ಕನ್ನಡಪ್ರಭ ವಾರ್ತೆ ಪಾಂಡವಪುರ
ಮನ್ಮುಲ್ ಚುನಾವಣೆಯಲ್ಲಿ ಸೋತ ಕಾಂಗ್ರೆಸ್- ರೈತ ಸಂಘದ ಅಭ್ಯರ್ಥಿ ಕಾಡೇನಹಳ್ಳಿ ರಾಮಚಂದ್ರ ಅವರು ಸೋಲಿನ ಹತಾಸೆಯಿಂದ ಮತದಾರರಿಗೆ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಧಮ್ಕಿ ಹಾಕುತ್ತಿರುವ ಬಗ್ಗೆ ನೊಂದ ಮತದಾರರು ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಆರೋಪಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಮತದಾರರಿಗೆ ಹಣದ ಆಮಿಷ ನೀಡುವುದೇ ಅಪರಾಧ. ಆದರೆ, ಕೆ.ರಾಮಚಂದ್ರ ಮತದಾರರಿಗೆ ಹಣಕೊಟ್ಟು ಚುನಾವಣೆಯಲ್ಲಿ ಗೆಲುವು ಸಾಧಿಸಲು ತಂತ್ರರೂಪಿಸಿ ಸೋಲುಂಡಿದ್ದಾರೆ. ಮತದಾರರ ಬಳಿ ಹೋಗಿ ಕೊಟ್ಟಿರುವ ಹಣ ವಾಪಸ್ಸು ನೀಡುವಂತೆ ಧಮ್ಕಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಮನ್ಮುಲ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಶಿವಕುಮಾರ್ ಅಧಿಕ ಮತಕೊಟ್ಟು ಅಭೂತ ಪೂರ್ವ ಗೆಲುವು ತಂದುಕೊಟ್ಟ ತಾಲೂಕಿ ಹಾಲು ಉತ್ಪಾದಕರ ಸಂಘದ ಎಲ್ಲಾ ಮತದಾರರಿಗೆ ಧನ್ಯವಾದ ಅರ್ಪಿಸಿದರು.ಪ್ರತಿಷ್ಠೆಯ ಕಣವಾಗಿದ್ದ ಮನ್ಮುಲ್ ಚುನಾವಣೆಯಲ್ಲಿ ರೈತಸಂಘ-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಗ್ಗೆ ವಿರೋಧಿ ಅಲೆ ವ್ಯಕ್ತವಾಗಿತ್ತು. ಕ್ಷೇತ್ರದ ಮತದಾರರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಅಭಿವೃದ್ಧಿ ಕಾರ್‍ಯಗಳನ್ನು ಮೆಚ್ಚಿ ಜತೆಗೆ ಡೇರಿ ಅಭಿವೃದ್ಧಿ ಪರ ಉತ್ತಮವಾಗಿ ಕೆಲಸ ಮಾಡುವ ಒಳ್ಳೆಯ, ಪ್ರಾಮಾಣಿಕ ಅಭ್ಯರ್ಥಿ ಬೇಕೆಂದು ತೀರ್ಮಾನಿಸಿ ಸಿ.ಶಿವಕುಮಾರ್‌ಗೆ 98 ಮತಗಳನ್ನು ಕೊಟ್ಟು ಗೆಲ್ಲಿಸಿದ್ದಾರೆ ಎಂದರು.
ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಇಬ್ಬರು ಹಾಗೂ ಪಾಂಡವಪುರ ಕ್ಷೇತ್ರದಲ್ಲಿ ಒಬ್ಬ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಪ್ರಾಬಲ್ಯವಾಗಿದೆ ಎಂದು ತೋರಿಸಿಕೊಟ್ಟಾರೆ. ಅಲ್ಲದೇ, ಕೆ.ಆರ್.ಪೇಟೆ, ಮದ್ದೂರಿನಲ್ಲಿ ಸಮನ್ವಯದ ಕೊರತೆಯಿಂದ ಸ್ವಲ್ಪ ಹಿನ್ನಡೆಯಾಗಿದೆ. ಹಾಗೆ ನೋಡಿದರೆ ಅಲ್ಲಿ ಗೆದ್ದಿರುವ ಅಭ್ಯರ್ಥಿಗಳು ನಮ್ಮವರೆ ಆಗಿದ್ದಾರೆ ಎಂದರು.ಮಳವಳ್ಳಿ ಕ್ಷೇತ್ರದಲ್ಲಿ ಸ್ವಲ್ಪ ಟೆಕ್ನಿಕಲ್ ಸಮಸ್ಯೆಯಿಂದ ನಮ್ಮ ಅಭ್ಯರ್ಥಿಗೆ ಸೋಲಾಗಿದೆ. ಅವರು ಕೋರ್ಟ್ ಮೆಟ್ಟಿಲೇರಿದ್ದು ನಮ್ಮ ಪರವಾಗಿ ಕೋರ್ಟ್‌ನಲ್ಲಿ ತೀರ್ಪು ಬರಲಿದೆ ಎನ್ನುವ ವಿಶ್ವಾಸವಿದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಕಳೆದ ವಿಧಾನಸಭೆ ಜೆಡಿಎಸ್ ಪಕ್ಷದ ಸೋಲಿನ ಬಳಿಕ ಕ್ಷೇತ್ರದಲ್ಲಿ ಜೆಡಿಎಸ್‌ನ ಗೆಲುವು ಆರಂಭಗೊಂಡಿದೆ. ಚಿನಕುರಳಿ ವಿಎಸ್‌ಎಸ್‌ಎನ್‌ಬಿ ಹಾಗೂ ಮನ್ಮುಲ್ ಚುನಾವಣೆ ಎರಡರಲ್ಲು ಜೆಡಿಎಸ್ ಬೆಂಬಲಿತರು ಭರ್ಜರಿಗೆ ಗೆಲುವು ಸಾಧಿಸಿದ್ದಾರೆ. ಮುಂದೆ ನಡೆಯುವ ಪಿಎಲ್‌ಡಿ ಬ್ಯಾಂಕ್ ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಮನ್‌ಮುಲ್ ಮಾಜಿ ನಿರ್ದೇಶಕ ಜಿ.ಈ.ರವಿಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಶ್ವಥ್‌ಕುಮಾರೇಗೌಡ, ಜೆಡಿಎಸ್ ಮುಖಂಡರಾದ ಹೊಸಕೋಟೆ ಪುಟ್ಟಣ್ಣ, ಹಳೇಬೀಡು ಕುಳ್ಳೇಗೌಡ, ಎರೆಗೌನಹಳ್ಳಿ ಯೋಗರಾಜ್ ಇದ್ದರು.