ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಸೇವಾಕಿರಣ ವೃದ್ಧಾಶ್ರಮ ಸಭಾಂಗಣದಲ್ಲಿ ಕರುನಾಡ ಸಿರಿಸಂಪದ ಸಾಹಿತ್ಯ, ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ವಾರ್ಷಿಕೋತ್ಸವದ ಪ್ರಯುಕ್ತ ಕವಿ, ಕಾವ್ಯ, ಸಾಂಸ್ಕೃತಿಕ ಸಂಭ್ರಮಾಚರಣೆ- ರಾಜ್ಯ ಮಟ್ಟದ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಕೆಲ ಸಾಹಿತಿಗಳು ಪಕ್ಷಗಳು ಮತ್ತು ಸರ್ಕಾರಗಳ ಹಿಂದೆ ಬಿದ್ದು ತಮ್ಮತನವನ್ನೇ ಕಳೆದುಕೊಳ್ಳುತ್ತಿದ್ದಾರೆ. ನಾಡು- ನುಡಿ, ನೆಲ- ಜಲದ ವಿಷಯವಾಗಿ ಅನ್ಯಾಯವಾಗುತ್ತಿದ್ದರೂ ದನಿ ಎತ್ತಲಾಗದಷ್ಟು ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಕನ್ನಡ ಶಾಲೆಗಳು ಮುಚ್ಚುತ್ತಿದ್ದರೂ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟಕ್ಕಿಳಿಯಲಾರದಷ್ಟು ಅಸಮರ್ಥರಾಗಿದ್ದಾರೆ. ಕನ್ನಡ ವಿರೋಧಿ ನಿಲುವುಗಳನ್ನು ಸಾಹಿತ್ಯದ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸುವ, ಜನರನ್ನು ಜಾಗೃತಗೊಳಿಸುವ ಶಕ್ತಿಯೇ ಇಲ್ಲದಂತಾಗಿದ್ದಾರೆ. ಸಾಹಿತಿಗಳು ರಾಜಕಾರಣಿಗಳಾಗುತ್ತಿರುವರೆಂಬಂತೆ ಭಾಸವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.ಸಾಹಿತಿ ಮತ್ತು ಸಾಹಿತ್ಯ ಎಂದೂ ನಿಂತ ನೀರಾಗಬಾರದು. ಸಮಾಜ ಸುಧಾರಣೆಗೆ ತಮ್ಮಿಂದಾಗುವ ಸಂದೇಶಗಳನ್ನು ಸಮರ್ಥವಾಗಿ ನೀಡಬೇಕಾದದ್ದು ಸಾಹಿತಿಗಳ ಕರ್ತವ್ಯ ಎಂದರು.
ದೊಡ್ಡ ದೊಡ್ಡ ಸಾಹಿತಿಗಳು, ವಿಮರ್ಶಕರು, ಕವನ ರಚನೆಯಲ್ಲಿ ಪ್ರಾಸ, ಗಣ, ಲಘು, ಗುರು ಮುಂತಾದ ಮಾಪನಗಳಿರಬೇಕೆಂದು ಪ್ರತಿಪಾದಿಸುತ್ತಾರೆ. ಆದರೆ, ಜನಸಾಮಾನ್ಯರ ನೋವು- ನಲಿವು ನಿತ್ಯದ ಅನುಭವಗಳನ್ನು ಅಭಿವ್ಯಕ್ತಿಸಲು ಈ ಯಾವ ಪ್ರಾಸಬದ್ಧಗಳೂ ಅನಿವಾರ್ಯವೇನೂ ಅಲ್ಲ. ಕವಿಯೊಬ್ಬ ತನಗನಿಸಿದ ವಾಸ್ತವಾಂಶದ ತಲ್ಲಣಗಳನ್ನು ಯಥಾವತ್ ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಎಷ್ಟು ಸಮರ್ಥನಾಗಿರುತ್ತಾನೋ ಅದನ್ನು ಆಸ್ವಾದಿಸುವ ಓದುಗರೂ ಕೂಡ ಆ ಕೃತಿಯನ್ನು ಒರೆಗೆ ಹಚ್ಚಿ ನೋಡುತ್ತಾರೆಯೇ ಹೊರತು ಅದರಲ್ಲಿ ಪ್ರಾಸ, ಲಘು, ಗುರು ಇವುಗಳನ್ನೆಲ್ಲ ಮಾಪನ ಮಾಡುತ್ತಾ ಕೂರುವುದಿಲ್ಲ ಎಂದು ಪ್ರತಿಪಾದಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಕರುನಾಡ ಸಿರಿಸಂಪದ, ಸಾಹಿತ್ಯ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.