ಪ್ರೀತಿ, ಗೌರವ, ಮಾನವೀಯತೆ ಕಣ್ಮರೆ: ರಾಮಾಂಜನಪ್ಪ ಆಲ್ದಳ್ಳಿ

KannadaprabhaNewsNetwork |  
Published : Mar 12, 2024, 02:01 AM IST
10ಕೆಪಿಎಲ್6:ಕೊಪ್ಪಳ ನಗರದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್) ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಒಂದು ದಿನದ ಶಿಬಿರ ಜರುಗಿತು. | Kannada Prabha

ಸಾರಾಂಶ

ಪ್ರೀತಿ ,ಗೌರವ, ಮಾನವೀಯತೆ ಕಳೆದುಹೋಗುತ್ತಿವೆ. ಇಂತಹ ಸಮಸ್ಯೆಗಳನ್ನು ಒಬ್ಬಂಟಿಯಾಗಿ ಬಗೆಹರಿಸಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಶಿಬಿರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಎಸ್‌ಯುಸಿಐಸಿ ರಾಜ್ಯ ನಾಯಕ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಇಂದು ಬೇರೆ ಬೇರೆ ಸಂಘಟನೆಗಳು ಮಹಿಳಾ ದಿನವನ್ನು ಆಚರಣೆ ಮಾಡುತ್ತಿವೆ. ಆದರೆ ಎಐಎಂಎಸ್ಎಸ್ ಮಹಿಳಾ ಸಂಘಟನೆ ಈ ದಿನವನ್ನು ಆಚರಣೆ ಮಾಡುವುದಕ್ಕೂ ಬೇರೆ ಸಂಘಟನೆಗಳು ಆಚರಣೆ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮಹಿಳಾ ದಿನದ ನೈಜ ಇತಿಹಾಸವನ್ನು ಮಹಿಳಾ ಸಮುದಾಯಕ್ಕೆ ತಿಳಿಸಿಕೊಟ್ಟು ಮಹಿಳಾ ಹೋರಾಟವನ್ನು ಮುನ್ನಡೆಸುವ ದಿಕ್ಕಿನಲ್ಲಿ ಎಐಎಂಎಸ್ಎಸ್ ಈ ದಿನವನ್ನು ಆಚರಿಸುತ್ತದೆ.

ಇಂದು ಸಾಮಾಜಿಕ ವಾತಾವರಣ ಕಲುಷಿತಗೊಳ್ಳುತ್ತಿದೆ. ಎಲ್ಲಾ ಜನಗಳು ಸಂಕಷ್ಟದಲ್ಲಿದ್ದಾರೆ. ಕುಟುಂಬಗಳಲ್ಲಿ ನೆಮ್ಮದಿ ಉಳಿದಿಲ್ಲ. ಸಂಬಂಧಗಳು ವ್ಯವಹಾರಿಕವಾಗಿ ಬಿಟ್ಟಿವೆ. ಅಶ್ಲೀಲ ಚಿತ್ರಗಳನ್ನು ನೋಡುವ ಯುವಕರ ಸಂಖ್ಯೆ ಭಾರತದಲ್ಲಿ ಅತಿ ಹೆಚ್ಚಿದೆ. ಪ್ರೀತಿ ,ಗೌರವ, ಮಾನವೀಯತೆ ಕಳೆದುಹೋಗುತ್ತಿವೆ. ಇಂತಹ ಸಮಸ್ಯೆಗಳನ್ನು ಒಬ್ಬಂಟಿಯಾಗಿ ಬಗೆಹರಿಸಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಇಂತಹ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಎಐಎಂಎಸ್ಎಸ್‌ನ ರಾಜ್ಯ ಕಾರ್ಯದರ್ಶಿ ಶೋಭಾ ಎಸ್. ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನವೆಂದರೆ ಅದು ದುಡಿಯುವ ಹೆಣ್ಣು ಮಕ್ಕಳ ಹೋರಾಟದ ದಿನ. ಸಾವಿರಾರು ಹೆಣ್ಣುಮಕ್ಕಳು ಎಂಟು ತಾಸು ದುಡಿತದ ಅವಧಿ, ಕೆಲಸದ ಸ್ಥಳದಲ್ಲಿ ಒಳ್ಳೆಯ ವಾತಾವರಣ, ಹೆರಿಗೆ ರಜೆ ಹೀಗೆ ಹಲವಾರು ಹಕ್ಕುಗಳಿಗಾಗಿ ಧ್ವನಿ ಎತ್ತಿ ಯಶಸ್ಸು ಕಂಡಂತಹ ದಿನ. ಈ ದಿನವನ್ನು ಪ್ರಪಂಚದಾದ್ಯಂತ ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ಸಮಾಜವಾದಿ ನಾಯಕಿಯಾದ ಕ್ಲಾರಾ ಜೆಟ್ಕಿನ್ ಕರೆ ನೀಡಿದ್ದಾರೆ ಎಂದರು.

ಎಐಎಂಎಸ್ಎಸ್ ಸಂಘಟನೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆಯಂತಹ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಿದೆ. ಮುಖ್ಯವಾಗಿ ಮಹಿಳೆಯರಿಗೆ ನೈಜ ಘನತೆ, ಗೌರವ, ಹಕ್ಕುಗಳನ್ನು ಕಲ್ಪಿಸುವ ಸಮಾಜವಾದಿ ಸಮಾಜವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇದು ನಮ್ಮ ನಿಮ್ಮೆಲ್ಲರ ಮುಂದಿರುವ ಜವಾಬ್ದಾರಿ ಈ ಜವಾಬ್ದಾರಿಯನ್ನು ಹೊತ್ತುಕೊಂಡು ಎಐಎಂಎಸ್ಎಸ್ ಸಂಘಟನೆಯನ್ನು ಇನ್ನೂ ಗಟ್ಟಿಗೊಳಿಸಬೇಕು. ಜೊತೆಗೆ ಇಡೀ ಮಹಿಳಾ ಸಮುದಾಯಕ್ಕೆ ಈ ವಿಚಾರವನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಸಂಘಟನಾಕಾರರಾದ ವಿಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿ ರಚಿಸಲಾಯಿತು. ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬಲು ಶಿಲ್ಪಾ ಅವರಿಯಿಂದ ಕರಾಟೆ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಮಜ್ಜಿಗೆ, ಶಾರದಾ ಗಡ್ಡಿ ಸೇರಿ ಹಲವಾರು ಬಡಾವಣೆ, ಹಳ್ಳಿಯ ಮಹಿಳೆಯರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ