹಾಸನ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶೇಕ್ ಅಹಮದ್ ಮತ್ತು ಲೋಕೇಶ್ ಮಾಧ್ಯಮದೊಂದಿಗೆ ಮಾತನಾಡಿ, ಲಾರಿಗಳಿಗೆ ಈಗಾಗಲೇ ವೇಗ ನಿಯಂತ್ರಕ ಅಳವಡಿಸಲಾಗಿದ್ದು, ಸಂಬಂಧಪಟ್ಟ ಕಂಪನಿಗಳಿಂದ ದೃಢೀಕರಣ ಪತ್ರವನ್ನೂ ಪಡೆಯಲಾಗಿದೆ. ಆದರೂ ಆರ್‌ಟಿಒ ಕಚೇರಿಯಲ್ಲಿ ಎಫ್‌ಸಿ ಮಾಡಿಕೊಡುತ್ತಿಲ್ಲ. ಸರ್ಕಾರದಿಂದ ಯಾವ ಕಂಪನಿಯ ವೇಗ ನಿಯಂತ್ರಕವನ್ನು ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಅಥವಾ ಮಾರ್ಗಸೂಚಿ ನೀಡದಿರುವುದರಿಂದ ವಾಹನ ಮಾಲೀಕರು ಗೊಂದಲಕ್ಕೀಡಾಗಿದ್ದಾರೆ ಎಂದು ದೂರಿದರು.

ಒಂದು ಕಡೆ ಎಫ್‌ಸಿ ಮಾಡಿಸಿಕೊಳ್ಳಲು ಚಲನ್ ಪಾವತಿಸಿ ಕಚೇರಿಗೆ ಅಲೆದಾಡುತ್ತಿದ್ದರೂ ಮತ್ತೊಂದು ಕಡೆ ಪ್ರಮಾಣಪತ್ರ ನೀಡದೆ ವಿಳಂಬ ಮಾಡುತ್ತಿರುವುದರಿಂದ ಲಾರಿಗಳು ರಸ್ತೆಗೆ ಇಳಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಲಾರಿ ಮಾಲೀಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ವಾಹನಗಳ ಸಾಲದ ಕಂತು, ವಿಮೆ, ನಿರ್ವಹಣೆ ಸೇರಿದಂತೆ ಹಲವು ವೆಚ್ಚಗಳನ್ನು ಭರಿಸುವುದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.

ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ರಸ್ತೆಗಳ ಸ್ಥಿತಿಯೇ ಸಮರ್ಪಕವಾಗಿಲ್ಲ. ಭಾರಿ ವಾಹನಗಳ ವೇಗದ ಮಿತಿಯೂ ಗಂಟೆಗೆ ೬೦ ಕಿ. ಮೀ. ಮೀರುವುದಿಲ್ಲ. ಇಂತಹ ಸಂದರ್ಭದಲ್ಲಿ ವೇಗ ನಿಯಂತ್ರಕ ಅಳವಡಿಕೆ ಕುರಿತು ಮತ್ತಷ್ಟು ಗೊಂದಲ ಸೃಷ್ಟಿಸುವ ಬದಲು, ಈಗಾಗಲೇ ಹಳೆಯ ಮಾದರಿಯ ವೇಗ ನಿಯಂತ್ರಕ ಅಳವಡಿಸಿಕೊಂಡಿರುವ ವಾಹನಗಳಿಗೆ ಎಫ್‌ಸಿ ನೀಡಬೇಕು. ಎಫ್‌ಸಿ ಶುಲ್ಕ ಪಾವತಿಸಿರುವ ಎಲ್ಲ ವಾಹನಗಳಿಗೂ ತಕ್ಷಣ ಫಿಟ್‌ನೆಸ್ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿದರು. ಸರ್ಕಾರದಿಂದ ಈ ಕುರಿತು ಸ್ಪಷ್ಟ ಆದೇಶ ಹಾಗೂ ಮಾರ್ಗಸೂಚಿ ಹೊರಬರುವವರೆಗೆ ಹಳೆಯ ವೇಗ ನಿಯಂತ್ರಕ ಹೊಂದಿರುವ ವಾಹನಗಳ ಎಫ್‌ಸಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದೆ ಮುಂದುವರಿಸಬೇಕು. ವೇಗ ನಿಯಂತ್ರಕ ಅಳವಡಿಕೆ ಕುರಿತ ಗೊಂದಲ ನಿವಾರಿಸಿ, ಲಾರಿ ಮಾಲೀಕರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ಅಗತ್ಯವಿದ್ದಲ್ಲಿ ವೇಗ ನಿಯಂತ್ರಕ ಅಳವಡಿಕೆ ನಿಯಮವನ್ನು ಮರುಪರಿಶೀಲಿಸಿ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ವೇಗ ನಿಯಂತ್ರಕ ಅಳವಡಿಕೆ ಕುರಿತ ಗೊಂದಲಕ್ಕೆ ಸಾರಿಗೆ ಇಲಾಖೆ ಶೀಘ್ರ ಸ್ಪಷ್ಟನೆ ನೀಡಿ, ಎಫ್‌ಸಿ ಪಡೆಯಲು ಕಾಯುತ್ತಿರುವ ಲಾರಿ ಮಾಲೀಕರ ಸಮಸ್ಯೆ ಬಗೆಹರಿಸಬೇಕು ಎಂಬುದು ಸಂಘದ ಪ್ರಮುಖ ಒತ್ತಾಯವಾಗಿದೆ.ಪ್ರತಿಭಟನೆಯಲ್ಲಿ ಹಾಸನ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಮಂಜುನಾಥ್, ಹೇಮಂತ್ ಕುಮಾರ್, ಶಶಿಧರ್, ಧರ್ಮೇಂದ್ರ, ಶಾಜನ್, ಮೋಹನ್, ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರ್ಯಾಕ್ಟರ್‌ಗಳಲ್ಲಿ ಹಾಡುಗಳ ಅಬ್ಬರ, ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ