ಕನ್ನಡಪ್ರಭ ವಾರ್ತೆ ಬೆಂಗಳೂರು
ಹಣಕಾಸು ಸಂಕಷ್ಟ ಹಿನ್ನೆಲೆಯಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವೈಯಾಲಿಕಾವಲ್ ನಿವಾಸಿ ವೆಂಕಟೇಶ್ (50) ಮೃತ ದುರ್ದೈವಿ. ಎರಡು ದಿನಗಳ ಹಿಂದೆ ತಮ್ಮ ಟ್ರಾವೆಲ್ಸ್ ಏಜೆನ್ಸಿ ಕಚೇರಿಯಲ್ಲಿ ವೆಂಕಟೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಚೇರಿಯಲ್ಲಿ ಬುಧವಾರ ಸಂಜೆ ದುರ್ವಾಸನೆಯಿಂದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆಗ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೌಟುಂಬಿಕ ಮನಸ್ತಾಪ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಮತ್ತು ಮಕ್ಕಳಿಂದ ಪ್ರತ್ಯೇಕವಾಗಿ ವೆಂಕಟೇಶ್ ನೆಲೆಸಿದ್ದರು. ಚೀಟಿ ವ್ಯವಹಾರ ನಡೆಸುತ್ತಿದ್ದ ಅವರು, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಚೀಟಿ ವ್ಯವಹಾರದಲ್ಲಿ ಅವರಿಗೆ ಸುಮಾರು 70 ಲಕ್ಷ ರು. ನಷ್ಟವಾಗಿತ್ತು. ಕೆಲವರು ಹಣ ಪಡೆದು ಚೀಟಿ ಕಂತು ಕಟ್ಟದೆ ವಂಚಿಸಿದ್ದರು. ಇದರಿಂದ ವೆಂಕಟೇಶ್ ಅವರಿಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಈ ಹಣಕಾಸು ಸಂಕಷ್ಟ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಕಳೆದ ಭಾನುವಾರ ಟ್ರಾವೆಲ್ಸ್ ಏಜೆನ್ಸಿಯಲ್ಲಿ ವೆಂಕಟೇಶ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.ಚೀಟಿ ವ್ಯವಹಾರಕ್ಕೆ ಹೋಗಬೇಡಿ: ವೆಂಕಟೇಶ್ ಸಲಹೆ?
ಟ್ರಾವೆಲ್ಸ್ ಏಜೆನ್ಸಿ ಕಚೇರಿಯಲ್ಲಿ ಮೃತನ ಮೊಬೈಲ್ ಪತ್ತೆಯಾಗಿದೆ. ಇದರಲ್ಲಿ ಆತ್ಮಹತ್ಯೆಗೂ ಮುನ್ನ ಮೃತ ವೆಂಕಟೇಶ್ ಮಾಡಿದ್ದಾರೆ ಎನ್ನಲಾದ ಸೆಲ್ಫಿ ವಿಡಿಯೋ ಸಿಕ್ಕಿದೆ. ಯಾರೂ ಚೀಟಿ ವ್ಯವಹಾರಕ್ಕೆ ಹೋಗಬೇಡಿ. ನನಗೆ ಏಳು ಜನರು ಮೋಸ ಮಾಡಿದರು. ಹೀಗೆ ವಂಚಿಸಿದವರ ಪೈಕಿ ಮೂವರು ಮೃತಪಟ್ಟಿದ್ದಾರೆ. ಜನರ ವಂಚನೆಯಿಂದ ನಾನು ತುಂಬಾ ಸಂಕಷ್ಟ ಅನುಭವಿಸಿದೆ ಎಂದು ಮೃತರು ಹೇಳಿದ್ದಾರೆ ಎನ್ನಲಾಗಿದೆ.