ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅಧಿಕಾರಿಗಳು ಹೊಣೆ: ಶಾಸಕ ಭೀಮಣ್ಣ

KannadaprabhaNewsNetwork | Published : Mar 13, 2024 2:03 AM

ಸಾರಾಂಶ

ಶಿಕ್ಷಣದ ಮೇಲೆ ಬೇಜವಬ್ದಾರಿ ವಹಿಸಿದರೆ ನೇರ ಹೊಣೆ ಅನುಭವಿಸಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಶಾಸಕ ಭೀಮಣ್ಣ ನಾಯ್ಕ ಅವರು ತರಾಟೆಗೆ ತೆಗೆದುಕೊಂಡರು.

ಶಿರಸಿ: ಶಿಕ್ಷಣ ಇಲಾಖೆಗೆ ಸರ್ಕಾರ ಸಾಕಷ್ಟು ಅನುದಾನ ಜತೆ ಸೌಲಭ್ಯ ನೀಡುತ್ತಿದೆ. ಪ್ರಸಕ್ತ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಕ್ಷೇತ್ರ ಶಿಕ್ಷಣಾಧಿಕಾರಿ, ಬಿಆರ್‌ಸಿ ಮತ್ತು ಸಿಆರ್‌ಪಿಗಳನ್ನು ನೇರ ಹೊಣೆ ಮಾಡುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಎಚ್ಚರಿಕೆ ನೀಡಿದರು.

ಮಂಗಳವಾರ ನಗರದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ, ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳನ್ನು ಎಚ್ಚರಿಸಿದರು.

ಸಿಆರ್‌ಪಿ ಮತ್ತು ಬಿಆರ್‌ಪಿಗಳು ಶಾಲೆಗೆ ಭೇಟಿ ನೀಡದೇ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಕೆಲ ಶಾಲೆಗೆ ಭೇಟಿ ನೀಡಿದಾಗ ಸಂದರ್ಶನ ಪಟ್ಟಿಯಿಂದ ತಿಳಿದು ಬಂದಿದೆ. ಶಿಕ್ಷಣದ ಮೇಲೆ ಬೇಜವಬ್ದಾರಿ ವಹಿಸಿದರೆ ನೇರ ಹೊಣೆ ಅನುಭವಿಸಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮಂಗನಕಾಯಿಲೆ ಕುರಿತು ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸಬೇಕು. ಮಂಗಗಳು ಸಾವಿಗೀಡಾದರೆ ಅರಣ್ಯ ಇಲಾಖೆಯು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ಮರಣೋತ್ತರ ಪರೀಕ್ಷೆ ನಡೆಸಬೇಕು. ಅಲ್ಲದೇ, ಸಾರ್ವಜನಿಕರು ಕೃಷಿ ಕಾರ್ಯಕ್ಕೆ ಅರಣ್ಯ ಪ್ರದೇಶಕ್ಕೆ ತೆರಳುವ ಮುನ್ನ ರೋಗ ಪ್ರತಿಬಂಧಕ ಎಣ್ಣೆ ಹಚ್ಚಿಕೊಂಡು ತೆರಳಲು ತಿಳಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ಟ ಮಾಹಿತಿ ನೀಡಿ, ತಾಲೂಕಿನ ಹತ್ತರಗಿ ಭಾಗದಲ್ಲಿ ೩೧ ಜನರ ರಕ್ತ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿದೆ. ಎಲ್ಲರದ್ದೂ ನೆಗೆಟಿವ್ ಬಂದಿದ್ದು, ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ತಾಲೂಕಿನಲ್ಲಿ ಈ ವರೆಗೆ ಒಂದು ಮರಣದ ಪ್ರಕರಣ ದಾಖಲಾಗಿದೆ. ಇನ್ನೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಡೇಫಾ ಆಯಿಲ್ ೩ ಸಾವಿರ ದಾಸ್ತಾನಿದೆ. ದಾಸನಕೊಪ್ಪ ಹೊರತಾಗಿ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕವಾಗಿದೆ. ಜಾತ್ರೆಯ ವಿಶೇಷವಾಗಿ ₹೧ ಲಕ್ಷ ಔಷಧಿ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆರೋಗ್ಯ ರಕ್ಷಾ ಸಮಿತಿಯ ಮೂಲಕ ಲ್ಯಾಬ್ ನಿರ್ಮಾಣಕ್ಕೆ ₹೧೦ ಲಕ್ಷ ಅನುದಾನ ಬೇಕಿದ್ದು, ಅನುದಾನ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದರು.

ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಜಾನನ ಭಟ್ಟ ಮಾತನಾಡಿ, ಜಿಲ್ಲಾ ಶಸ್ತ್ರಚಿಕಿತ್ಸೆ ವಸತಿಗೃಹ ನಿರ್ಮಾಣವಾಗಬೇಕು. ಉಳಿದಂತೆ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಿದ್ದು, ಪ್ರತಿನಿತ್ಯ ೨೫ ಸಾವಿರ ಲೀಟರ್ ನೀರು ಅಗತ್ಯವಿದೆ. ೩ ಬೋರ್‌ವೆಲ್ ಕೊರೆಸಿದಾಗ ೧ರಲ್ಲಿ ಮಾತ್ರ ನೀರು ಬಂದಿದೆ ಎಂದರು.

ತೋಟಗಾರಿಕಾ ಉಪನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ಬೇಸಿಗೆಯಲ್ಲಿ ತೋಟಗಳಿಗೆ ಬೆಂಕಿ ಬೀಳುವ ಸಾಧ್ಯತೆಯಿದೆ. ಮುನ್ನೆಚ್ಚರಿಕೆ ಕ್ರಮ ವಹಿಸಲು ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ೩ ಬೆಂಕಿ ಪ್ರಕರಣ ದಾಖಲಾಗಿದೆ ಎಂದರು.

ಶಿರಸಿ ಸಾರಿಗೆ ಘಟಕ ವ್ಯವಸ್ಥಾಪಕ ಸರ್ವೇಶ ನಾಯ್ಕ ಮಾತನಾಡಿ, ಶಿರಸಿ ಡಿಪೋಗೆ ೫ ಬಸ್ ಬಂದಿದೆ. ಜಾತ್ರೆಯೊಳಗೆ ೮ ಬಸ್ ಬರಲಿದೆ. ವಡ್ಡಿ ಮಾರ್ಗದ ಗೋಕರ್ಣಕ್ಕೆ ಹೊಸ ಮಾರ್ಗ ಆರಂಭಿಸಲಾಗಿದ್ದು, ಪ್ರಯಾಣಿಕರ ಕೊರತೆಯಿಂದ ನಷ್ಟದಲ್ಲಿ ಬಸ್ ಒಡುತ್ತಿದೆ. ಬಸ್‌ನ ಸಮಯ ಬದಲಾವಣೆ ಮಾಡಿ ಲಾಭದಲ್ಲಿ ತರುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ಜಾತ್ರೆಗೆ ೨೦೦ ಬಸ್ ಬೇರೆ ಘಟಕದಿಂದ ತೆಗೆದುಕೊಳ್ಳಲಾಗುತ್ತದೆ. ಪ್ರಯಾಣಿಕೆ ಲಭ್ಯತೆಯ ಮೇಲೆ ಬಸ್ ವ್ಯವಸ್ಥೆ ಮಾಡಿ, ಜಾತ್ರೆಗೆ ಆಗಮಿಸಲು ಭಕ್ತಾದಿಗಳಿಗೆ ಅನುಕೂಲ ಮಾಡಲಾಗುತ್ತದೆ ಎಂದರು.

ಗ್ರೇಡ್ ೨ ತಹಸೀಲ್ದಾರ್‌ ರಮೇಶ ಹೆಗಡೆ, ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಇದ್ದರು.ಅಕ್ರಮ ಚಟುವಟಿಕೆಗೆ ಕಟ್ಟುನಿಟ್ಟಾಗಿ ಕ್ರಮ ವಹಿಸಿ

ನಗರದಲ್ಲಿ ನಡೆಯುತ್ತಿರುವ ಇಸ್ಪೀಟ್ ಕ್ಲಬ್ ಮೇಲೆ ನಿಗಾ ವಹಿಸಬೇಕು. ಅಕ್ರಮವಾಗಿ ನಡೆಯುತ್ತಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಟಕಾ, ಇಸ್ಪೀಟ್ ದಂಧೆಗೆ ಕಡಿವಾಣ ಹಾಕಬೇಕು ಎಂದು ಸಿಪಿಐ ಶಶಿಕಾಂತ ವರ್ಮಾಗೆ ಭೀಮಣ್ಣ ನಾಯ್ಕ ಸೂಚನೆ ನೀಡಿದರು.

ಸಾವಯವ ಗೊಬ್ಬರದ ಕಂಪನಿಗಳು ಪ್ರಚಾರ ಮಾಡಿಕೊಂಡು ಹಣದ ಆಸೆಗೆ ಬೀಳುತ್ತಾರೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಆ ಗೊಬ್ಬರಗಳ ಸ್ಯಾಂಪಲ್ ಪಡೆದು ಲ್ಯಾಬ್‌ಗೆ ಕಳುಹಿಸಿ, ರೈತರು ಮೋಸ ಹೋಗುವುದನ್ನು ತಡೆಯಬೇಕು ಎಂದರು.

Share this article