ಹುಬ್ಬಳ್ಳಿ:
ಜಿಮ್‌ಗೆ ಬರುತ್ತಿದ್ದ ಯುವತಿಯರನ್ನು ತಮ್ಮ ಸಹೋದರನಿಗೆ ತೆಹಸೀನ್ ಪರಿಚಯ ಮಾಡಿಕೊಡುತ್ತಿದ್ದಳು ಎಂಬ ಆರೋಪವೂ ಕೇಳಿಬಂದಿದ್ದು, ಸ್ವತಃ ಸಂತ್ರಸ್ತೆಯೇ ಮಾಹಿತಿ ನೀಡಿದ್ದಾಳೆ. ಈ ಕುರಿತು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲವ್ ಜಿಹಾದ್ ಆರೋಪ ಕೇಳಿ ಬರುತ್ತಿದ್ದಂತೆ ತೆಹಸೀನ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಸಂತ್ರಸ್ತೆ ಹಲವೆಡೆ ಪ್ರವಾಸ, ಪಾರ್ಟಿ ಮಾಡಿರುವ ವೀಡಿಯೋಗಳು ವೈರಲ್ ಆಗಿವೆ. ತಹಸೀನ್ ಮುಲ್ಲಾ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ವೈದ್ಯಕೀಯ ತಪಾಸಣೆ:ವಿದ್ಯಾನಗರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಶನಿವಾರ ಸಂತ್ರಸ್ತೆಗೆ ಕೆಎಂಸಿಆರ್‌ಐನ ನಿರ್ಭಯಾ ವಿಶೇಷ ವಾರ್ಡ್‌ನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆ ವೈದ್ಯರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಕೌನ್ಸೆಲಿಂಗ್ ಮಾಡಲಾಗಿದೆ.
ಸಂತ್ರಸ್ತೆಯೊಂದಿಗೆ ಹಲವು ಬಾರಿ ಲೈಂಗಿಕ ಸಂಪರ್ಕ ಮಾಡಿರುವ ಆರೋಪಿ ಸಮೀರ್ ಮುಲ್ಲಾ, ಲೈಂಗಿಕ ಸಂಪರ್ಕದ ಬಳಿಕ ಗರ್ಭಪಾತದ ಮಾತ್ರೆ ನೀಡಿ, ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಈಗಾಗಲೇ ಸಂತ್ರಸ್ತೆಗೆ 8ರಿಂದ 10 ಬಾರಿ ಮಾತ್ರೆ ನೀಡಿದ್ದಾನೆ. ಅದನ್ನು ಸೇವಿಸಲು ನಿರಾಕರಿಸಿದಾಗ ಜೀವ ಬೆದರಿಕೆ ಹಾಗೂ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ. ಗರ್ಭಪಾತದ ಮಾತ್ರೆ ಸೇವಿಸುವುದನ್ನು ವೀಡಿಯೋ ಮಾಡಿ ಕಳಿಸಿಕೊಡುವಂತೆ ಸಹ ಒತ್ತಡ ಹಾಕಿದ್ದನು ಎಂಬ ಆರೋಪವೂ ಕೇಳಿ ಬಂದಿವೆ. ಇದಕ್ಕೆ ಪುಷ್ಟಿ ನೀಡುವಂತೆ ವೀಡಿಯೋ ಸಹ ವೈರಲ್ ಆಗಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಸಂತ್ರಸ್ತೆಯ ದೂರಿನ್ವಯ ಆರೋಪಿ ಹಾಗೂ ಸಂಬಂಧಿಸಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸಂತ್ರಸ್ತೆ ಹೇಳಿಕೆ ಪ್ರಕಾರ, ಸಮೀರ್ ಸಹೋದರಿ ಹಾಗೂ ಅವರ ಪತಿ ಯುವತಿಗೆ, ಸಮೀರ್ ಜತೆಯೇ ಇರುವಂತೆ ಒತ್ತಡ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ. ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಬಾಕ್ಸ್...
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯಲ್ಲಿ 3 ಹಾಗೂ ಅಶೋಕ ನಗರ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಸಂತ್ರಸ್ತೆಯು ಕಳೆದ 16-8-2025ರಂದು ಆರೋಪಿ ಸಮೀರ್ ಕಾಲೇಜಿನಲ್ಲಿದ್ದಾಗ ಜಿಮ್‌ಗೆ ಹೋಗೋಣ ಎಂದು ಹೇಳಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿ ಪ್ರಜ್ಞಾಹೀನಳಾಗಿದ್ದ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸಮೀರ್ ವಿರುದ್ಧ ಪ್ರಕರಣ ದಾಖಲಿಸಿದ್ದರೆ, ಸಂತ್ರಸ್ತೆ ತಂದೆ-ತಾಯಿ, ತಮ್ಮ ಮನೆಗೆ ಬಂದು ಅವಾಚ್ಯವಾಗಿ ಬೈದು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಸಮೀರ್ ಸಹೋದರಿ ತಹಸೀನ್ ಮುಲ್ಲಾ, ಲೂಕ್, ಸೈಪ್, ಗೌತಮ್, ರುಕ್ಸಾರ್, ಅಜೀಂ ಒಟ್ಟು 6 ಜನರ ವಿರುದ್ಧ ದಾಖಲಿಸಿದ್ದಾರೆ.
ಹಲವರ ವಿಚಾರಣೆ:ಹಲ್ಲೆಗೊಳಗಾಗಿ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮುಲ್ಲಾ ಅವರನ್ನು ಆಸ್ಪತ್ರೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಸಂಜೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಂದಿಯನ್ನು ವಶಕ್ಕೆ ಪಡೆದು, ಕೆಲವು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಮುಖ ಆರೋಪಿ ಹಾಗೂ ಇನ್ನು ಕೆಲವರ ಮೊಬೈಲ್ ಹಾಗೂ ಇನ್ನಿತರ ಸಾಕ್ಷ್ಯ ಸಂಗ್ರಹಿಸಿದ್ದಾರೆ.