ಕನ್ನಡಪ್ರಭ ವಾರ್ತೆ ಮಲೇಬೆನ್ನೂರು/ ದಾವಣಗೆರೆ
ಭಾನುವಳ್ಳಿ ಗ್ರಾಮದಲ್ಲಿ ಎರಡೂವರೆ ದಶಕದಿಂದ ಅಧಿಕೃತವಾಗಿದ್ದ ಮದಕರಿ ನಾಯಕ ದ್ವಾರ ಬಾಗಿಲನ್ನು ಜಿಲ್ಲಾಡಳಿತದ ಸೂಚನೆಯಂತೆ ಪೊಲೀಸ್ ಇಲಾಖೆಯು ತೆರವುಗೊಳಿಸಿದ್ದ, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ 30 ಜನರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂದೆ ದಿವಂಗತ ಎಚ್.ಶಿವಪ್ಪ ಸಚಿವರಿದ್ದಾಗ 18.4.1999ರಲ್ಲಿ ಸ್ಥಳೀಯ ಸಂಸ್ಥೆ ಅನುಮತಿ ಪಡೆದು, ಅಧಿಕೃತವಾಗಿಯೇ ಶ್ರೀ ಮದಕರಿ ನಾಯಕ ಮಹಾದ್ವಾರ ನಿರ್ಮಿಸಿ, ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಗಿತ್ತು. ಈಗ ಅದನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದರಿಂದ ಗ್ರಾಮದ ಪರಿಶಿಷ್ಟ ಪಂಗಡದ ಮುಖಂಡರು, ಮಹಿಳೆಯರು, ಸಮಾಜದವರು ಪ್ರತಿಭಟನೆಗೆ ಮುಂದಾಗಿದ್ದರಿಂದ ಪೊಲೀಸರು ಬಂಧಿಸಿದರು ಎನ್ನಲಾಗಿದೆ.ನಾಯಕ ಸಮಾಜದ ಮದಕರಿ ನಾಯಕ ಮಹಾದ್ವಾರ, ವೃತ್ತದ ನಾಮಫಲಕ ಹಾಗೂ ಕುರುಬ ಸಮಾಜದ ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿಚಾರವಾಗಿ ಕಳೆದ ಕೆಲವು ತಿಂಗಳಿನಿಂದ ಗ್ರಾಮದಲ್ಲಿ ಪ್ರತಿಭಟನೆ, ಧರಣಿಗಳು ನಡೆಯುತ್ತಿದ್ದವು. ಈ ವಿಚಾರದಿಂದಾಗಿ ಆಡಳಿತ ಯಂತ್ರಕ್ಕೂ ಇದು ತಲೆ ನೋವು ತಂದಿಟ್ಟಿತ್ತು. ಇಡೀ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ 28ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿ, ನಾಮಫಲಕ ತೆರವು ಮಾಡಲಾಯಿತು. ಮುಂಜಾಗ್ರತೆಯಾಗಿ ಪೊಲೀಸರು ವಾಲ್ಮೀಕಿ ಸಮುದಾಯದ ಸುಮಾರು 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.
ಕನಕದಾಸರ ಮೂರ್ತಿ ಉಳಿಸಿ, ಉಳಿದ ನಾಮಫಲಕ ಮತ್ತು ಮಹಾದ್ವಾರ ತೆಗೆದಿದ್ದಾರೆ. ಅಧಿಕಾರಿಗಳು ಒಂದು ಸಮುದಾಯದ ಪ್ರತಿನಿಧಿಗಳಂತೆ ಕೆಲಸ ಮಾಡದೇ, ನ್ಯಾಯದ ಪರ ಇರಬೇಕು. ತಕ್ಷಣವೇ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿ ಅಮಾನತುಪಡಿಸಬೇಕು ಎಂದು ಗ್ರಾಮದ ವಾಲ್ಮೀಕಿ ಹಾಗೂ ಗಂಗಾಮತ ಸಮುದಾಯದ ಮುಖಂಡರಾದ ಮಂಜಪ್ಪ, ಕಂಪನಿ ಹನುಮಂತಪ್ಪ, ಮಾರುತಿ ಇತರರು ಒತ್ತಾಯಿಸಿದರು. ಮಲೆಬೆನ್ನೂರು ಠಾಣೆಯ ಬಳಿ ವಾಲ್ಮೀಕಿ ಪೀಠದ ಟ್ರಸ್ಟ್ ಪದಾಧಿಕಾರಿಗಳು, ಸಮಾಜದ ವಕೀಲರು, ಮುಖಂಡರು ಧಾವಿಸಿ, ಜಿಲ್ಲಾಡಳಿತ, ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಸತ್ಯಶೋಧನಾ ಸಮಿತಿಯಲ್ಲಿ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಅಧ್ಯಕ್ಷರಾಗಿದ್ದು, ಗ್ರಾಮದಲ್ಲಿ ಸುಮಾರು 25 ಅನಧಿಕೃತ ಪುತ್ಥಳಿ, ನಾಮಫಲಕ ಇರುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಅವುಗಳ ತೆರವಿಗೆ ಸೂಚನೆ ನೀಡಿದ್ದರಿಂದ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮಾ.11ರಿಂದ ಮಾ.15ರವರೆಗೆ ಗ್ರಾಮದಲ್ಲಿ 144ನೇ ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದ್ದಾರೆ.