ಧಾರವಾಡ:
50 ವರ್ಷದ ಪುರುಷ ರೋಗಿಯೊಬ್ಬರು ತೀವ್ರವಾದ ಹೃದಯ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಯಶಸ್ವಿಯಾಗಿ ಈ ಚಿಕಿತ್ಸೆ ಒದಗಿಸಲಾಗಿದ್ದು, ಸದ್ಯ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ತೆರಳಿದ್ದಾರೆ. ರೋಗಿಗೆ ಹೃದಯ ವೈಫಲ್ಯ ನಿರಂತರವಾಗಿ ಕಾಡುತ್ತಿತ್ತು. ಹೃದಯದ ಎಡ ಮತ್ತು ಬಲಭಾಗಗಳ ನಡುವಿನ ಸಮನ್ವಯತೆ ಕಡಿಮೆಯಾಗಿತ್ತು. ವಿವರವಾಗಿ ತಪಾಸಣೆ ಮಾಡಿದ ಬಳಿಕ ಹಿರಿಯ ಹೃದಯರೋಗ ತಜ್ಞ ಡಾ. ರಘುಪ್ರಸಾದ್ ಎಸ್. ನೇತೃತ್ವದ ವೈದ್ಯರ ತಂಡವು ಎಲ್‌ಒಟಿ ಸಿಆರ್‌ಟಿ-ಡಿ ಜತೆಗೆ ಸಿಎಸ್‌ಪಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಎಲ್‌ಒಟಿ ಎಂದರೆ ಲೆಫ್ಟ್ ಬಂಡಲ್ ಬ್ರಾಂಚ್ ಆಫ್ಟಿಮೈಸ್ಡ್ ಥೆರಪಿ ಎಂದರ್ಥ. ಈ ಚಿಕಿತ್ಸೆಯನ್ನು ಹೃದಯದ ಕಂಡಕ್ಷನ್ ಸಿಸ್ಟಮ್‌ನ ಎಡಗಡೆ ಬಂಡಲ್ ಬ್ರಾಂಚ್ ಗೆ ಗುರಿಯಿಟ್ಟು ನಡೆಸಲಾಗುತ್ತದೆ. ಇದು ಫೇಸ್‌ಮೇಕರ್ ಚಿಕಿತ್ಸೆಯಾಗಿರುವ ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್ ನ ವಿಶೇಷ ರೂಪವಾಗಿದ್ದು, ಹೃದಯದ ಲಯವನ್ನು ನಿಯಂತ್ರಿಸಲು ಮತ್ತು ಅದರ ನೈಸರ್ಗಿಕ ಕಂಡಕ್ಷನ್ ಮಾರ್ಗಗಳ ಮೂಲಕ ಪಂಪಿಂಗ್ ಸಾಮರ್ಥ್ಯವನ್ನು ಉತ್ತಮಗೊಳಿಸಲು ಈ ಚಿಕಿತ್ಸೆ ಮಾಡಲಾಗುತ್ತದೆ.
ಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದ ಹೃದ್ರೋಗತಜ್ಞ ಡಾ. ರಘುಪ್ರಸಾದ್, ಈ ಚಿಕಿತ್ಸೆಯ ಮೂಲಕ ಉತ್ತರ ಕರ್ನಾಟಕ ಪ್ರದೇಶದಲ್ಲಿ ಹೃದಯ ವೈಫಲ್ಯ ಚಿಕಿತ್ಸೆಯ ಹೊಸ ಅಧ್ಯಾಯ ಆರಂಭವಾಗಿದೆ ಎಂದರು.ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ, ಹೃದಯ ಚಿಕಿತ್ಸೆಯ ವಿಚಾರದಲ್ಲಿ ಆಸ್ಪತ್ರೆಯು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿ ನಿಂತಿದೆ ಎಂದು ಹೇಳಿದರು.