ಜಿಮ್‌ ಟ್ರೈನರ್‌ ವಿರುದ್ಧ ಲವ್‌ ಜಿಹಾದ್‌ ಆರೋಪ- ಪರಸ್ಪರ ಹಲ್ಲೆ

KannadaprabhaNewsNetwork |  
Published : Apr 04, 2026, 02:00 AM IST
ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯರನ್ನು ಲವ್‌ ಜಿಹಾದ್‌ಗೆ ಬಳಸಿಕೊಳ್ಳುತ್ತಿದ್ದು, ಅವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯ ಎದುರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ಮತ್ತೆ ಲವ್‌ ಜಿಹಾದ್‌ ಆರೋಪ ಸದ್ದು ಮಾಡಿದೆ. ಅನ್ಯ ಧರ್ಮದ ಜಿಮ್‌ ಟ್ರೇನರ್‌ ಒಬ್ಬರು ಜಿಮ್‌ಗೆ ಬರುತ್ತಿದ್ದ ಹಿಂದು ಯುವತಿಯ ಸ್ನೇಹ, ಸಲುಗೆ ಬಳಸಿ, ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾಗಿ ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಶುಕ್ರವಾರ ಆರೋಪಿ ಮನೆಗೆ ನುಗ್ಗಿ ಆತನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲಿ ಮತ್ತೆ ಲವ್‌ ಜಿಹಾದ್‌ ಆರೋಪ ಸದ್ದು ಮಾಡಿದೆ. ಅನ್ಯ ಧರ್ಮದ ಜಿಮ್‌ ಟ್ರೇನರ್‌ ಒಬ್ಬರು ಜಿಮ್‌ಗೆ ಬರುತ್ತಿದ್ದ ಹಿಂದು ಯುವತಿಯ ಸ್ನೇಹ, ಸಲುಗೆ ಬಳಸಿ, ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾಗಿ ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಶುಕ್ರವಾರ ಆರೋಪಿ ಮನೆಗೆ ನುಗ್ಗಿ ಆತನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅತ್ತ ಆರೋಪಿ ಸಹೋದರಿ ನನ್ನ ಸಹೋದರನನ್ನು ಅಪಹರಿಸಿ ತೀವ್ರ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾಳೆ.

ಎರಡೂ ಗುಂಪುಗಳ ಮಧ್ಯೆ ಪರಸ್ಪರ ಆರೋಪ- ಪ್ರತ್ಯಾರೋಪ ಹಲ್ಲೆ ನಡೆದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ಸಂತ್ರಸ್ತೆ ಆರೋಪಿಯು ನನಗೆ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಮಾಡಿ ವೀಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದಾನೆಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

ಇಲ್ಲಿನ ವಿಜಯನಗರದ ಜಿಮ್‌ ಟ್ರೈನರ್‌ ಸಮೀರ್‌ ಮುಲ್ಲಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಜಿಮ್‌ನಲ್ಲಿ ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್‌ ಜಿಹಾದ್‌ಗೆ ಯತ್ನಿಸಿದ್ದಾನೆಂದು ಆರೋಪಿಸಿರುವ ಹಿಂದೂ ಕಾರ್ಯಕರ್ತರು, ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು.

ಲವ್‌ ಜಿಹಾದ್‌ಗೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಅಮಾಯಕ ಹಿಂದೂ ಯುವತಿಯರನ್ನು ಮೋಸದ ಬಲೆಗೆ ಸಿಲುಕಿಸುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವೀಡಿಯೋ ವೈರಲ್‌:

ಜಿಮ್‌ಗೆ ತೆರಳುವ ಸಂದರ್ಭದಲ್ಲಿ ನನೆಗೆ ಸಮೀರ್ ಮುಲ್ಲಾ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಮಾಡಿದ್ದಾನೆ. ಇದರ ವೀಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ನಾನು ಏರೋಬಿಕ್‌ ಕಲಿಸಲು ಜಿಮ್‌ ಸೇರಿದಾಗ ಸಮೀರ್‌ ಸಹೋದರಿ ತೈಸಿಮ್‌ ಪರಿಚಯವಾಗಿತ್ತು. ಬಳಿಕ ಆತನನ್ನು ಪರಿಚಯಿಸಿದರು. ನಾವಿಬ್ಬರು ಸ್ನೇಹಿತರಾಗಿದ್ದೆವು. ಖಾಸಗಿ ಕಾಲೇಜಿ ಕ್ಯಾಂಪಸ್‌ನಲ್ಲಿದ್ದ ನನ್ನನ್ನು ಸಮೀರ್‌ 16-08-2025ರಂದು ಮಧ್ಯಾಹ್ನ ಜಿಮ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ತಮ್ಮ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಜತೆಗೆ ಅಶ್ಲೀಲ ಫೋಟೋ, ವೀಡಿಯೋ ಮಾಡಿಕೊಂಡಿದ್ದಾನೆ. ಪದೇ ಪದೇ ಅದನ್ನು ತೋರಿಸಿ ಬ್ಲಾಕ್‌ಮೇಲ್‌ ಮಾಡಿ ಅತ್ಯಾಚಾರ ಮಾಡಿದ್ದಾನೆ. ನೀನು ನನ್ನ ಜತೆ ಇರಬೇಕು. ಇಲ್ಲದಿದ್ದರೆ ವೀಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಸಂತ್ರಸ್ತೆ ಹೇಳಿದ್ದಾಳೆ.

ಅಪಹರಣದ ಆರೋಪ:

ನನ್ನ ಸಹೋದರ ಹಾಗೂ ಯುವತಿಯ ನಡುವೆ 2-3 ವರ್ಷಗಳಿಂದ ಪರಿಷಯ ಇತ್ತು. ಎರಡೂ ಕುಟುಂಬ ಸ್ನೇಹಿತರು. ಹಲವು ಸಲ ಸೇರಿದ್ದೇವೆ. ಆದರೂ ಸಹ ಹಿಂದೂ ಕಾರ್ಯಕರ್ತರು ಮನೆಗೆ ನುಗ್ಗಿದ ವೇಳೆ ಸಹೋದರನನ್ನು ಮನಸೋ ಇಚ್ಛೆ ಥಳಿಸಿ ತೀವ್ರ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಸಮೀರ್‌ನ ಸಹೋದರಿ ತೈಸಿಮ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ನಡುವೆ ಪೊಲೀಸ್‌ ವಶದಲ್ಲಿದ್ದ ಸಮೀರ್‌ನನ್ನು ಚಿಕಿತ್ಸೆಗಾಗಿ ಕೆಎಂಸಿಆರ್‌ಐಗೆ ದಾಖಲಿಸಿರುವುದು ಹಲ್ಲೆ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ತಲ್ವಾರ್‌ನಿಂದ ದಾಳಿ:

ಸಮೀರ್ ಮುಲ್ಲಾ ಕುಟುಂಬಸ್ಥರು ತಲ್ವಾರ್ ಹಿಡಿದುಕೊಂಡು ಬಂದು ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಸಮೀರ್ ಮುಲ್ಲಾ ತಮ್ಮ ಮಗಳನ್ನು ಜಿಮ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಇದು ಲವ್ ಜಿಹಾದ್ ಮಾಡುವ ಉದ್ದೇಶದಿಂದಲೇ ನಡೆದ ಮೋಸ. ಸಮೀರ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸ್ ಆಯುಕ್ತರಿಂದ ವಿಚಾರಣೆ

ಲವ್ ಜಿಹಾದ್ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಯುವಕ ಮತ್ತು ಯುವತಿ ಕುಟುಂಬಸ್ಥರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದ್ದು, ಗಾಯಾಳುಗಳನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜ್ಞಾಹೀನ ಸ್ಥಿಯಲ್ಲಿದ್ದವನು ನಾನು...

ಸಂತ್ರಸ್ತೆ ಮಾಡಿರುವ ಆರೋಪಗಳೆಲ್ಲವು ಸುಳ್ಳು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದದ್ದು ಯುವತಿಯಲ್ಲ ನಾನು ಎಂದು ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಕೆಎಂಸಿಆರ್‌ಐನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಮೀರ್‌, ಯುವತಿ ನನ್ನ ಮನೆಗೆ ಬಂದಾಗ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಮಾಡಿದ್ದೇನೆ ಎಂದು ಹೇಳಿರುವುದು ಸುಳ್ಳು. ಆಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದದ್ದು ಯುವತಿಯಲ್ಲ ನಾನು. ನನ್ನ ಮೊಬೈಲ್‌ನಲ್ಲಿ ಯಾವುದೇ ರೀತಿಯ ವೀಡಿಯೋ ಮಾಡಿಕೊಂಡಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನನ್ನ ಮೇಲೆಯೇ ಯುವತಿ ಬಿದ್ದು ಅವಳೇ ವೀಡಿಯೋ ಮಾಡಿಕೊಂಡಿದ್ದಾಳೆ. ಅವಳ ಮೊಬೈಲ್‌ ವಶಪಡಿಸಿಕೊಂಡು ಪರಿಶೀಲಿಸಿದರೆ ಎಲ್ಲವೂ ಬಹಿರಂಗವಾಗಲಿದೆ. ಯುವತಿಯು ತುಂಬಾ ಒಳ್ಳೆಯವಳು. ಅವಳಿಗೆ ಈ ರೀತಿ ಹೇಳುವಂತೆ ಅವರ ತಂದೆ-ತಾಯಿ, ಕೆಲವರು ಒತ್ತಾಯಿಸಿದ್ದಾರೆ. ಹಾಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾಳೆ ಎಂದು ಆರೋಪಿಸಿದರು.

ಲವ್‌ ಜಿಹಾದ್‌ ಮಾಡಿಲ್ಲ: ತೈಸಿಮ್‌

ಯುವತಿಯ ಮನೆಯವರು ನಮ್ಮೊಂದಿಗೆ ಮೊದಲಿನಿಂದಲೂ ಪರಿಚಿತರು. ನಮ್ಮ ಮನೆಯ ಎಲ್ಲ ಕಾರ್ಯಕ್ರಮಗಳಿಗೆ ಯುವತಿ ಹಾಗೂ ಅವರ ತಂದೆ-ತಾಯಿ ಬಂದಿದ್ದಾರೆ. ನಮ್ಮ ಮನೆಯವರೆಲ್ಲರೂ ಪ್ರವಾಸಕ್ಕೆ ಹೋಗುವಾಗ ಯುವತಿಯ ತಂದೆಯೇ ಅವರ ವಾಹನದಲ್ಲಿ ಮಗಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾರೆ. ಯುವತಿಯೇ ಪದೇ ಪದೇ ನನ್ನ ಸಹೋದರನಿಗೆ ಕರೆ ಮಾಡುತ್ತಿದ್ದಳು. ಯುವತಿ ಈ ರೀತಿಯ ಆರೋಪ ಮಾಡುವುದನ್ನು ನಿಲ್ಲಿಸಲಿ. ನಮ್ಮ ಮನೆಯಲ್ಲೂ ಹಿಂದೂಗಳ ಎಲ್ಲ ಹಬ್ಬ ಆಚರಿಸುತ್ತೇವೆ. ನಮ್ಮಲ್ಲಿ ಯಾವುದೇ ಭೇದ-ಭಾವವಿಲ್ಲ. ನನ್ನ ಸಹೋದರ ಯಾವುದೇ ರೀತಿಯಲ್ಲಿ ಲವ್ ಜಿಹಾದ್‌ ಮಾಡಿಲ್ಲ ಎಂದು ಸಮೀರ್‌ನ ಸಹೋದರಿ ತೈಸಿಮ್‌ ಹೇಳಿದ್ದಾಳೆ.

ದೂರು- ಪ್ರತಿದೂರು ದಾಖಲುಸಮೀರ್‌ನ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದರೆ, ನನ್ನ ಸಹೋದರನ ಮೇಲೆ ಸುಳ್ಳು ಆರೋಪ ಮಾಡಿ ಮನೆಗೆ ಬಂದು ಅವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಿಡ್ನ್ಯಾಪ್‌ ಮಾಡಿದ್ದಾರೆ ಎಂದು ಸಮೀರ್‌ ಸಹೋದರಿ ತೈಸಿಮ್‌ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್‌ 6ರಂದು ಹಾವೇರಿ ವಿವಿ ಘಟಿಕೋತ್ಸವ, 8 ವಿದ್ಯಾರ್ಥಿಗಳಿಗೆ ಸುವರ್ಣ ಪದಕ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಮುಖ್ಯ